ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ‘ವೈವಾಹಿಕ ಅತ್ಯಾಚಾರ’ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಹಲವು ಅರ್ಜಿಗಳ ಅಂತಿಮ ವಿಚಾರಣೆಯನ್ನು ಡಿಸೆಂಬರ್ ತಿಂಗಳಿನಲ್ಲಿ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ.
ಬೇರೆ ಪ್ರಕರಣವೊಂದರ ವಿಚಾರಣೆಯು ಇನ್ನೂ ಪೂರ್ಣಗೊಳ್ಳದ ಕಾರಣ, ಇಂದು (ಗುರುವಾರ) ವೈವಾಹಿಕ ಅತ್ಯಾಚಾರ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ನೇತೃತ್ವದ ಪೀಠವು ಸ್ಪಷ್ಟಪಡಿಸಿತು. ಈ ವೇಳೆ, ಡಿಸೆಂಬರ್ 2-3 ಅಥವಾ ಡಿಸೆಂಬರ್ 9-10 ರಂದು ಈ ಅರ್ಜಿಗಳನ್ನು ಅಂತಿಮ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಪೀಠ ಹೇಳಿದೆ.
ಇದನ್ನೂ ಓದಿ: ವೈವಾಹಿಕ ಅತ್ಯಾಚಾರ: ಬಲವಂತದ ಲೈಂಗಿಕ ಕ್ರಿಯೆಗೆ ಒಳಗಾದ ಪತ್ನಿ ‘ನಿಸ್ಸಂದೇಹವಾಗಿ ಸಂತ್ರಸ್ತೆ’; ಸುಪ್ರೀಂ ಕೋರ್ಟ್
ಡಿಸೆಂಬರ್ 21 ರಿಂದ ಸುಪ್ರೀಂ ಕೋರ್ಟ್‌ಗೆ ಚಳಿಗಾಲದ ರಜೆ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಈ ಪ್ರಕರಣದ ವಿಚಾರಣೆಯನ್ನು ನಡೆಸಲು ಪ್ರಯತ್ನಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. ಅರ್ಜಿದಾರರ ಪರ ವಕೀಲರು ಡಿಸೆಂಬರ್ 9 ಮತ್ತು 10 ರಂದು ವಿಚಾರಣೆ ನಿಗದಿಪಡಿಸುವಂತೆ ಪೀಠಕ್ಕೆ ಮನವಿ ಮಾಡಿದ್ದಾರೆ.
ಈ ಹಿಂದಿನ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 375ರ ವಿನಾಯಿತಿ-2 ಮತ್ತು ಪ್ರಸ್ತುತ ಜಾರಿಯಲ್ಲಿರುವ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 63ರ ವಿನಾಯಿತಿ-2ರ ಅಡಿಯಲ್ಲಿ, ಪತ್ನಿಯು ಅಪ್ರಾಪ್ತಳಲ್ಲದಿದ್ದರೆ (18 ವರ್ಷ ಮೇಲ್ಪಟ್ಟಿದ್ದರೆ) ಪತಿಯು ಆಕೆಯೊಂದಿಗೆ ನಡೆಸುವ ಲೈಂಗಿಕ ಕ್ರಿಯೆಯು ಅತ್ಯಾಚಾರದ ವ್ಯಾಪ್ತಿಗೆ ಬರುವುದಿಲ್ಲ. ಪತಿಯಂದಿರಿಗೆ ನೀಡಲಾಗಿರುವ ಈ ಕಾನೂನು ವಿನಾಯಿತಿಯು ಸಂವಿಧಾನಬಾಹಿರವಾಗಿದ್ದು, ಮಹಿಳೆಯರ ಸಮಾನತೆ (ವಿಧಿ 14) ಮತ್ತು ಘನತೆಯಿಂದ ಬದುಕುವ ಹಕ್ಕನ್ನು (ವಿಧಿ 21) ಉಲ್ಲಂಘಿಸುತ್ತದೆ ಎಂದು ಪ್ರಶ್ನಿಸಿ ‘ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್’ (AIDWA) ಸೇರಿದಂತೆ ಹಲವು ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಈ ವಿಚಾರವಾಗಿ 2022ರ ಮೇ 11ರಂದು ದೆಹಲಿ ಹೈಕೋರ್ಟ್‌ನ ದ್ವಿಸದಸ್ಯ ಪೀಠವು ವಿಭಜಿತ ತೀರ್ಪು ನೀಡಿತ್ತು. ನ್ಯಾಯಮೂರ್ತಿ ರಾಜೀವ್ ಶಕ್ದರ್ ಅವರು ಈ ಕಾನೂನು ವಿನಾಯಿತಿಯನ್ನು ರದ್ದುಗೊಳಿಸಬೇಕೆಂದು ತೀರ್ಪು ನೀಡಿದ್ದರೆ, ನ್ಯಾಯಮೂರ್ತಿ ಸಿ. ಹರಿಶಂಕರ್ ಅವರು ಈ ವಿನಾಯಿತಿಯನ್ನು ಎತ್ತಿಹಿಡಿದಿದ್ದರು.
ಮತ್ತೊಂದೆಡೆ, ಕರ್ನಾಟಕ ಹೈಕೋರ್ಟ್ ಕೂಡ ಪತ್ನಿಯ ಮೇಲಿನ ಅತ್ಯಾಚಾರ ಆರೋಪದಿಂದ ಪತಿಗೆ ವಿನಾಯಿತಿ ನೀಡುವುದು ಸಂವಿಧಾನದ 14ನೇ ವಿಧಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಈ ಎಲ್ಲಾ ಮೇಲ್ಮನವಿ ಮತ್ತು ರಿಟ್ ಅರ್ಜಿಗಳನ್ನು ಒಗ್ಗೂಡಿಸಿರುವ ಸುಪ್ರೀಂ ಕೋರ್ಟ್, ಇದೀಗ ಡಿಸೆಂಬರ್‌ನಲ್ಲಿ ಅಂತಿಮ ವಿಚಾರಣೆ ನಡೆಸಿ ಮಹತ್ವದ ತೀರ್ಪು ನೀಡಲು ಮುಂದಾಗಿದೆ.



