ಬೀದರ್‌ | ಸಾಹಿತಿಗಳು ಜನಜಾಗೃತಿಯ ಕುಲುಮೆ ಆರದಂತೆ ನೋಡಿಕೊಳ್ಳಲಿ: ಅಮೀನ್‌ ಮಟ್ಟು

Date:

‌ಬೀದರ್ (ಡಾ.ಭೀಮಣ್ಣ ಖಂಡ್ರೆ ವೇದಿಕೆ) : ಜನಜಾಗೃತಿಯ ಕುಲುಮೆ ಸದಾ ಉರಿಯುತ್ತಿರಬೇಕು. ಅದರಲ್ಲಿನ ಜಾಗೃತಿಯ ಕಿಚ್ಚು ಎಂದಿಗೂ ಆರದಂತೆ ನೋಡಿಕೊಳ್ಳುವುದು ಸಾಹಿತ್ಯಕಾರರ ಜವಾಬ್ದಾರಿಯಾಗಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.

- Advertisement -

ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ಎರಡು ದಿನಗಳ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿ, “ಸಾಹಿತ್ಯದಿಂದ ಚಳವಳಿಗಳು ಬೆಳೆದಿವೆ, ಚಳವಳಿಗಳಿಂದಲೂ ಸಾಹಿತ್ಯ ಸಮೃದ್ಧವಾಗಿದೆ. ಸಮಾಜದಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯವನ್ನು ಸಾಹಿತಿಗಳು ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳಾ ಮೀಸಲಾತಿ ಮರೆಯಲ್ಲಿ ಕ್ಷೇತ್ರ ಮರುವಿಂಗಡಣೆ: ವಿರೋಧ ಪಕ್ಷಗಳ...

2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅನಗತ್ಯವಾಗಿ ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ತಳುಕು ಹಾಕಿರುವ ಮೋದಿ ಸರ್ಕಾರದ ನಡೆ, ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂಸದೀಯ ಇತಿಹಾಸದಲ್ಲಿಯೇ ಒಂದು ಅಪರೂಪದ ರಾಜಕೀಯ ಹಾಗೂ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ....

ಖಾಸಗಿ ವೈದ್ಯರ ಎಡವಟ್ಟು; ಬಡ ಕುಟುಂಬದ ಆಧಾರ ಸ್ತಂಭ...

ಆತ ಕೂಲಿ‌ ಕೆಲಸ ಮಾಡಿಕೊಂಡು ಹಂಗೊ ಹೆಂಗೋ ಜೀವನ‌ ನಡೆಸಿಕೊಂಡು ಬಂದಿದ್ದ ಚಿರ ಯೌವ್ವನದ ಯುವಕ. ತನ್ನ ಮನೆ ಜವಾಬ್ದಾರಿಯನ್ನು ತನ್ನದೇ ಹೆಗಲ ಮೇಲೆರಿಸಿ ಕಷ್ಟಪಟ್ಟು ದುಡಿದು ತನ್ನ ಇಬ್ಬರು ಸಹೋದರಿಯರಿಗೆ ಮದುವೆಯನ್ನೂ...

ಭಾಷಣಗಳಲ್ಲಿ ಆಗಾಗ ಎಡವಟ್ಟು, ಸುಳ್ಳು-ಅತಿಶಯೋಕ್ತಿಯೇ ಮೇಲುಗೈ: ನವಭಾರತದ ‘ಪಪ್ಪು’...

ಒಂದು ಕಾಲದಲ್ಲಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಲು ಬಳಸುತ್ತಿದ್ದ 'ಪಪ್ಪು' ಎಂಬ ಪದವೇ ಇದೀಗ ಮೋದಿ ಅವರತ್ತ ತಿರುಗಿದೆ. 1987-88ರ ಡಿಜಿಟಲ್ ಕ್ಯಾಮೆರಾ-ಇಮೇಲ್ ಕಥೆಯಿಂದ ಹಿಡಿದು ಐತಿಹಾಸಿಕ ಪ್ರಮಾದಗಳವರೆಗೆ, ಮೋದಿ ಅವರ...

“ನಾಡು-ನುಡಿಗೆ ಅನ್ಯಾಯವಾದಾಗ ಹಾಗೂ ಸಮಾಜದಲ್ಲಿ ಅನ್ಯಾಯ, ಅಕ್ರಮಗಳು ನಡೆದಾಗ ಅವುಗಳ ವಿರುದ್ಧ ಧ್ವನಿ ಎತ್ತುವ ಯುವ ಸಾಹಿತಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಭವಿಷ್ಯದ ಕುರಿತು ಆತಂಕ ಮೂಡಿಸಿದೆ. 30ರಿಂದ 40 ವರ್ಷ ವಯೋಮಾನದ ಯುವ ಸಾಹಿತಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಎಷ್ಟರಮಟ್ಟಿಗೆ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಗಮನಿಸಿದರೆ ನಿರಾಶೆಯಾಗುತ್ತದೆ.
ಸರ್ಕಾರ ಭ್ರಷ್ಟಗೊಂಡು ಅನ್ಯಾಯದ ಹಾದಿ ಹಿಡಿದಾಗ ಅದರ ವಿರುದ್ಧ ಧ್ವನಿ ಎತ್ತುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ” ಎಂದರು.

ವಿಶ್ವವಿದ್ಯಾಲಯಗಳ ಅನೇಕ ಪ್ರಾಧ್ಯಾಪಕರು ಕೂಡ ಸಮಾಜದ ಆಗುಹೋಗುಗಳ ಬಗ್ಗೆ ಕಾಳಜಿ ವಹಿಸದಿರುವುದು ಆತಂಕದ ಸಂಗತಿಯಾಗಿದೆ. ಎಂಬತ್ತರ ದಶಕದಲ್ಲಿ ಸಮಾಜದ ಪರಿವರ್ತನೆಯಲ್ಲಿ ಸಾಹಿತಿಗಳು ಮತ್ತು ಬರಹಗಾರರು ಮಹತ್ವದ ಪಾತ್ರ ವಹಿಸಿದ್ದರು. ಆದರೆ, ಇಂದು ಸಾಹಿತ್ಯ ವಲಯದಲ್ಲಿ ಅಂತಹ ಸಾಮಾಜಿಕ ಬದ್ಧತೆ ಹಾಗೂ ಪ್ರಭಾವ ಕಾಣಿಸುತ್ತಿಲ್ಲ. ಮಕ್ಕಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸುವ ಕೆಲಸವಾಗಬೇಕು ಎಂದು ಹೇಳಿದರು.

ಸಾಹಿತ್ಯ ಓದುವುದರಿಂದ ಯಾರೂ ಕೆಟ್ಟವರಾಗುವುದಿಲ್ಲ. ಬದಲಾಗಿ ಸಾಹಿತ್ಯ ಮನುಷ್ಯರನ್ನು ಮಾನವೀಯ ಮೌಲ್ಯಗಳುಳ್ಳ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ. ಇಂದಿನ ಪೋಷಕರು ತಮ್ಮ ಮಕ್ಕಳು ವೈದ್ಯರು, ಎಂಜಿನಿಯರ್‌ಗಳಾಗಬೇಕು ಎಂದು ಬಯಸುತ್ತಾರೆ. ಆದರೆ, ಮನುಷ್ಯರ ನಡುವಿನ ಸಂಬಂಧಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ. ಮಾನವೀಯ ಸಂಬಂಧಗಳು ಮತ್ತು ಮೌಲ್ಯಗಳನ್ನು ಬೆಳೆಸುವಲ್ಲಿ ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ. ಕವಿತೆ ಹಾಗೂ ಸಾಹಿತ್ಯ ಓದುವವರು ಎಂದಿಗೂ ನೆಮ್ಮದಿ ಕಳೆದುಕೊಳ್ಳುವುದಿಲ್ಲ. ಸಾಹಿತ್ಯ ಮನಸ್ಸಿಗೆ ನೆಮ್ಮದಿ ನೀಡುವುದರ ಜತೆಗೆ ಸಮಾಜವನ್ನು ನೋಡುವ ದೃಷ್ಟಿಕೋನವನ್ನೂ ಬದಲಿಸುತ್ತದೆ ಎಂದು ತಿಳಿಸಿದರು.

WhatsApp Image 2026 11 21 at 7.14.39 PM

“ವಚನ ಸಾಹಿತ್ಯ ಒಬ್ಬ ಸಾಹಿತಿಯ ಸಾಹಿತ್ಯಿಕ ಪಯಣಕ್ಕೆ ಭದ್ರ ಬುನಾದಿಯಾಗಿದೆ. ಬಸವಣ್ಣನವರು ಕೇವಲ ವ್ಯಕ್ತಿಯಲ್ಲ, ಅವರು ಒಂದು ತತ್ವ ಮತ್ತು ಸಿದ್ಧಾಂತದ ಸಂಕೇತ. ಅವರ ತತ್ವಗಳ ಮೇಲೆಯೇ ಇಂದು ದಾಳಿ ನಡೆಯುತ್ತಿರುವುದರಿಂದ ಎಲ್ಲರೂ ಎಚ್ಚೆತ್ತುಕೊಂಡು ಪ್ರತಿಭಟನೆಯ ಧ್ವನಿ ಎತ್ತಬೇಕು. ವಚನ ಚಳವಳಿ ಕೇವಲ ಸಾಹಿತ್ಯ ಚಳವಳಿಯಾಗಿರಲಿಲ್ಲ. ಅದು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ ಮಹತ್ವದ ಚಳವಳಿಯಾಗಿತ್ತು” ಎಂದು ತಿಳಿಸಿದರು.

“ಶರಣ ಚಳವಳಿ ಎಲ್ಲರನ್ನು ಒಳಗೊಂಡ ಚಳವಳಿಯಾಗಿದೆ. ಬಸವಣ್ಣನವರ ಚಾರಿತ್ರ್ಯಕ್ಕೆ ಧಕ್ಕೆ ಉಂಟುಮಾಡುವ ಪ್ರಯತ್ನ ನಡೆದಾಗ ಕೇವಲ ಲಿಂಗಾಯತರು ಮಾತ್ರ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ. ಬಸವಣ್ಣನವರು ಲಿಂಗಾಯತರ ಸಾಂಸ್ಕೃತಿಕ ನಾಯಕರಷ್ಟೇ ಅಲ್ಲ, ಇಡೀ ಕರ್ನಾಟಕದ ಸಾಂಸ್ಕೃತಿಕ ನಾಯಕರು. ಅವರ ತತ್ವಗಳ ಮೇಲಿನ ದಾಳಿಯನ್ನು ಸಮಸ್ತ ಕನ್ನಡಿಗರು ಒಗ್ಗಟ್ಟಾಗಿ ವಿರೋಧಿಸಬೇಕು” ಎಂದು ಕರೆ ನೀಡಿದರು.

ಒಂದು ಕಾಲದಲ್ಲಿ ಬರೆದು ಬದುಕುವ ಅನೇಕ ಸಾಹಿತಿಗಳು ನಮ್ಮ ನಡುವೆ ಇದ್ದರು. ಸಾಹಿತ್ಯ ಕೇವಲ ಮನರಂಜನೆ ಅಥವಾ ಬರವಣಿಗೆಗೆ ಸೀಮಿತವಾಗಬಾರದು. ಅದು ಸಮಾಜದ ಬದಲಾವಣೆಗೆ ಪ್ರೇರಕ ಶಕ್ತಿಯಾಗಬೇಕು. ಬಹುಭಾಷೆ, ಬಹುಧರ್ಮ ಹಾಗೂ ವೈವಿಧ್ಯಮಯ ಸಂಸ್ಕೃತಿಗಳ ಸಂಗಮವಾಗಿರುವ ಬೀದರ್ ಜಿಲ್ಲೆಯಲ್ಲಿ ಸಾಹಿತ್ಯದ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಸಾಹಿತಿಗಳು ಸಮಾಜದ ಆಗುಹೋಗುಗಳ ಬಗ್ಗೆ ಸದಾ ಎಚ್ಚರಿಕೆಯಿಂದಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಅಮೀನ್ ಮಟ್ಟು ಸಲಹೆ ನೀಡಿದರು.

ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, “ರಾಜ್ಯದ ಎರಡನೇ ಸಾಂಸ್ಕೃತಿಕ ಜಿಲ್ಲೆಯಂತೆ ಇರುವ ಬೀದರ್‌ನಲ್ಲಿ ಸದಾ ಜಾತ್ರೆ, ಉತ್ಸವ ಹಾಗೂ ನಾಡು-ನುಡಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸದಾ ನಡೆಯುತ್ತಿರುತ್ತಿರುವುದು ಹೆಮ್ಮೆಯ ಸಂಗತಿ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿರುವ ಬಸವರಾಜ ಬಲ್ಲೂರ ಅವರ ಶ್ರಮ ಮೆಚ್ಚುವಂತಹದು ಎಂದರು.

ಬೀದರ್ ಜಿಲ್ಲೆಯ ಕನ್ನಡ ಭಾಷೆ ವಿಶಿಷ್ಟವಾಗಿದ್ದು, ಕನ್ನಡದೊಂದಿಗೆ ಉರ್ದು, ಮರಾಠಿ ಹಾಗೂ ತೆಲುಗು ಭಾಷೆಗಳ ಮಿಶ್ರಣದಿಂದ ರೂಪುಗೊಂಡಿರುವ ಇಲ್ಲಿನ ಆಡುಭಾಷೆ ಭಾಷಾ ಸೌಹಾರ್ದ ಮತ್ತು ಬಾಂಧವ್ಯವನ್ನು ಬೆಸೆಯುತ್ತದೆ. ವಿಭಿನ್ನ ಭಾಷೆ, ಸಂಸ್ಕೃತಿಗಳ ಸಂಗಮವಾಗಿರುವ ಬೀದರ್ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ದೇಶ ವಿಕಸಿತ ಭಾರತವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಯುವ ಸಮೂಹ ಸನ್ನದ್ಧರಾಗಬೇಕು. ನಾಡು, ನುಡಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, “ಕನ್ನಡ ಭಾಷೆಯ ಬೆಳವಣಿಗೆಗಾಗಿ ಕೈಗೊಂಡಿರುವ ಹಲವು ನಿರ್ಣಯಗಳು ಹಾಗೂ ನೀಡಿರುವ ಭರವಸೆಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯರೂಪಕ್ಕೆ ತರಬೇಕಿದೆ. ಕೇಂದ್ರ ಸರ್ಕಾರಕ್ಕೆ ಹಿಂದಿ ಭಾಷೆಯ ಮೇಲಿನ ವ್ಯಾಮೋಹವಿದ್ದರೆ, ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಭಾಷೆಯ ಮೇಲಿನ ವ್ಯಾಮೋಹ ಹೆಚ್ಚಾಗಿದೆ. ಕೆಪಿಎಸ್ ಹೆಸರಿನಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸುವ ಪ್ರಯತ್ನ ನಡೆಯುತ್ತಿರುವುದು ನೋವಿನ ಸಂಗತಿ. ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಮೇಲಿನ ಕಠಿಣ ನಿಯಮಗಳನ್ನು ಸಡಿಲಿಸುವ ನಿಟ್ಟಿನಲ್ಲಿಯೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಕನ್ನಡ ನಾಡು-ನುಡಿ ಶ್ರಮಿಸಿದ ಡಾ.ಜಯದೇವಿ ತಾಯಿ ಲಿಗಾಡೆ ಹಾಗೂ ಪ್ರಭುರಾವ ಕಂಬಳಿವಾಲೆ ಅವರ ಹೆಸರಿನಲ್ಲಿ ಈಗಾಗಲೇ ಸರ್ಕಾರ ಸ್ಥಾಪಿಸಿರುವ ಎರಡು ಪ್ರತ್ಯೇಕ ಪ್ರತಿಷ್ಠಾನಗಳನ್ನು ಶೀಘ್ರವೇ ಕಾರ್ಯರೂಪಕ್ಕೆ ತರಬೇಕು. ಡಾ.ಭೀಮಣ್ಣ ಖಂಡ್ರೆ ಮತ್ತು ಪೂಜ್ಯ ಚನ್ನಬಸವ ಪಟ್ಟದ್ದೇವರ ಹೆಸರಿನಲ್ಲಿ ಹೊಸದಾಗಿ ಎರಡು ಪ್ರತಿಷ್ಠಾನಗಳನ್ನು ಸ್ಥಾಪಿಸಿ, ಅವರ ಆದರ್ಶ ಹಾಗೂ ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು” ಎಂದು ಆಗ್ರಹಿಸಿದರು.

WhatsApp Image 2026 11 21 at 7.14.38 PM 1

“ಕೆಲವು ತಾಂತ್ರಿಕ ಕಾರಣಗಳಿಂದ ಜಿಲ್ಲಾ ಕನ್ನಡ ಭವನದ ಕಟ್ಟಡವನ್ನು ಜಿಲ್ಲಾಡಳಿತ ಇನ್ನೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಸ್ತಾಂತರಿಸಿಲ್ಲ. ಈ ನಿಟ್ಟಿನಲ್ಲಿ ಕನ್ನಡಾಭಿಮಾನಿಗಳು ಒಗ್ಗಟ್ಟಿನಿಂದ ಕೈಜೋಡಿಸಬೇಕು. ಇನ್ನೆರಡು ದಿನಗಳಲ್ಲಿ ತಮ್ಮ ಅಧಿಕಾರಾವಧಿ ಮುಕ್ತಾಯಗೊಳ್ಳಲಿದ್ದು, ಅತ್ಯಂತ ಶ್ರಮವಹಿಸಿ ನಿರ್ಮಿಸಿರುವ ಕನ್ನಡ ಭವನವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಚನ್ನಶೆಟ್ಟಿ ಅವರು ಭಾವುಕರಾಗಿ ಮನವಿ ಮಾಡಿದರು.

ಸಾಹಿತ್ಯ ನೊಂದವರ ನೋವಿಗೆ ಸ್ಪಂದಿಸಲಿ

ಸಾಹಿತ್ಯವು ಕೇವಲ ಪದಗಳ ಜೋಡಣೆಯಲ್ಲ, ಅದು ಸತ್ಯದ ಅನ್ವೇಷಣೆ, ವರ್ತಮಾನದ ವಿಮರ್ಶೆ ಹಾಗೂ ಭವಿಷ್ಯದ ನಿರ್ಮಾಣದ ಸಾಧನವಾಗಿದೆ. ಸಾಹಿತ್ಯ ಸಮ್ಮೇಳನಗಳು ಕೇವಲ ಕವಿಗೋಷ್ಠಿ, ಪುಸ್ತಕ ಪ್ರದರ್ಶನ ಮತ್ತು ಸನ್ಮಾನಗಳಿಗೆ ಸೀಮಿತವಾಗದೆ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ವೈಚಾರಿಕ ಪ್ರಜ್ಞೆ ಬೆಳೆಸುವ ಜನಪರ ವೇದಿಕೆಗಳಾಗಬೇಕು ಎಂದು ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಬಸವರಾಜ ಬಲ್ಲೂರ ಹೇಳಿದರು.

ಸರ್ವಾಧ್ಯಕ್ಷರ ಭಾಷಣ ನುಡಿದ ಅವರು, “12ನೇ ಶತಮಾನದ ವಚನ ಚಳವಳಿ ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕು ನೀಡುವುದರ ಜತೆಗೆ ಸಮಾನತೆ, ಕಾಯಕ, ದಾಸೋಹ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಸಾರಿತು. ಬಸವಣ್ಣನವರು ಸೇರಿದಂತೆ ಶರಣರ ವಿಚಾರಧಾರೆಗಳು ಇಂದಿನ ಜಾಗತಿಕ ಸಮಾಜಕ್ಕೂ ಪ್ರಸ್ತುತವಾಗಿವೆ. ವಚನ ಸಾಹಿತ್ಯವನ್ನು ವಿಶ್ವದ ಓದುಗರಿಗೆ ಪರಿಚಯಿಸುವ ಕೆಲಸವಾಗಬೇಕು” ಎಂದರು.

ಬೀದರ್ ಜಿಲ್ಲೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಶ್ರೀಮಂತ ನೆಲವಾಗಿದೆ. ಬಿದರಿ ಕಲೆ, ಜನಪದ ಸಾಹಿತ್ಯ, ತತ್ವಪದ ಹಾಗೂ ವಚನ ಪರಂಪರೆ ಜಿಲ್ಲೆಯ ಸಾಂಸ್ಕೃತಿಕ ಸಂಪತ್ತಾಗಿವೆ. ಸಾಹಿತ್ಯ ಕ್ಷೇತ್ರದಲ್ಲಿ ವಿಮರ್ಶೆಯ ಕೊರತೆ, ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಮನೋಭಾವದ ಅಭಾವ ಮತ್ತು ಪರಸ್ಪರ ವಿಚಾರಗಳನ್ನು ಗೌರವಿಸುವ ಸಹೃದಯತೆಯ ಕೊರತೆ ಕಾಡುತ್ತಿದೆ. ಯುವ ಬರಹಗಾರರು ಬರವಣಿಗೆಯನ್ನು ಕೇವಲ ವೇದಿಕೆ ಅಥವಾ ಫ್ಯಾಷನ್‌ಗೆ ಸೀಮಿತಗೊಳಿಸದೆ, ಬದುಕಿನ ಅನುಭವ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ ಸಾಹಿತ್ಯ ರಚಿಸಬೇಕು” ಎಂದು ಸಲಹೆ ನೀಡಿದರು.

ಜಾತಿ, ಧರ್ಮ, ಭಾಷೆ ಮತ್ತು ಲಿಂಗದ ಆಧಾರದ ಮೇಲೆ ಮನುಷ್ಯರನ್ನು ವಿಭಜಿಸುವ ಮನೋಭಾವ ದೂರವಾಗಬೇಕು. ಪರಸ್ಪರರ ನೋವು ಅರ್ಥಮಾಡಿಕೊಳ್ಳುವುದು, ಹಕ್ಕುಗಳನ್ನು ಗೌರವಿಸುವುದು ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಸಾಹಿತಿಗಳ ಜವಾಬ್ದಾರಿಯಾಗಿದೆ. ಭಾಷೆಗಳ ನಡುವೆ ಸ್ಪರ್ಧೆಗಿಂತ ಸಂವಾದ ಮತ್ತು ಪರಸ್ಪರ ಗೌರವ ಮುಖ್ಯ. ಕನ್ನಡವನ್ನು ಪ್ರೀತಿಸುವುದರ ಜತೆಗೆ ಇತರ ಭಾಷೆಗಳನ್ನೂ ಗೌರವಿಸಬೇಕು ಎಂದು ಹೇಳಿದರು.

WhatsApp Image 2026 11 21 at 7.14.41 PM

ಬೀದರ್ ಜಿಲ್ಲೆಯ ಸಾಹಿತ್ಯ ಚರಿತ್ರೆಯನ್ನು ಸಮಗ್ರವಾಗಿ ದಾಖಲಿಸುವುದು, ಹಸ್ತಪ್ರತಿ ಹಾಗೂ ಮೌಖಿಕ ಪರಂಪರೆ ಸಂರಕ್ಷಿಸುವುದು, ಜನಪದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದು, ಮಹಿಳೆಯರು ಮತ್ತು ಅಂಚಿನ ಸಮುದಾಯಗಳ ಸಾಹಿತ್ಯಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ. ಗ್ರಾಮೀಣ ಗ್ರಂಥಾಲಯಗಳನ್ನು ಬಲಪಡಿಸಿ, ಯುವಜನರಲ್ಲಿ ಓದುವ ಮತ್ತು ಬರೆಯುವ ಅಭ್ಯಾಸ ಬೆಳೆಸಬೇಕು. ಕನ್ನಡ ಸಾಹಿತ್ಯವನ್ನು ಡಿಜಿಟಲ್ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯೊಂದಿಗೆ ಬೆಸೆಯಬೇಕು ಎಂದು ಪ್ರತಿಪಾದಿಸಿದರು.

ಜಿಲ್ಲೆಯ ಅಭಿವೃದ್ಧಿಯ ಕುರಿತು ಪ್ರಸ್ತಾಪಿಸಿದ ಅವರು, ಕೃಷಿ ಮತ್ತು ಜಲಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ, ರೈತರಿಗೆ ನ್ಯಾಯಯುತ ಮಾರುಕಟ್ಟೆ, ಯುವಜನರಿಗೆ ಉದ್ಯೋಗ, ಸ್ಥಳೀಯ ಕೈಗಾರಿಕೆಗಳ ಬೆಳವಣಿಗೆ ಹಾಗೂ ಐತಿಹಾಸಿಕ ತಾಣಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಬೀದರ್ ಕೋಟೆ, ಮಹಮದ್ ಗವಾನ್ ಮದರಸಾ, ಬಿದರಿ ಕಲೆ ಮತ್ತು ಬಸವಕಲ್ಯಾಣದ ಶರಣ ಪರಂಪರೆಯನ್ನು ಸಂಪರ್ಕಿಸುವ ಸಮಗ್ರ ಪ್ರವಾಸೋದ್ಯಮ ಯೋಜನೆ ರೂಪಿಸಬೇಕು. ಕಾರಂಜಾ ಸಂತ್ರಸ್ತರ ದೀರ್ಘಕಾಲದ ಸಮಸ್ಯೆಗೆ ಮಾನವೀಯ ದೃಷ್ಟಿಯಿಂದ ಸರ್ಕಾರ ಪರಿಹಾರ ಕಲ್ಪಿಸಬೇಕು. ಬಸವಾದಿ ಶರಣರ ಚರಿತ್ರೆ ಹಾಗೂ ತತ್ವಚಿಂತನೆಗೆ ಧಕ್ಕೆ ತರುವ ಪ್ರಯತ್ನಗಳನ್ನು ಖಂಡಿಸುವುದಾಗಿ ತಿಳಿಸಿದರು.

WhatsApp Image 2026 11 21 at 10.23.46 PM

ಸಾಹಿತ್ಯ ಸಮ್ಮೇಳನದ ಯಶಸ್ಸನ್ನು ಭಾಗವಹಿಸಿದವರ ಸಂಖ್ಯೆ ಅಥವಾ ಸನ್ಮಾನಗಳ ಆಧಾರದ ಮೇಲೆ ಅಳೆಯದೆ, ಹೊಸ ಓದುಗರು, ಯುವ ಬರಹಗಾರರು, ಸಂಶೋಧನೆಗಳು ಮತ್ತು ಸಾಮಾಜಿಕ ಬದಲಾವಣೆಗಳ ಮೂಲಕ ಅಳೆಯಬೇಕು. ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳು ಅನುಷ್ಠಾನಗೊಳ್ಳುವಂತೆ ಜವಾಬ್ದಾರಿಯುತ ಸಮಿತಿಗಳನ್ನು ರಚಿಸಿ ವಾರ್ಷಿಕ ಪ್ರಗತಿ ಪರಿಶೀಲನೆ ನಡೆಸಬೇಕು. ಗಡಿಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಸರ್ಕಾರ ಅಗತ್ಯ ಕ್ರಮವಹಿಸಬೇಕು. ಕೃಷಿ, ಆರೋಗ್ಯ ಹಾಗೂ ಶಿಕ್ಷಣ ಖಾಸಗೀಕರಣ ಆಗದಂತೆ ನೋಡಿಕೊಳ್ಳುವುದು ಅಗತ್ಯವಿದೆ” ಎಂದರು.

ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಹುಲಸೂರಿನ ಶಿವಾನಂದ ಸ್ವಾಮೀಜಿ ಹಾಗೂ ಮಲ್ಲಯ್ಯಗಿರಿ ಆಶ್ರಮದ ಡಾ.ಬಸವಲಿಂಗ ಅವಧೂತರು ನೇತೃತ್ವ ವಹಿಸಿದ್ದರು.

ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗೈದ ಪತ್ರಕರ್ತರಾದ ವಿಜಯಕುಮಾರ ಬೆಲ್ದೆ, ಮಲ್ಲಿಕಾರ್ಜುನ ಬಿರಾದಾರ, ಅನೀಲಕುಮಾರ ಬೆಲ್ದಾರ್‌, ಬಾಬು ಪಾಸ್ವಾನ್, ವಿನಯಕುಮಾರ ಮಾಳಗೆ, ಸಾಗರ್ ಆನಂದ ದೇವಪ್ಪ, ಗೌತಮ ಕಾಂಬಳೆ ಹಾಗೂ ಮುಹಮ್ಮದ್ ಸಲಾಹುದ್ದೀನ್ ಫರ್ಹಾನ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ʼಚಾವಡಿʼ ನೆನಪಿನ ಸಂಚಿಕೆ ಬಿಡುಗಡೆ ಮಾಡಲಾಯಿತು.

WhatsApp Image 2026 11 21 at 7.14.38 PM

ಬಿಡಿಎ ಅಧ್ಯಕ್ಷ ವಿನೋದಕುಮಾರ ಅಪ್ಪೆ, ರಜನೀಶ್ ವಾಲಿ, ಡಾ.ಬಸವರಾಜ ಪಾಟೀಲ ಅಷ್ಟೂರ, ಗುರುನಾಥ ಕೊಳ್ಳೂರ, ಬಾಬುವಾಲಿ, ಬಸವರಾಜ ಧನ್ನೂರ, ಹಾವಶೆಟ್ಟಿ ಪಾಟೀಲ, ಜೈರಾಜ ಖಂಡ್ರೆ, ಮಲ್ಲಮ್ಮ ಪಾಟೀಲ, ಆನಂದ ದೇವಪ್ಪ, ಶಿವರಾಜ ಪಾಟೀಲ್‌ ಬಲ್ಲೂರ ಕಸಾಪ ಪದಾಧಿಕಾರಿಗಳಾದ ಪಂಚಾಕ್ಷರಿ ಪುಣ್ಯಶೆಟ್ಟಿ, ಸಿದ್ದಾರೆಡ್ಡಿ ನಾಗೋರಾ, ಬಾಬುರಾವ್ ದಾನಿ, ಶಿವಶಂಕರ ಟೋಕರೆ, ಟಿ.ಎಂ. ಮಚ್ಚೆ, ಉಮೇಶ ಜಾಬಾ, ವಿದ್ಯಾವತಿ ಬಲ್ಲೂರ, ಎಂ.ಎಸ್.ಮನೋಹರ, ದೇವೇಂದ್ರ ಕರಂಜೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಮ್ಮೇಳನ ಸರ್ವಾಧ್ಯಕ್ಷರ ಅದ್ಧೂರಿ ಮೆರವಣಿಗೆ

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿರುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನವಾದ ಶನಿವಾರ ನಗರದಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಡಾ.ಬಸವರಾಜ ಬಲ್ಲೂರ ಅವರ ಅದ್ಧೂರಿ ಮೆರವಣಿಗೆ ನಡೆಯಿತು.

ನಗರದ ಪ್ರಮುಖ ಬೀದಿಗಳಲ್ಲಿ ಅಲಂಕೃತ ಸಾರೋಟಿನಲ್ಲಿ ಕನ್ನಡ ತಾಯಿ ಭುವನೇಶ್ವರಿ, ಸಮ್ಮೇಳನ ಸರ್ವಾಧ್ಯಕ್ಷ ಡಾ. ಬಸವರಾಜ ಬಲ್ಲೂರ ಹಾಗೂ ಹಿಂದಿನ ಸಮ್ಮೇಳನಗಳ ಸರ್ವಾಧ್ಯಕ್ಷರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಹಿಂದಿನ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

WhatsApp Image 2026 11 21 at 10.22.43 PM
ಸಮ್ಮೇಳನ ಸರ್ವಾಧ್ಯಕ್ಷ ಬಸವರಾಜ ಬಲ್ಲೂರ ಹಾಗೂ ಅವರ ಪತ್ನಿ ವಿದ್ಯಾವತಿ ಬಲ್ಲೂರ

ಡಿಜೆ, ಬ್ಯಾಂಡ್, ಹಲಗೆ ವಾದನ, ಕೋಲಾಟ, ಡೊಳ್ಳು ಕುಣಿತ ಹಾಗೂ ಶರಣರ ವೇಷಧಾರಿ ಮಕ್ಕಳ ತಂಡ ಮೆರವಣಿಗೆಯ ವೈಭವ ಹೆಚ್ಚಿಸಿದವು. ಮುಂಭಾಗದ ಸಾರೋಟಿನಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಸರ್ವಾಧ್ಯಕ್ಷ ಡಾ. ಬಸವರಾಜ ಬಲ್ಲೂರ ಹಾಗೂ ಅವರ ಪತ್ನಿ ವಿದ್ಯಾವತಿ ಬಲ್ಲೂರ ಉಪಸ್ಥಿತರಿದ್ದರು. ಹಿಂಬದಿಯ ಸಾರೋಟುಗಳಲ್ಲಿ ಹಿಂದಿನ ಸಮ್ಮೇಳನಗಳ ಸರ್ವಾಧ್ಯಕ್ಷರು ಹಾಗೂ ಪರಿಷತ್ತಿನ ಹಿಂದಿನ ಅಧ್ಯಕ್ಷರು ಸಾಗಿದರು. ಶರಣರ ವೇಷಧಾರಿ ಮಕ್ಕಳು ಟ್ರ್ಯಾಕ್ಟರ್‌ನಲ್ಲಿ ಕುಳಿತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಕೈಯಲ್ಲಿ ನಾಡಧ್ವಜ ಹಿಡಿದು, ಕೊರಳಲ್ಲಿ ಕನ್ನಡದ ಶಾಲು ಹಾಗೂ ತಲೆಯ ಮೇಲೆ ಟೊಪ್ಪಿಗೆ ಧರಿಸಿದ್ದ ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ‘ಕನ್ನಡ ತಾಯಿ ಭುವನೇಶ್ವರಿಗೆ ಜಯವಾಗಲಿ’, ‘ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ’ ಎಂಬ ಘೋಷಣೆಗಳನ್ನು ಮೊಳಗಿಸಿದರು.

ಡಿಜೆ ಮೂಲಕ ಮೊಳಗಿದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’, ‘ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ’ ಸೇರಿದಂತೆ ಕನ್ನಡದ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಗಣ್ಯರು ಕೂಡ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಯುವಕರನ್ನು ಹುರಿದುಂಬಿಸಿದರು. ಕನ್ನಡಾಭಿಮಾನಿಗಳ ಒತ್ತಾಸೆಗೆ ಸ್ಪಂದಿಸಿದ ಸಮ್ಮೇಳನ ಸರ್ವಾಧ್ಯಕ್ಷ ಬಸವರಾಜ ಬಲ್ಲೂರ ಅವರೂ ಹೆಜ್ಜೆ ಹಾಕಿ ಸಂಭ್ರಮದಲ್ಲಿ ಭಾಗಿಯಾದರು.

ಮೆರವಣಿಗೆಯು ಕರ್ನಾಟಕ ಪದವಿಪೂರ್ವ ಕಾಲೇಜಿನಿಂದ ಆರಂಭಗೊಂಡು ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಭಗತ್‌ಸಿಂಗ್ ವೃತ್ತ, ಡಾ. ಬಿ.ಆರ್.ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ ಹಾಗೂ ರೋಟರಿ ಕನ್ನಡಾಂಬೆ ವೃತ್ತದ ಮೂಲಕ ಸಾಗಿತು. ಬಳಿಕ ಸಮ್ಮೇಳನ ನಡೆಯುತ್ತಿರುವ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರ ತಲುಪಿತು.

DSC 2187

ಸಮ್ಮೇಳನದ ಅಂಗವಾಗಿ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ರಾಷ್ಟ್ರಧ್ವಜಾರೋಹಣ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಡಾ.ಚಂದ್ರಕಾಂತ ಗಂಗಶೆಟ್ಟಿ ನಾಡಧ್ವಜಾರೋಹಣ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಪರಿಷತ್ ಧ್ವಜಾರೋಹಣ ನೆರವೇರಿಸಿದರು.

ಇದನ್ನೂ ಓದಿ : ಗಿರೀಶ್ ಕಾರ್ನಾಡ್ ಅವರ ಕತೆ | ಅಳಿದ ಮೇಲೆ

ಶಾಸಕ ರಹೀಂ ಖಾನ್ ಮೆರವಣಿಗೆಗೆ ಚಾಲನೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಕೆಆರ್‌ಇ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಹಿರಿಯ ಸಾಹಿತಿಗಳಾದ ಪಂಚಾಕ್ಷರಿ ಪುಣ್ಯಶೆಟ್ಟಿ, ಎಂ.ಎಸ್. ಜನವಾಡಕರ್, ಪ್ರಮುಖರಾದ ಬಾಬುವಾಲಿ, ಹಾವಶೆಟ್ಟಿ ಪಾಟೀಲ, ರಾಜಾರಾಮ ಚಿಟ್ಟಾ, ಧನರಾಜ ಹಂಗರಗಿ, ಜೈರಾಜ ಖಂಡ್ರೆ, ಸಿದ್ದಾರೆಡ್ಡಿ ನಾಗೋರಾ, ಎಂ.ಎಸ್. ಮನೋಹರ, ಶಿವಶಂಕರ ಟೋಕರೆ, ಬಾಬುರಾವ್ ದಾನಿ, ಟಿ.ಎಂ. ಮಚ್ಚೆ, ದೇವೇಂದ್ರ ಕರಂಜೆ, ನಾಗೇಶ ಪ್ರಭಾ, ಮೆರವಣಿಗೆ ಸಮಿತಿ ಅಧ್ಯಕ್ಷ ರಾಜೇಂದ್ರ ಮಣಗೀರೆ, ಅಲ್ಲಮಪ್ರಭು ನಾವದಗೆರೆ, ಶಿವಕುಮಾರ ಕಟ್ಟೆ, ಸಿದ್ಧಾರೂಢ ಭಾಲ್ಕೆ, ಅಶೋಕ್ ದಿಡಗೆ, ವಿಜಯಕುಮಾರ ಪಾಟೀಲ ಹೆಡಗಾಪುರ, ರಮೇಶ ಬಿರಾದಾರ ಚಿಟ್ಟಾ, ಪರಮೇಶ್ವರ ಬಿರಾದಾರ, ಸಂತೋಷ ಮಂಗಳೂರೆ, ವಿಜಯಕುಮಾರ ಪಾಟೀಲ ಯರನಳ್ಳಿ, ಲಕ್ಷ್ಮಣ ಪೂಜಾರಿ, ಸಂತೋಷ ಸೋಲಪುರ, ನರಸಾರೆಡ್ಡಿ ಮಾಣಿಕರೆಡ್ಡಿ, ಸಂಗಮೇಶ ಜ್ಯಾಂತೆ, ಶಿವಕುಮಾರ ರತ್ನಾಪುರ, ಶ್ರೀದೇವಿ ಪಾಟೀಲ, ರೂಪಾ ಪಾಟೀಲ, ಜಯಶ್ರೀ ಸುಕಾಲೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

WhatsApp Image 2026 11 13 at 8.18.17 PM 9
eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ |ನೀರಿನ ಹಂಚಿಕೆಯಲ್ಲಿ ತಾರತಮ್ಯ ಬೇಡ, ಕೊನೆಯ ಅಂಚಿನ ಪ್ರದೇಶಕ್ಕೂ ನೀರು ತಲುಪಿಸಿ: ಎಂ.ಬಿ. ಪಾಟೀಲ

ಜಿಲ್ಲೆಯಲ್ಲಿ ಲಭ್ಯವಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸಿ, ಕುಡಿಯುವ ನೀರಿಗೆ ಮೊದಲ ಆದ್ಯತೆ...

ಮೈಶುಗರ್‌ ಖಾಸಗೀಕರಣ ಕುರಿತು ನಿರಾಣಿ ಹೇಳಿಕೆಗೆ ರೈತ ಹಿತರಕ್ಷಣಾ ಸಮಿತಿ ಖಂಡನೆ

ಮೈಸೂರು ಸಕ್ಕರೆ ಕಾರ್ಖಾನೆ (ಮೈಷುಗರ್) ಅನ್ನು ಜಾಗತಿಕ ಟೆಂಡರ್ ಕರೆದು ಖಾಸಗಿ...

ವಿಜಯಪುರ |ಶಿಥಿಲ ಶಾಲಾ ಕಟ್ಟಡ ತೆರವಿಗೆ ಉಪ ಲೋಕಾಯುಕ್ತರ ಸೂಚನೆ

ನಗರದ ನಂ.24ರ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಸಕರ ಮಾದರಿ ಪ್ರಾಥಮಿಕ...