ಬಿಜೆಪಿ ಕಾರ್ಯಕರ್ತ ಮತ್ತು ಆತನ ಸಂಬಂಧಿಯೊಬ್ಬ ಸೇರಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ 20%ರಷ್ಟು ಖಚಿತ ಲಾಭ ನೀಡುವುದಾಗಿ ನಂಬಿಸಿ, 35 ಗ್ರಾಮಗಳಲ್ಲಿ 400 ಕೋಟಿ ರೂ.ಗೂ ಅಧಿಕ ಹಣ ಲೂಟಿ ಹೊಡೆದಿರುವ ಪ್ರಕರಣ ಗುಜರಾತ್ನಲ್ಲಿ ಬೆಳಕಿಗೆ ಬಂದಿದೆ. ಗುಜರಾತ್ನ ಭಾವನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಈ ವಂಚನೆ ನಡೆದಿದೆ ಎಂದು ತಿಳಿದುಬಂದಿದೆ.
ಭಾವನಗರ ಸಮೀಪದ ಫರಿಯಾದ್ಕಾ ಗ್ರಾಮದ ಬಿಜೆಪಿ ಕಾರ್ಯಕರ್ತ ಯೋಗೇಶ್ ಧಮೇಚಾ ಮತ್ತು ಆತನ ಸಂಬಂಧಿ ಸಂಜಯ್ ಧಮೇಚಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಗೆ ಒಳಪಡಿಸಿದ್ದಾರೆ
ಆರಂಭದಲ್ಲಿ ಕೆಲವೇ ಹೂಡಿಕೆದಾರರಿಗೆ ಸೀಮಿತವಾಗಿದ್ದ ಪ್ರಕರಣವು ತನಿಖೆ ಮುಂದುವರಿದಂತೆ ದೊಡ್ಡ ಪ್ರಮಾಣದ ವಂಚನೆ ಜಾಲವಾಗಿ ಬೆಳಕಿಗೆ ಬಂದಿದೆ. ಸುಮಾರು 30ರಿಂದ 35 ಗ್ರಾಮಗಳ ಜನರು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ದು, ಒಟ್ಟು ವಂಚನೆಯ ಮೊತ್ತ 300 ಕೋಟಿಯಿಂದ 400 ಕೋಟಿ ರೂ.ವರೆಗೆ ಇರಬಹುದು ಎಂದು ಸಂತ್ರಸ್ತರು ಮತ್ತು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಅಂದಾಜಿಸಿದ್ದಾರೆ. ಆದರೆ, ವಂಚನೆಯ ನಿಖರ ಮೊತ್ತ ಮತ್ತು ಸಂತ್ರಸ್ತರ ಸಂಖ್ಯೆಯು ತನಿಖೆಯ ಬಳಿಕವೇ ದೃಢಪಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದು, ತಮ್ಮ ಬಳಿ ಹೂಡಿಕೆ ಮಾಡಿದವರಿಗೆ 20%ರಷ್ಟು ಲಾಭ ನೀಡುವುದಾಗಿ ಭರವಸೆ ನೀಡುತ್ತಿದ್ದರು. ಆರಂಭದಲ್ಲಿ ಕೆಲವರಿಗೆ ಭರವಸೆಯಂತೆ ಲಾಭದ ಹಣ ಪಾವತಿಸಿದ್ದರಿಂದ ಸ್ಥಳೀಯರಲ್ಲಿ ನಂಬಿಕೆ ಹೆಚ್ಚಾಗಿತ್ತು. ಹೊಸ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಹಿಂದಿನ ಹೂಡಿಕೆದಾರರಿಗೆ ಲಾಭದ ರೂಪದಲ್ಲಿ ಪಾವತಿಸಿ, ಮತ್ತಷ್ಟು ಜನರನ್ನು ಯೋಜನೆಯತ್ತ ಸೆಳೆಯಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಫರಿಯಾದ್ಕಾ ಗ್ರಾಮದ ಆರು ಮಂದಿ ತಮಗೆ 93 ಲಕ್ಷ ರೂ. ವಂಚಿಸಲಾಗಿದೆ ಎಂದು ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಏಳು ಹೂಡಿಕೆದಾರರಿಗೆ ಸಂಬಂಧಿಸಿದ 1 ಕೋಟಿ ರೂ.ಗೂ ಹೆಚ್ಚಿನ ವಂಚನೆ ಪ್ರಕರಣ ದಾಖಲಾಗಿತ್ತು. ಬಳಿಕ, ಮತ್ತಷ್ಟು ಸಂತ್ರಸ್ತರು ಮುಂದೆ ಬಂದು ದೂರು ದಾಖಲಿಸಿದ್ದರು. ಈವರೆಗೆ, ಅಧಿಕೃತವಾಗಿ ದೂರು ದಾಖಲಿಸಿದವರ ಒಟ್ಟು ಮೊತ್ತ 1.29 ಕೋಟಿ ರೂ. ಎನ್ನಲಾಗಿದೆ. ತನಿಖೆಯ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಸುಮಾರು 100 ಮಂದಿ ತಾವು ಹಣ ಕಳೆದುಕೊಂಡಿರುವುದಾಗಿ ಅಪರಾಧ ವಿಭಾಗವನ್ನು ಸಂಪರ್ಕಿಸಿದ್ದಾರೆ ಎಂದು ‘ದಿ ವೈರ್’ ವರದಿ ಮಾಡಿದೆ.
ಬಂಧಿತರಲ್ಲಿ ಒಬ್ಬನಾದ ಯೋಗೇಶ್ ಧಮೇಚಾ ಎಂಬಾತ ಕಳೆದ ಎರಡು ವರ್ಷಗಳಿಂದ ಭಾವನಗರದಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಅಲ್ಲದೆ, ಸುಮಾರು 15 ವರ್ಷಗಳಿಂದ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ. ಮಾತ್ರವಲ್ಲದೆ, ಬಿಜೆಪಿಯಲ್ಲಿ ಇನ್ನೂ ಕೆಲವು ಅಧಿಕೃತ ಹುದ್ದೆ ಹೊಂದಿದ್ದರೆಂದು ಹೇಳಲಾಗಿದೆ. ಆದಾಗ್ಯೂ, ಇದಕ್ಕೆ ಸಂಬಂಧಿಸಿದ ಪೂರಕ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ನಗರಾಭಿವೃದ್ಧಿಯ ಹೆಸರಿನಲ್ಲಿ ಭೂ ಮಾರುಕಟ್ಟೆಯ ಪಲ್ಲಟ: JNNURM ನಂತರದ ಭಾರತದ ಕಥೆ
ಆರೋಪಿಗಳ ಪರವಾಗಿ ಹೂಡಿಕೆದಾರರನ್ನು ಕರೆತರುತ್ತಿದ್ದ ರಘುಭಾಯಿ ವಘೇಲಾ ಹೇಳಿರುವಂತೆ; “ನಮ್ಮ ಮೂಲಕ ಸುಮಾರು 20ರಿಂದ 25 ಮಂದಿ ಹಣ ಹೂಡಿಕೆ ಮಾಡಿದ್ದಾರೆ. ಅವರೆಲ್ಲರ ಸುಮಾರು 56.7 ಲಕ್ಷ ರೂ. ಹಣ ವಂಚಕರ ಬಳಿ ಸಿಲುಕಿಕೊಂಡಿದೆ. ಅದರಲ್ಲಿ ಬಹುಪಾಲು ಹಣ ಸಣ್ಣ ಮತ್ತು ಬಡ ಹೂಡಿಕೆದಾರರಿಗೆ ಸೇರಿದೆ. ಮನೆ ನಿರ್ಮಾಣ ಪೂರ್ಣಗೊಳಿಸಲು ಕೂಡಿಟ್ಟಿದ್ದ ತಮ್ಮ 7ರಿಂದ 8 ಲಕ್ಷ ರೂ. ಉಳಿತಾಯವನ್ನೂ ಅವರು ಹೂಡಿಕೆ ಮಾಡಿದ್ದರು.”
ಈ ಜಾಲದಲ್ಲಿ ಸುಮಾರು 150ಕ್ಕೂ ಹೆಚ್ಚು ಸ್ಥಳೀಯ ಏಜೆಂಟರು ಕೆಲಸ ಮಾಡುತ್ತಿದ್ದರು ಎಂದು ಅಂದಾಜಿಸಲಾಗಿದೆ. ಭಾವನಗರ, ಅವಾನಿಯಾ, ಬುಧೇಲ್, ಸೋದ್ವಾದರಾ, ಸಿದ್ಸರ್ ಮತ್ತು ವರ್ತೇಜ್ ಸೇರಿದಂತೆ 30ರಿಂದ 35 ಗ್ರಾಮಗಳ ಜನರು ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.
ಆರೋಪಿಗಳ ಬ್ಯಾಂಕ್ ಖಾತೆಗಳು, ಹಣ ವರ್ಗಾವಣೆ, ಹೂಡಿಕೆ ದಾಖಲೆಗಳು ಹಾಗೂ ಅವರೊಂದಿಗೆ ಕೆಲಸ ಮಾಡುತ್ತಿದ್ದವರ ಪಾತ್ರವನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ. ವಂಚನೆಯ ನಿಖರ ಪ್ರಮಾಣ, ಸಂಗ್ರಹಿಸಿದ ಹಣ ಎಲ್ಲಿದೆ ಹಾಗೂ ಸಂತ್ರಸ್ತರಿಗೆ ಎಷ್ಟು ಹಣ ಮರಳಿ ದೊರೆಯಬಹುದು ಎಂಬುದನ್ನು ಪತ್ತೆಹಚ್ಚುವುದು ತನಿಖಾಧಿಕಾರಿಗಳ ಮುಂದಿರುವ ಪ್ರಮುಖ ಸವಾಲಾಗಿದೆ.



