ಜರ್ಮನಿಯ ಫ್ರಾಂಕ್ಫರ್ಟ್ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ನಿಂದ ಶಂಕಿತ ವಿಮಾನ ಅಪಹರಣದ (ಹೈಜಾಕ್) ಎಚ್ಚರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ, ವಿಮಾನವನ್ನು ಬುಧವಾರ ಜೈಪುರಕ್ಕೆ ಮಾರ್ಗ ಬದಲಾವಣೆ ಮಾಡಿ ಇಳಿಸಲಾಯಿತು. ‘ಎಐ-2030’ (AI-2030) ಸಂಖ್ಯೆಯ ಈ ವಿಮಾನವು ಬೆಳಿಗ್ಗೆ 9.35ಕ್ಕೆ ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು.
ಬಳಿಕ ಭದ್ರತಾ ತಪಾಸಣೆಗಾಗಿ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ (ಐಸೋಲೇಷನ್ ಬೇ) ಸ್ಥಳಾಂತರಿಸಲಾಯಿತು. ಪ್ರಾಥಮಿಕ ತಪಾಸಣೆಯ ವೇಳೆ ವಿಮಾನದ ಕಾರ್ಯಾಚರಣೆಯು ಸಹಜ ಸ್ಥಿತಿಯಲ್ಲಿರುವುದು ಕಂಡುಬಂದಿದ್ದು, ಘಟನೆಯ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಅಹಮದಾಬಾದ್ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ (ಎಟಿಸಿ) ವಿಮಾನದಿಂದ ಕೆಲವು ಸೆಕೆಂಡುಗಳ ಕಾಲ ತುರ್ತು ಸಿಗ್ನಲ್ ರವಾನೆಯಾಗಿತ್ತು. ವಿಮಾನ ಅಪಹರಣ ಅಥವಾ ವಿಮಾನದಲ್ಲಿ ಕಾನೂನುಬಾಹಿರ ಹಸ್ತಕ್ಷೇಪ ನಡೆದಾಗ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಗೌಪ್ಯವಾಗಿ ಎಚ್ಚರಿಕೆ ನೀಡಲು ಬಳಸುವ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾದ ‘ಸ್ಕ್ವಾಕ್ 7500’ (Squawk 7500) ಟ್ರಾನ್ಸ್ಪಾಂಡರ್ ಕೋಡ್ ಅನ್ನು ಪೈಲಟ್ ಸಕ್ರಿಯಗೊಳಿಸಿದ್ದರು ಎಂದು ವರದಿಯಾಗಿದೆ.
ಈ ಸಿಗ್ನಲ್ ಲಭಿಸುತ್ತಿದ್ದಂತೆಯೇ ಭದ್ರತಾ ಸಂಸ್ಥೆಗಳನ್ನು ಎಚ್ಚರಿಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಬೆಳಿಗ್ಗೆ 9.10ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದ ವಾರ್ ರೂಮ್ನಲ್ಲಿದ್ದ ಅಧಿಕಾರಿಗಳು ವಿಮಾನವನ್ನು ಜೈಪುರಕ್ಕೆ ಮಾರ್ಗ ಬದಲಾವಣೆ ಮಾಡಲು ನಿರ್ಧರಿಸಿದರು. ವಿಮಾನವು ಜೈಪುರದಲ್ಲಿ ಇಳಿದ ಬಳಿಕ, ಬೆಳಿಗ್ಗೆ 9.45ಕ್ಕೆ ಹೆಚ್ಚಿನ ತಪಾಸಣೆಗಾಗಿ ಅದನ್ನು ಐಸೋಲೇಷನ್ ಬೇಗೆ ಕೊಂಡೊಯ್ಯಲಾಯಿತು.
ಈ ತುರ್ತು ಎಚ್ಚರಿಕೆ ರವಾನೆಯಾಗಲು ಹಾಗೂ ‘ಸ್ಕ್ವಾಕ್ 7500’ ಕೋಡ್ ಸಕ್ರಿಯಗೊಳಿಸಲು ಕಾರಣವಾದ ಪರಿಸ್ಥಿತಿಯ ಕುರಿತು ಸಂಬಂಧಪಟ್ಟ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸುತ್ತಿವೆ. ವಿಸ್ತಾರಾ ಸಂಸ್ಥೆಯು 2024ರ ನವೆಂಬರ್ನಲ್ಲಿ ಏರ್ ಇಂಡಿಯಾದೊಂದಿಗೆ ವಿಲೀನಗೊಂಡಿದ್ದು, ವಿಸ್ತಾರಾ ಸಂಸ್ಥೆಯ ಬಣ್ಣ ಮತ್ತು ಲಾಂಛನವನ್ನು ಹೊಂದಿರುವ ಈ ‘ಎಐ-2030’ ವಿಮಾನವು ಪ್ರತ್ಯೇಕ ತಪಾಸಣಾ ಸ್ಥಳದಲ್ಲಿ ನಿಂತಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ.
ಜೈಪುರ ವಿಮಾನ ನಿಲ್ದಾಣದ ನಿರ್ವಹಣೆಯ ಹೊಣೆ ಹೊತ್ತಿರುವ ಅದಾನಿ ಸಮೂಹವು ಈ ಕುರಿತು ಪ್ರಕಟಣೆ ನೀಡಿದ್ದು, “ಎಐ-2030 ವಿಮಾನದಲ್ಲಿರುವ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಅವರನ್ನು ವಿಮಾನದಿಂದ ಕೆಳಗಿಳಿಸಲಾಗುತ್ತಿದ್ದು, ಪರಿಸ್ಥಿತಿ ಸಾಮಾನ್ಯವಾಗಿದೆ. ತಪಾಸಣೆಯ ನಂತರ ಪ್ರಯಾಣಿಕರನ್ನು ಅವರ ನಿಗದಿತ ಗಮ್ಯಸ್ಥಾನಕ್ಕೆ ಕಳುಹಿಸಿಕೊಡಲಾಗುವುದು. ಪರಿಸ್ಥಿತಿ ಸಹಜವಾಗಿದ್ದು, ಪ್ರಯಾಣಿಕರು ಹಾಗೂ ಅವರ ಸಂಬಂಧಿಕರು ಆತಂಕಪಡಬಾರದು ಎಂದು ವಿನಂತಿಸುತ್ತೇವೆ. ಮುಂದಿನ ಬೆಳವಣಿಗೆಗಳ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು” ಎಂದು ತಿಳಿಸಿದೆ.





