18 ಅಡಿ ಆಳದ ತೆರೆದ ಬಾವಿಯೊಂದರಲ್ಲಿ ನೀರು ಸಮುದ್ರದ ಅಲೆಗಳಂತೆ ಏರಿಳಿಯುತ್ತಿರುವ ವಿಚಿತ್ರ ವಿದ್ಯಮಾನವು ಗುಜರಾತ್‌ನ ಮೊರ್ಬಿ ಜಿಲ್ಲೆಯ ವಿರ್ಪರ್ಡಾ ಗ್ರಾಮದಲ್ಲಿ ಕಂಡುಬಂದಿದೆ. ಈ ದೃಶ್ಯ ಸ್ಥಳೀಯರಲ್ಲಿ ಕುತೂಹಲ ಮತ್ತು ಆತಂಕ ಮೂಡಿಸಿದೆ. ಆದಾಗ್ಯೂ, ಈ ವಿದ್ಯಮಾನಕ್ಕೆ ಭೂಕಂಪದ ಯಾವುದೇ ಚಟುವಟಿಕೆ ಕಾರಣವಲ್ಲ. ಭೂಕಂಪದ ಸೂಚನೆಗಳು ದಾಖಲಾಗಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಗ್ರಾಮದ ಹೆದ್ದಾರಿ ಸಮೀಪದ ಕೃಷಿ ಜಮೀನಿನಲ್ಲಿರುವ ಈ ಬಾವಿ ಇತ್ತೀಚಿನ ಭಾರಿ ಮಳೆಯಿಂದ ಸಂಪೂರ್ಣ ತುಂಬಿತ್ತು. ನಂತರ, ಬಾವಿಯಲ್ಲಿ ಇದ್ದಕ್ಕಿದ್ದಂತೆ ನೀರು ಅಲೆಗಳಂತೆ ಉಕ್ಕಲಾರಂಭಿಸಿದೆ. ಕೆಲವೊಮ್ಮೆ ಹೊರಗೂ ಚಿಮ್ಮುತ್ತಿದೆ. ಸುತ್ತಮುತ್ತಲಿನ ಇತರೆ ಬಾವಿಗಳಲ್ಲಿ ನೀರು ಶಾಂತವಾಗಿದ್ದರೂ, ಈ ಬಾವಿಯಲ್ಲಿ ಮಾತ್ರ ನಿರಂತರ ಚಲನೆ ಕಂಡುಬರುತ್ತಿದೆ. ಈ ದೃಶ್ಯದ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿವೆ.
ಆರಂಭದಲ್ಲಿ ಇದು ಭೂಕಂಪದ ಮುನ್ಸೂಚನೆ ಇರಬಹುದು ಎಂಬ ಆತಂಕ ಸ್ಥಳೀಯರಲ್ಲಿ ವ್ಯಕ್ತವಾಗಿತ್ತು. ಆದರೆ, ಸ್ಥಳಕ್ಕೆ ಭೇಟಿ ನೀಡಿದ ಮೊರ್ಬಿ ಜಿಲ್ಲಾ ಭೂವಿಜ್ಞಾನಿ ಜೆ.ಎಸ್. ವಧೇರ್, “ಇದೊಂದು ಸಹಜ ಜಲವೈಜ್ಞಾನಿಕ ಪ್ರಕ್ರಿಯೆ” ಎಂದು ತಿಳಿಸಿದ್ದಾರೆ. ಗಾಂಧಿನಗರದ ಇನ್‌ಸ್ಟಿಟ್ಯೂಟ್ ಆಫ್ ಸೀಸ್ಮೋಲಾಜಿಕಲ್ ರಿಸರ್ಚ್ ಕೂಡ ಈ ಭಾಗದಲ್ಲಿ ಯಾವುದೇ ಭೂಕಂಪನ ಚಟುವಟಿಕೆ ದಾಖಲಾಗಿಲ್ಲ ಎಂದು ಖಚಿತಪಡಿಸಿದೆ.
ತಜ್ಞರ ಪ್ರಕಾರ, ಈ ವಿದ್ಯಮಾನವನ್ನು ಜಲವಿಜ್ಞಾನದಲ್ಲಿ ‘ವೆಲ್ ಸೈಶ್’ ಎಂದು ಕರೆಯಲಾಗುತ್ತದೆ. ಭಾರೀ ಮಳೆಯಿಂದ ಭೂಗರ್ಭದ ನೀರಿನ ಮಟ್ಟ ಏಕಾಏಕಿ ಏರಿದಾಗ, ಬಂಡೆಗಳ ರಂಧ್ರಗಳಲ್ಲಿ ಸಿಲುಕಿರುವ ಗಾಳಿಯ ಮೇಲೆ ಒತ್ತಡ ಉಂಟಾಗುತ್ತದೆ. ನೀರು ಒಳನುಗ್ಗುವ ವೇಳೆ ಆ ಗಾಳಿ ಹೊರಬರಲು ಯತ್ನಿಸುವುದರಿಂದ ಬಾವಿಯ ಕೆಳಭಾಗದಲ್ಲಿ ಜಲಸ್ಥಿತಿಯ ಒತ್ತಡ ಸೃಷ್ಟಿಯಾಗಿ, ನೀರು ಅಲೆಗಳಂತೆ ಮೇಲೇರಿ ಕೆಳಗಿಳಿಯುತ್ತದೆ ಎಂದು ಭೂವಿಜ್ಞಾನಿಗಳು ವಿವರಿಸಿದ್ದಾರೆ.
#WATCH | Morbi, Gujarat: An unusual incident has been reported in Virparda village, Morbi taluka, where a farm well has been showing wave-like movement. The District Collector has ordered a detailed report from the groundwater research team.
— ANI (@ANI) August 7, 2026
Collector Swapnil Khare says, "…… pic.twitter.com/hnFamPfBoW
ಈ ಘಟನೆ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಮೊರ್ಬಿ ಜಿಲ್ಲಾಧಿಕಾರಿ ಸ್ವಪ್ನಿಲ್ ಖರೆ ಅವರು ಗ್ರೌಂಡ್ ವಾಟರ್ ರಿಸರ್ಚ್ ಇನ್‌ಸ್ಟಿಟ್ಯೂಟ್ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಮೂಢನಂಬಿಕೆ ಅಥವಾ ವದಂತಿಗಳಿಗೆ ಅವಕಾಶ ನೀಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಬಾವಿಯ ಮಾಲೀಕ ಪ್ರಾಣಜೀವನ್ ಸದಾರಿಯಾ ಮಾತನಾಡಿ, “ಆಗಸ್ಟ್ 2ರಂದು ಹೊಲಕ್ಕೆ ಬಂದಾಗ ಬಾವಿಯ ನೀರು ಅಲೆಗಳಂತೆ ಏರಿಳಿಯುತ್ತಿದ್ದು, ಹೊರಗೂ ಉಕ್ಕುತ್ತಿರುವುದು ಕಂಡುಬಂದಿತು. ಅಂದಿನಿಂದ ಇದೇ ಸ್ಥಿತಿ ಮುಂದುವರಿದಿದೆ. ಸುಮಾರು ಮೂರು ತಿಂಗಳ ಹಿಂದಷ್ಟೇ ಈ ಬಾವಿಯನ್ನು ನಿರ್ಮಿಸಲಾಗಿತ್ತು” ಎಂದು ತಿಳಿಸಿದ್ದಾರೆ.



