ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳಿಗೆ 2021ರಿಂದ 2026ರ ಈವರೆಗಿನ ಅವಧಿಯಲ್ಲಿ ಬರೋಬ್ಬರಿ ಒಟ್ಟು 557.51 ಕೋಟಿ ರೂ. ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಪೈಕಿ, 2025ರಲ್ಲೇ 187 ಕೋಟಿ ರೂ. ಖರ್ಚಾಗಿದೆ. ಅಲ್ಲದೆ, 2026ರ ಈ 7 ತಿಂಗಳುಗಳಲ್ಲಿ ಈಗಾಗಲೇ 74.58 ಕೋಟಿ ರೂ. ವೆಚ್ಚ ಮಾಡಲಾಗಿದೆ.
ರಾಜ್ಯಸಭೆಯಲ್ಲಿ ಸಂಸದರಾದ ಸಂಜಯ್ ಸಿಂಗ್ ಮತ್ತು ವಿ. ಶಿವದಾಸನ್ ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ ಲಿಖಿತ ಉತ್ತರ ನೀಡಿದ್ದಾರೆ.
ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, 2021ರಿಂದ 2024ರ ಅವಧಿಯಲ್ಲಿ ಪ್ರಧಾನಿ ಅವರ ವಿದೇಶ ಪ್ರವಾಸಗಳಿಗೆ ಒಟ್ಟು 295 ಕೋಟಿ ರೂ. ವೆಚ್ಚವಾಗಿದೆ. ಇದರಲ್ಲಿ, 2021ರಲ್ಲಿ 36 ಕೋಟಿ ರೂ., 2022ರಲ್ಲಿ 55.82 ಕೋಟಿ ರೂ., 2023ರಲ್ಲಿ 93 ಕೋಟಿ ರೂ. ಹಾಗೂ 2024ರಲ್ಲಿ 109 ಕೋಟಿ ರೂ. ವೆಚ್ಚವಾಗಿದೆ.
ಇನ್ನು, 2025ರಲ್ಲಿ ಪ್ರಧಾನಿ ಮೋದಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ, ಜಪಾನ್ ಸೇರಿದಂತೆ 23 ರಾಷ್ಟ್ರಗಳಿಗೆ ಭೇಟಿ ನೀಡಿದ್ದರು. ಈ ಪ್ರವಾಸಗಳಿಗೆ ಒಟ್ಟು 187 ಕೋಟಿ ರೂ. ವೆಚ್ಚವಾಗಿದೆ. 2026ರಲ್ಲಿ ಈವರೆಗೆ ಇಂಡೋನೇಷ್ಯಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಸೇರಿದಂತೆ ಹಲವು ದೇಶಗಳಿಗೆ ಕೈಗೊಂಡ ಭೇಟಿಗಳಿಗೆ 74.58 ಕೋಟಿ ರೂ. ಖರ್ಚಾಗಿದೆ.
2025ರ ಪ್ರಮುಖ ಪ್ರವಾಸಗಳ ಪೈಕಿ ಫ್ರಾನ್ಸ್‌ಗೆ 25.60 ಕೋಟಿ ರೂ., ಬ್ರೆಜಿಲ್‌ಗೆ 17.72 ಕೋಟಿ ರೂ., ಅಮೆರಿಕಕ್ಕೆ 16.55 ಕೋಟಿ ರೂ., ಸೌದಿ ಅರೇಬಿಯಾಕ್ಕೆ 15.54 ಕೋಟಿ ರೂ., ಚೀನಾಕ್ಕೆ 10.60 ಕೋಟಿ ರೂ. ಹಾಗೂ ಬ್ರಿಟನ್‌ಗೆ 9.92 ಕೋಟಿ ರೂ. ವೆಚ್ಚವಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದೇ ವೇಳೆ, ಜುಲೈ 2021ರಿಂದ ಪ್ರಧಾನಿ ಕೈಗೊಂಡ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಒಟ್ಟು 316 ದ್ವಿಪಕ್ಷೀಯ ಒಪ್ಪಂದಗಳು ಮತ್ತು ತಿಳಿವಳಿಕೆ ಪತ್ರಗಳಿಗೆ (MoU) ಸಹಿ ಹಾಕಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.




