ಭಾರತೀಯ ಇತರ ಭಾಷೆಗಳ ಗೌರವ, ಪ್ರಚಾರ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಮಾತ್ರ ಹಿಂದಿ ಭಾಷೆಯ ಪ್ರಗತಿ ಅರ್ಥಪೂರ್ಣವಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
ಹಿಂದಿ ದಿವಸ್ ಅಂಗವಾಗಿ ಶುಭಾಶಯ ಕೋರಿ ಟ್ವೀಟ್ ಮಾಡಿರುವ ಅವರು, “ಭಾರತವು ಭಾಷಿಕ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಸಮೃದ್ಧಿಯ ನಾಡಾಗಿದ್ದು, ದೇಶದ ವಿವಿಧ ಭಾಷೆಗಳು ಬಲವೇ ಹೊರತು, ದೌರ್ಬಲ್ಯವಲ್ಲ” ಎಂದಿದ್ದಾರೆ.
“ನಮ್ಮ ಭಾಷೆಗಳು ವೈವಿಧ್ಯಮಯವಾಗಿವೆ, ಅದೇ ನಮ್ಮ ದೌರ್ಬಲ್ಯ ಎಂದು ಕೆಲವರು ಹೇಳುತ್ತಾರೆ. ಆದರೆ, ಇಷ್ಟೊಂದು ಭಾಷೆಗಳನ್ನು ಹೊಂದಿರುವುದೇ ನಮ್ಮ ದೇಶದ ಅತಿದೊಡ್ಡ ಶಕ್ತಿ ಎಂಬುದು ನನ್ನ ನಂಬಿಕೆ” ಎಂದು ಅಮಿತ್ ಶಾ ಸಂದೇಶ ನೀಡಿದ್ದಾರೆ.
“ಪ್ರತಿಯೊಂದು ಭಾಷೆಯೂ ತನ್ನದೇ ಆದ ಇತಿಹಾಸ, ಜನಪದ ಪರಂಪರೆ ಹಾಗೂ ದೃಷ್ಟಿಕೋನವನ್ನು ಹೊಂದಿದೆ. ಅದು ಯುವ ಪೀಳಿಗೆಯ ಮೌಲ್ಯಗಳಿಗೆ ಕೊಡುಗೆ ನೀಡುತ್ತದೆ. ಭಾರತದ ಭಾಷಿಕ ವೈವಿಧ್ಯತೆಯು ದೇಶದ ‘ವೈವಿಧ್ಯತೆಯಲ್ಲಿ ಏಕತೆ’ಯ ಭಾವನೆಯನ್ನು ಬಲಪಡಿಸುತ್ತದೆ” ಎಂದು ಅವರು ಹೇಳಿದ್ದಾರೆ.
“ಭಾಷೆಯು ಕೇವಲ ಸಂವಹನದ ಮಾಧ್ಯಮವಲ್ಲ, ಅದು ಸಮಾಜದ ‘ನೆನಪು’ ಮತ್ತು ‘ಆತ್ಮಸಾಕ್ಷಿ’ಯಾಗಿದೆ. ಸಂವಾದ, ಸಂಪರ್ಕ ಮತ್ತು ಸಮನ್ವಯದ ಭಾಷೆಯಾಗಿ ವಿವಿಧ ವಿಭಾಗಗಳು ಹಾಗೂ ಸಮುದಾಯಗಳನ್ನು ಒಂದೆಡೆ ತರುವಲ್ಲಿ ಹಿಂದಿ ಪ್ರಮುಖ ಪಾತ್ರ ವಹಿಸಿದೆ” ಎಂದು ಅವರು ಉಲ್ಲೇಖಿಸಿದ್ದಾರೆ.
“ಇತರ ಭಾರತೀಯ ಭಾಷೆಗಳ ಗೌರವ, ಉತ್ತೇಜನ ಮತ್ತು ರಕ್ಷಣೆಯನ್ನು ಖಾತ್ರಿಪಡಿಸಿಕೊಂಡು ಮುನ್ನಡೆದಾಗ ಮಾತ್ರ ಹಿಂದಿಯ ಪ್ರಗತಿಗೆ ನಿಜವಾದ ಉದ್ದೇಶ ಸಿಗುತ್ತದೆ. ಹಿಂದಿಯನ್ನು ಯಾವುದೇ ಒಂದೇ ಭಾಷೆಯ ಪ್ರತಿನಿಧಿಯಾಗಿ ನೋಡಬಾರದು, ಬದಲಿಗೆ ಭಾರತದ ಭಾಷೆಗಳು ಮತ್ತು ರಾಷ್ಟ್ರೀಯ ಏಕತೆಯ ನಡುವಿನ ಮುಖ್ಯ ಕೊಂಡಿಯಾಗಿ ನೋಡಬೇಕು” ಎಂದು ಪ್ರತಿಪಾದಿಸಿದ್ದಾರೆ.
“ನಮ್ಮ ಮಾತೃಭಾಷೆ ಗುಜರಾತಿಯಾಗಿದ್ದರೂ, ಹಿಂದಿ ಭಾಷೆಯು ದೇಶದ ವಿವಿಧ ಭಾಗಗಳ ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ನೆರವಾಗುತ್ತಿದೆ. ಜಗತ್ತಿನ ಯಾವುದೇ ಭಾಷೆಗಳನ್ನು ಕಲಿತರೂ, ಸ್ವಂತ ಮಾತೃಭಾಷೆಯನ್ನು ಮರೆಯಬಾರದು. ಪೋಷಕರು ತಮ್ಮ ಮಕ್ಕಳೊಂದಿಗೆ ಮಾತೃಭಾಷೆಯಲ್ಲೇ ವ್ಯವಹರಿಸಬೇಕು. ನಮ್ಮ ತಾಯಿ, ಮಣ್ಣು, ಇತಿಹಾಸ ಮತ್ತು ಸಂಸ್ಕೃತಿಗೆ ನಮ್ಮನ್ನು ಜೋಡಿಸುವುದು ಭಾಷೆಯೇ ಆಗಿದೆ” ಎಂದು ಅಮಿತ್‌ಶಾ ಹೇಳಿದ್ದಾರೆ.
ಅಂದಹಾಗೆ, ಇದೇ ಮೋದಿ-ಶಾ ನೇತೃತ್ವದ ಕೇಂದ್ರ ಸರ್ಕಾರವು ‘ಏಕ ರಾಷ್ಟ್ರ, ಏಕ ಭಾಷೆ’ ಎಂಬ ಕಲ್ಪನೆಯಡಿ ಹಿಂದಿಗೆ ಹೆಚ್ಚು ಆದ್ಯತೆ ನೀಡಿ, ಅದನ್ನು ಸಂಪರ್ಕ ಭಾಷೆಯನ್ನಾಗಿ ಸಾರ್ವತ್ರಿಕಗೊಳಿಸಲು ಮತ್ತು ಎಲ್ಲ ರಾಜ್ಯಗಳ ಮೇಲೆ ಹೇರಲು ಪ್ರಯತ್ನಿಸಿತ್ತು. ಆದರೆ, ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳಿಂದ ‘ಹಿಂದಿ ಹೇರಿಕೆ’ ವಿರುದ್ಧ ತೀವ್ರ ಆಕ್ರೋಶ ಮತ್ತು ಸಾರ್ವಜನಿಕ ಪ್ರತಿಭಟನೆಗಳನ್ನು ಎದುರಿಸಿತು. ಭಾರತದ ಭಾಷಿಕ ವೈವಿಧ್ಯತೆ ಮತ್ತು ಪ್ರಾದೇಶಿಕ ಭಾಷೆಗಳ ಅಸ್ಮಿತೆಗೆ ಧಕ್ಕೆಯಾಗುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿಬಂದಾಗ ಮೋದಿ-ಶಾ ಸರ್ಕಾರವು ತೀವ್ರ ರಾಜಕೀಯ ಮತ್ತು ಸಾಮಾಜಿಕ ಒತ್ತಡಕ್ಕೆ ಸಿಲುಕಿತ್ತು.
ಈ ತೀವ್ರ ವಿರೋಧ ಮತ್ತು ಜನಾಗ್ರಹದ ಪರಿಣಾಮವಾಗಿ ಕೇಂದ್ರ ಸರ್ಕಾರ ತನ್ನ ಭಾಷಾ ಶೈಲಿ ಮತ್ತು ವರಸೆಯನ್ನು ಬದಲಿಸಿಕೊಂಡಿದೆ. ಅದರಂತೆ, ಈಗ ಅಮಿತ್ ಶಾ ಅವರು ಇತರ ಪ್ರಾದೇಶಿಕ ಭಾಷೆಗಳನ್ನು ಗೌರವಿಸಿ, ರಕ್ಷಿಸಿದಾಗ ಮಾತ್ರ ಹಿಂದಿಯ ಪ್ರಗತಿಗೆ ಅರ್ಥ ಬರುತ್ತದೆ ಎಂದು ಪ್ರತಿಪಾದಿಸುತ್ತಿದ್ದಾರೆ.



