ಶುದ್ಧೀಕರಣ ವಿಧಿ (Purification Ritual) ಹೆಸರಿನಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿಹಾಕಿ, ಮನಬಂದಂತೆ ಥಳಿಸಿ, ಅತ್ಯಾಚಾರ ಎಸಗಿರುವ ಅತ್ಯಂತ ಅಮಾನವೀಯ ಘಟನೆ ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯಲ್ಲಿ ವರದಿಯಾಗಿದೆ. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 9 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ವಿವಾಹಿತ ಮಹಿಳೆಯೊಬ್ಬರು ತನ್ನ ಪತಿಯನ್ನು ತೊರೆದು ಮತ್ತೊಬ್ಬ ವ್ಯಕ್ತಿಯೊಂದಿಗೆ ವಾಸಿಸಲು ಪ್ರಾರಂಭಿಸಿದ್ದರು. ಇದರಿಂದ ಆಕ್ರೋಶಗೊಂಡ ಪತಿ ಹಾಗೂ ಆತನ ಕುಟುಂಬದವರು ಆಕೆಯನ್ನು ತಮ್ಮ ಮನೆಯಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದರು. ಆದರೆ, ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿದ್ದ ಮಹಿಳೆಯನ್ನು ಆರೋಪಿಗಳು ಬೆನ್ನಟ್ಟಿ, ಆಕೆಯ ಜೊತೆಗಿದ್ದ ವ್ಯಕ್ತಿಯೊಂದಿಗೆ ಇಬ್ಬರನ್ನೂ ಅಪಹರಿಸಿದ್ದಾರೆ. ನಂತರ ‘ಶುದ್ಧೀಕರಣ ವಿಧಿ’ ನೆರವೇರಿಸುವ ನೆಪದಲ್ಲಿ ಆ ದಂಪತಿಯನ್ನು ಗುಜರಾತ್‌ನ ಸುರೇಂದ್ರನಗರಕ್ಕೆ ಕರೆತರಲಾಗಿದೆ. ಅಲ್ಲಿ ಮಹಿಳೆಯ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿ, ಥಳಿಸಿ, ನಂತರ ಮರಕ್ಕೆ ಕಟ್ಟಿಹಾಕಲಾಗಿದೆ. ಅಲ್ಲದೆ, ಆಕೆಯ ಜೊತೆಗಿದ್ದ ವ್ಯಕ್ತಿಯನ್ನೇ ಬಲವಂತಪಡಿಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗುವಂತೆ ಮಾಡಲಾಗಿದೆ.
ಈ ಅಮಾನವೀಯ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗಿ ಸ್ಥಳೀಯರು ಮತ್ತು ಪೊಲೀಸರ ಗಮನಕ್ಕೆ ಬಂದ ಕೂಡಲೇ ಸುರೇಂದ್ರನಗರ ಪೊಲೀಸ್ ವರಿಷ್ಠಾಧಿಕಾರಿ ಪ್ರೇಮ್‌ಸುಖ್ ದೇಲು ಅವರ ನಿರ್ದೇಶನದಂತೆ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ.
ಎಎಸ್‌ಪಿ ವೇದಿಕಾ ಬಿಹಾನಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವು ಸ್ಥಳೀಯ ಸಾಮಾಜಿಕ ನಾಯಕರು ನೀಡಿದ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಸಂತ್ರಸ್ತೆ ಮಹಿಳೆಯನ್ನು ಪತ್ತೆಹಚ್ಚಿದೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 70(1), 115(2), 127(3), 142 ಮತ್ತು 3(5) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಸೆಕ್ಷನ್ 66(E) ಮತ್ತು 67(A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಹೇಯ ಕೃತ್ಯದಲ್ಲಿ ಭಾಗಿಯಾದ ಇಬ್ಬರು ಮಹಿಳೆಯರು ಇತರ ಆರೋಪಿಗಳಿಗೆ ಸಾಥ್ ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ. ಎಎಸ್‌ಪಿ ಬಿಹಾನಿ ಹಾಗೂ ಅವರ ತಂಡವು ಸಂತ್ರತೆಯ ಹೇಳಿಕೆಯನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದೆ. ವಶಕ್ಕೆ ಪಡೆದಿರುವ ಒಂಬತ್ತು ಮಂದಿ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರತಿಯೊಬ್ಬರ ಪಾತ್ರವೇನು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಅಲ್ಲದೆ, ಆರೋಪಿಗಳ ಕ್ರಿಮಿನಲ್ ಹಿನ್ನೆಲೆ ಹಾಗೂ ವಿಡಿಯೋ ಚಿತ್ರೀಕರಿಸಿ ಹಂಚಿದವರ ಕುರಿತು ಪೊಲೀಸರು ಸಮಗ್ರ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ | ಕಲಬೆರಕೆ ಪಶು ಆಹಾರ ಮಾರಿದರೆ ಜೈಲು; ಕೋಳಿ, ಜಾನುವಾರು ಆಹಾರ ಉತ್ಪಾದನೆಗೆ ಲೈಸೆನ್ಸ್ ಕಡ್ಡಾಯ
ಆಧುನಿಕತೆ ಎಷ್ಟೇ ಮುಂದುವರಿದಿದ್ದರೂ, ದೇಶದ ಕೆಲವು ಭಾಗಗಳಲ್ಲಿ ಇಂದಿಗೂ ‘ಖಾಪಾ ಪಂಚಾಯತ್’ ಮಾದರಿಯ ಅನಾಗರಿಕ ಸಂಪ್ರದಾಯಗಳು, ಜಾತಿ ಅಹಂಕಾರ ಮತ್ತು ಮರ್ಯಾದೆಯ ಹೆಸರಿನಲ್ಲಿ ನಡೆಯುವ ದೌರ್ಜನ್ಯಗಳು ಜೀವಂತವಾಗಿವೆ ಎಂಬುದಕ್ಕೆ ಇಂತಹ ಘಟನೆಗಳೇ ಸಾಕ್ಷಿ. ದೌರ್ಜನ್ಯ ಎಸಗುವುದು ಮಾತ್ರವಲ್ಲದೆ, ಆ ಕೃತ್ಯದ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದು (Cyber Voyeurism/Harassment) ಸಂತ್ರಸ್ತೆಯ ಗೌರವಕ್ಕೆ ಎಸಗುವ ಅತಿ ದೊಡ್ಡ ಅಪರಾಧ. ಐಟಿ ಕಾಯ್ದೆಯಡಿ (IT Act 66E, 67A) ಇಂತಹ ವಿಡಿಯೋಗಳನ್ನು ಶೇರ್ ಮಾಡುವುದು ಅಥವಾ ಪ್ರಸಾರ ಮಾಡುವುದು ಗಂಭೀರ ಅಪರಾಧವಾಗಿದ್ದು, ಕಠಿಣ ಜೈಲು ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ಸಮಾಜದಲ್ಲಿ ಇಂತಹ ವಿಕೃತಿಗಳನ್ನು ಮೆಟ್ಟಿನಲ್ಲಲು ತ್ವರಿತ ನ್ಯಾಯಾಲಯಗಳ (Fast Track Courts) ಮೂಲಕ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ವಿಧಿಸುವುದು ಅನಿವಾರ್ಯ.
ಇಂದು ರಾಷ್ಟ್ರೀಯ ಮಟ್ಟದಲ್ಲಿ ‘ಗುಜರಾತ್ ಮಾಡೆಲ್’, ಡಬಲ್ ಎಂಜಿನ್ ಎಂದು ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ನಾಯಕರು ತಮ್ಮದೇ ರಾಜ್ಯದಲ್ಲಿ ಇಂತಹ ಅತಿ ಕ್ರೂರ ಘಟನೆಗಳು ಮರುಕಳಿಸುತ್ತಿರುವ ಬಗ್ಗೆ ಏನು ಉತ್ತರಿಸುತ್ತಾರೆ? ಪ್ರಚಾರದ ಗಿಮಿಕ್‌ಗಳಿಗೆ ಸೀಮಿತವಾಗಿರುವ ಆಡಳಿತ ವ್ಯವಸ್ಥೆಯಲ್ಲಿ, ಸಮಾಜಘಾತಕಾರಿ ಅಪರಾಧ ಎಸಗುವ ಕಾಮುಕರಿಗೆ ಕಠಿಣ ಶಿಕ್ಷೆಯಾಗುವ ಬದಲು, ರಾಜಕೀಯ ರಕ್ಷಣೆ ಸಿಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಪರಾಧಿಗಳನ್ನು ಕಾನೂನಿನ ಕಠಿಣ ಶಿಕ್ಷೆಗೆ ಗುರಿಪಡಿಸದೆ ನಿರ್ಲಕ್ಷಿಸುವುದು ಅಥವಾ ಮೃದು ಧೋರಣೆ ತಾಳುವುದು ಇಂತಹ ಮತ್ತಷ್ಟು ಘಟನೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಆಡಳಿತಯಂತ್ರ ಸಂಪೂರ್ಣ ಮಂಡಿಯೂರಿರುವುದರಿಂದ ಇಂತಹ ಕೃತ್ಯಗಳು ನಡೆಯುತ್ತಲೇ ಇವೆ. ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತಿರುವ ಇಂತಹ ಮನಸ್ಥಿತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮಾನವೀಯತೆ ಮಣ್ಣಾಗುವುದರಲ್ಲಿ ಸಂಶಯವಿಲ್ಲ.




