ಛತ್ತೀಸ್‌ಗಢದ ಬಲರಾಮಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸ್ವಘೋಷಿತ ದೇವಮಾನವ ಅಸಾರಾಂ ಬಾಪೂಗೆ ಸಂಬಂಧಿಸಿದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಹಂಚಿದ ಗಂಭೀರ ಆರೋಪದ ಮೇಲೆ, ಶಾಲೆಯ ಮುಖ್ಯಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ರಘುನಾಥಪುರ ಗ್ರಾಮದ ʼಸ್ವಾಮಿ ಆತ್ಮಾನಂದ ಗೌರ್ಮೆಂಟ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಆಫ್ ಎಕ್ಸಲೆನ್ಸ್ʼ ನಲ್ಲಿ ಅಕ್ಟೋಬರ್ 26ರಂದು ಶಾಲೆಯ ವಿದ್ಯಾರ್ಥಿಗಳಿಗೆ ಈ ಪುಸ್ತಕಗಳನ್ನು ನೀಡಲಾಗಿತ್ತು. ಮಕ್ಕಳು ಮನೆಗೆ ತಂದಿದ್ದ ಪುಸ್ತಕಗಳನ್ನು ನೋಡಿ ಆಘಾತಗೊಂಡ ಪೋಷಕರು, ತಕ್ಷಣವೇ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು.
ಬಲರಾಮಪುರ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ನರೇಂದ್ರ ನಿರಾಪುರೆ ಈ ಬಗ್ಗೆ ಪ್ರತಿಕ್ರಿಯಿಸಿ, “ಬ್ಲಾಕ್ ಶಿಕ್ಷಣಾಧಿಕಾರಿಗೆ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಪ್ರಾಥಮಿಕ ತನಿಖಾ ವರದಿಯ ಆಧಾರದ ಮೇಲೆ ಶಾಲೆಯ ಮುಖ್ಯೋಪಾಧ್ಯಾಯ ಮಹೇಶ್ ಪ್ರಜಾಪತಿ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹುದ್ದೆಯಿಂದ ವಜಾಗೊಳಿಸಲಾಗಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ” ಎಂದು ಮಾಹಿತಿ ನೀಡಿದ್ದಾರೆ.
ಅಸಾರಾಂ ಅನುಯಾಯಿಗಳು ಶಾಲೆಗೆ ಭೇಟಿ ನೀಡಿದ್ದಾಗ ಮುಖ್ಯೋಪಾಧ್ಯಾಯರ ಸಮ್ಮುಖದಲ್ಲೇ ‘ಸಂಸ್ಕಾರ ಸರಿತಾ’, ‘ವ್ರತ ನಿಯಮ’ ಮತ್ತು ‘ವಸುಧೈವ ಕುಟುಂಬಕಂ’ ಎಂಬ ಶೀರ್ಷಿಕೆಯುಳ್ಳ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿತ್ತು ಎಂದು ವಿದ್ಯಾರ್ಥಿಯೊಬ್ಬರ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಈ ಪುಸ್ತಕಗಳಲ್ಲಿ ಅಸಾರಾಂ ತತ್ತ್ವಗಳು ಮತ್ತು ಆತನ ಆಶ್ರಮದ ಪ್ರಚಾರದ ವಿಷಯಗಳಿವೆ. ಅಸಾರಾಂ ಅಪ್ರಾಪ್ತೆಯ ಮೇಲಿನ ಅತ್ಯಾಚಾರದಂತಹ ಗಂಭೀರ ಅಪರಾಧಕ್ಕಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಸರ್ಕಾರವೇ ಆತನ ಆಶ್ರಮಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇಂತಹ ವ್ಯಕ್ತಿಯ ಪ್ರಚಾರದ ವಸ್ತುಗಳನ್ನು ಚಿಕ್ಕ ಮಕ್ಕಳ ಕೈಗೆ ಕೊಟ್ಟಿರುವುದು ಅಕ್ಷಮ್ಯ ಅಪರಾಧ. ಮುಖ್ಯೋಪಾಧ್ಯಾಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆಯು ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಲು ಅಸಾರಾಂ ಬಾಪೂವಿನ ಕರಾಳ ಇತಿಹಾಸವೇ ಮುಖ್ಯ ಕಾರಣವಾಗಿದೆ. 1970ರ ದಶಕದಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಣ್ಣ ಆಶ್ರಮದ ಮೂಲಕ ಪಯಣ ಆರಂಭಿಸಿದ ಅಸಾರಾಂ (ಅಸುಮಲ್ ಸಿರುಮಲಾನಿ), ಕೆಲವೇ ದಶಕಗಳಲ್ಲಿ ದೇಶ-ವಿದೇಶಗಳಲ್ಲಿ ಕೋಟ್ಯಂತರ ಅನುಯಾಯಿಗಳನ್ನು ಸಂಪಾದಿಸಿದ್ದ. ‘ಸಂಸ್ಕಾರ’ ಮತ್ತು ‘ಧಾರ್ಮಿಕ ಶಿಕ್ಷಣ’ ನೀಡುವ ಹೆಸರಿನಲ್ಲಿ ನೂರಾರು ಆಶ್ರಮಗಳನ್ನು, ಗುರುಕುಲಗಳನ್ನು ಕಟ್ಟಿಕೊಂಡಿದ್ದ ಈತ, ಆಧ್ಯಾತ್ಮಿಕ ಸಾಮ್ರಾಜ್ಯವನ್ನೇ ನಿರ್ಮಿಸಿದ್ದ.
ಅಸಾರಾಂನ ಅಸಲಿ ಮುಖವಾಡ ಕಳಚಿಬಿದ್ದಿದ್ದು 2013ರಲ್ಲಿ. ಜೋಧ್‌ಪುರ ಸಮೀಪದ ಮಣೈ ಆಶ್ರಮದಲ್ಲಿ ತನ್ನ ಶಾಲೆಗೆ ಸೇರಿದ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಧಾರ್ಮಿಕ ವಿಧಿವಿಧಾನಗಳ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಈತನ ಮೇಲೆ ಕೇಳಿಬಂದಿತ್ತು. ಬಾಲಕಿಯ ಕುಟುಂಬಸ್ಥರು ದೆಹಲಿಯ ಸೌತ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ರಾಜಸ್ಥಾನ ಪೊಲೀಸರು ಅಸಾರಾಂನನ್ನು ಬಂಧಿಸಿದ್ದರು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಜೋಧ್‌ಪುರದ ವಿಶೇಷ ನ್ಯಾಯಾಲಯ, 2018ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು.
ಇದಷ್ಟೇ ಅಲ್ಲದೆ, 2001 ಮತ್ತು 2006ರ ನಡುವೆ ಅಹಮದಾಬಾದ್ ಸಮೀಪದ ಆಶ್ರಮದಲ್ಲಿದ್ದ ಮಹಿಳೆಯೊಬ್ಬರ ಮೇಲೆ ನಿರಂತರ ಅತ್ಯಾಚಾರ ಎಸಗಿದ ಪ್ರಕರಣದಲ್ಲೂ ಅಸಾರಾಂ ತಪ್ಪಿತಸ್ಥನೆಂದು ಸಾಬೀತಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರಲ್ಲಿ ಗುಜರಾತ್‌ನ ಗಾಂಧಿನಗರ ನ್ಯಾಯಾಲಯವು ಆತನಿಗೆ ಮತ್ತೊಂದು ಜೀವಾವಧಿ ಜೈಲು ಶಿಕ್ಷೆ ವಿಧಿಸಿತು.
ವಿಚಾರಣೆ ಹಂತದಲ್ಲಿದ್ದಾಗ ಅಸಾರಾಂ ವಿರುದ್ಧ ಸಾಕ್ಷಿ ಹೇಳಲು ಬಂದವರ ಮೇಲೆ ನಿಗೂಢ ದಾಳಿಗಳು ನಡೆದವು. ಇಬ್ಬರು ಪ್ರಮುಖ ಸಾಕ್ಷಿಗಳನ್ನು ಹತ್ಯೆ ಮಾಡಲಾಯಿತು. ಈ ಎಲ್ಲಾ ಗಂಭೀರ ಕೃತ್ಯಗಳ ಹಿನ್ನೆಲೆಯಲ್ಲಿ ದೇಶಾದ್ಯಂತ ಆತನ ಆಶ್ರಮಗಳ ಮೇಲೆ ಸರ್ಕಾರಗಳು ಕ್ರಮ ಕೈಗೊಂಡು, ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡವು.
ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಒಬ್ಬ ಅಪರಾಧಿಯ ಪ್ರಚಾರ ಸಾಮಗ್ರಿಗಳು, ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದ ಸರ್ಕಾರಿ ಶಾಲೆಯೊಳಗೆ ಪ್ರವೇಶಿಸಿರುವುದು ಶಿಕ್ಷಣ ವ್ಯವಸ್ಥೆಯ ಸುರಕ್ಷತೆ ಮತ್ತು ತನಿಖೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಪೋಷಕರು ಸಮಯಕ್ಕೆ ಸರಿಯಾಗಿ ಜಾಗೃತರಾಗಿ ಧ್ವನಿ ಎತ್ತಿದ್ದರಿಂದ, ಸರ್ಕಾರ ತಕ್ಷಣವೇ ಹೆಡ್‌ಮಾಸ್ಟರ್ ವಿರುದ್ಧ ಕ್ರಮ ಕೈಗೊಂಡಿದೆ. ಆದರೆ, ಇಂತಹ ಪ್ರಚಾರಗಳು ಶಾಲೆಗಳ ಮಟ್ಟದಲ್ಲಿ ಮರುಕಳಿಸದಂತೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಬೇಕಿದೆ.




