ವಧುವಿನ ಸರ್ಕಾರಿ ಕೆಲಸ ತಾತ್ಕಾಲಿಕ ಎಂದು ತಿಳಿದ ಬಳಿಕ ವರನು ಮದುವೆ ರದ್ದು ಮಾಡಿರುವ ಘಟನೆ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ಮ್ಯಾಟ್ರಿಮೋನಿ ವೇದಿಕೆಯ ಮೂಲಕ ಆರಂಭವಾದ ಮದುವೆ ಮಾತುಕತೆ ಮುರಿದು ಬಿದ್ದ ಬಳಿಕ ವರನ ಪರ, ವಧುವಿನ ಪರವಾಗಿ ನೆಟ್ಟಿಗರು ಚರ್ಚೆಗೆ ಇಳಿದಿದ್ದಾರೆ.
ಈ ಘಟನೆಯು Reddit ವೇದಿಕೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಿಂದ ಬೆಳಕಿಗೆ ಬಂದಿದೆ. Reddit ಬಳಕೆದಾರರೊಬ್ಬರು “ವೈವಾಹಿಕ ನಿರೀಕ್ಷೆಗಳು ವಾಸ್ತವಕ್ಕೆ ಹೊಂದಿಕೆಯಾಗದಿದ್ದಾಗ” ಎಂಬ ಶೀರ್ಷಿಕೆಯಡಿ ತಮ್ಮ ಸ್ನೇಹಿತನಿಗೆ ಎದುರಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ವಧುವಿನ ಹೆಗಲಿಗೆ ವರನ ಶಿಕ್ಷಣ ಶುಲ್ಕ, ಇಎಂಐ: ಈಗ ಹೆಣ್ಣಿನ ಸಂಬಳವೇ ವರದಕ್ಷಿಣೆ!
ಯುವತಿಯು ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿದ್ದು, ರಾಜ್ಯ ಸರ್ಕಾರದ ಹುದ್ದೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಆ ಹುದ್ದೆಯು ತಾತ್ಕಾಲಿಕವಾಗಿದ್ದು (ಖಾಯಂ ಅಲ್ಲ), ಈ ವಿಚಾರವನ್ನು ಆರಂಭದಲ್ಲಿ ಪ್ರೊಫೈಲ್ನಲ್ಲಿ ಸ್ಪಷ್ಟವಾಗಿ ನಮೂದಿಸಿರಲಿಲ್ಲ ಎನ್ನಲಾಗಿದೆ.
ಯುವತಿಯ ಕುಟುಂಬ ಕಳುಹಿಸಿದ ಪ್ರಸ್ತಾವನೆಯನ್ನು ಯುವಕನ ಕಡೆಯವರು ಒಪ್ಪಿಕೊಂಡಿದ್ದರು. ಯುವಕನ ಪ್ರೊಫೈಲ್ ಸರಳವಾಗಿದ್ದು, ಕೇವಲ ಸರ್ಕಾರಿ ನೌಕರ ಎಂದು ಮಾತ್ರ ಬರೆಯಲಾಗಿತ್ತು. ಎತ್ತರ ಸುಮಾರು 5.5 ಅಡಿ ಎಂದು ನಮೂದಿಸಲಾಗಿತ್ತು. ವಾಸ್ತವದಲ್ಲಿ ಆತ ಪ್ರತಿಷ್ಠಿತ ಕಾಲೇಜಿನ ಎಂಜಿನಿಯರಿಂಗ್ ಪದವಿ ಮತ್ತು ವಿದೇಶದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ISRO ವಿಜ್ಞಾನಿಯಾಗಿದ್ದರು ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.
ಮಾತುಕತೆ ವೇಳೆ ಯುವತಿಯು ವರನ ಸಂಬಳದ ವಿವರ ಕೇಳುವುದರ ಜತೆಗೆ, ನಿರ್ದಿಷ್ಟ ವೇತನ, ಸ್ವಂತ ಮನೆ, ಸ್ವಂತ ಕಾರು ಮತ್ತು ಎತ್ತರದ ವ್ಯಕ್ತಿತ್ವದಂತಹ ನಿರೀಕ್ಷೆಗಳನ್ನು ಮುಂದಿಟ್ಟಿದ್ದರು ಎನ್ನಲಾಗಿದೆ. ಆರಂಭದಲ್ಲಿ ಮಾತುಕತೆ ಸುಸೂತ್ರವಾಗಿ ಸಾಗಿ ನಿಶ್ಚಿತಾರ್ಥದ ದಿನಾಂಕವೂ ನಿಗದಿಯಾಗಿತ್ತು.
ನಂತರದ ಹಂತದಲ್ಲಿ ಯುವತಿಯ ಸರ್ಕಾರಿ ಕೆಲಸ ತಾತ್ಕಾಲಿಕವಾಗಿದ್ದು, ಖಾಯಂ ಹುದ್ದೆಗಾಗಿ ಪ್ರಯತ್ನಿಸುತ್ತಿರುವ ವಿಚಾರ ವರನ ಕುಟುಂಬಕ್ಕೆ ತಿಳಿದುಬಂದಿದೆ. ಆರಂಭದಲ್ಲೇ ಈ ವಿಚಾರವನ್ನು ಮುಚ್ಚಿಟ್ಟಿರುವುದು ಮತ್ತು ಮಾತುಕತೆಯಲ್ಲಿ ಒಮ್ಮತ ಮೂಡದ ಕಾರಣ ವರನ ಕಡೆಯವರು ಮದುವೆ ಪ್ರಸ್ತಾವನೆಯನ್ನು ಕೈಬಿಟ್ಟಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ | ನಾಪತ್ತೆಯಾದ ವಧುವಿಗಾಗಿ ಮಂಟಪದಲ್ಲೇ 13 ದಿನ ಕಾದು ವಿವಾಹವಾದ ವರ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ Reddit ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಪಾರದರ್ಶಕತೆ, ಆರ್ಥಿಕ ನಿರೀಕ್ಷೆಗಳು ಮತ್ತು ಮದುವೆ ಮಾತುಕತೆಗಳ ಕುರಿತು ಪರ-ವಿರೋಧದ ಚರ್ಚೆಗಳು ನಡೆದಿವೆ. ಅನೇಕ ಬಳಕೆದಾರರು ವರನ ಕುಟುಂಬದ ನಿರ್ಧಾರವನ್ನು ಸಮರ್ಥಿಸಿದ್ದಾರೆ. ಆರಂಭದಲ್ಲೇ ಉದ್ಯೋಗದ ಸ್ಥಿತಿಗತಿಯನ್ನು ಸ್ಪಷ್ಟವಾಗಿ ತಿಳಿಸದಿರುವುದು ಸಂಬಂಧದ ಅಡಿಪಾಯದಲ್ಲಿ ನಂಬಿಕೆಯ ಕೊರತೆಯನ್ನು ಉಂಟುಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತಾವು ತಾತ್ಕಾಲಿಕ ಹುದ್ದೆಯಲ್ಲಿದ್ದು, ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವಾಗ ಸ್ವಂತ ವಿಚಾರದಲ್ಲೂ ಪ್ರಾಮಾಣಿಕತೆ ಅಗತ್ಯ ಎಂದು ಕೆಲವರು ಬರೆದಿದ್ದಾರೆ.
ವರನು ತನ್ನ ಪ್ರೊಫೈಲ್ನಲ್ಲಿ ಹೆಚ್ಚಿನ ವಿವರಗಳನ್ನು ತೋರಿಸಿಕೊಳ್ಳದೆ ಸರಳವಾಗಿ ಇದ್ದು, ವಾಸ್ತವದಲ್ಲಿ ಉನ್ನತ ಹುದ್ದೆಯಲ್ಲಿದ್ದುದು ಗಮನ ಸೆಳೆದಿದೆ ಎಂದು ಕೆಲ ಬಳಕೆದಾರರು ಉಲ್ಲೇಖಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರೊಫೈಲ್ನಲ್ಲಿ ಸ್ಪಷ್ಟ ಮಾಹಿತಿ ಇಲ್ಲದಿದ್ದಾಗ ಭಿನ್ನಾಭಿಪ್ರಾಯಗಳು ಸಹಜ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಮತ್ತೊಂದೆಡೆ, ಕೆಲ ಬಳಕೆದಾರರು ಕೇವಲ ಒಬ್ಬರ ಕಡೆಯ ವಿವರವನ್ನು ಆಧರಿಸಿ ತಕ್ಷಣದ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ. ಮದುವೆ ಮಾತುಕತೆ ಮುರಿಯಲು ಹಲವು ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿರಬಹುದು. ಪೂರ್ಣ ವಿವರಗಳಿಲ್ಲದೆ ಯಾರನ್ನೂ ತಪ್ಪಿತಸ್ಥರೆಂದು ನಿರ್ಣಯಿಸುವುದು ಸೂಕ್ತವಲ್ಲ ಎಂಬ ಧ್ವನಿಯೂ ಕೇಳಿಬಂದಿದೆ.



