ದುಲಾರ್‌ಚಂದ್ ಯಾದವ್ ಭೀಕರ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ಡಿಸೆಂಬರ್ 4ರಂದು ಶರಣಾಗಬೇಕಿರುವ ಮೊಕಮಾ ಶಾಸಕ ಹಾಗೂ ಕುಖ್ಯಾತ ಬಾಹುಬಲಿ ನಾಯಕ ಅನಂತ್ ಸಿಂಗ್, ತಮ್ಮ ಮಗಳು ಶಿವಾಂಗಿ ಸಿಂಗ್ ಹಾಗೂ ಬಿಹ್ತಾದ ಕಮಾಂಡೆಂಟ್ ರಣವಿಜಯ್ ಕುಮಾರ್ ಅವರ ಪುತ್ರ ಋಷಿಕೇಶ್ ಕುಮಾರ್ (ಅಂಕಿತ್) ಮದುವೆ ನೆಪದಲ್ಲಿ ಬಿಹಾರದ ಲಾಡ್ಮಾ ಗ್ರಾಮದಲ್ಲಿ ಅಪಾರ ಪ್ರಮಾಣದ ಸಂಪತ್ತಿನ ಪ್ರದರ್ಶನಕ್ಕಿಳಿದಿದ್ದಾರೆ.
ಸುಮಾರು 38ಕ್ಕೂ ಹೆಚ್ಚು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಅನಂತ್ ಸಿಂಗ್, ತಮಗೆ ಎಷ್ಟೇ ಕಠಿಣ ಕಾನೂನು ಸಂಕೋಲೆಗಳು ಬಿದ್ದಿದ್ದರೂ ತಮ್ಮ ರಾಜಕೀಯ ಹಾಗೂ ಆರ್ಥಿಕ ಅಧಿಪತ್ಯ ಕುಗ್ಗಿಲ್ಲ ಎಂಬುದನ್ನು ತೋರಿಸಲು ಈ ಕಲ್ಯಾಣ ಮಹೋತ್ಸವವನ್ನು ಬಳಸಿಕೊಳ್ಳುತ್ತಿದ್ದಾರೆ.
ಅಮೆರಿಕದಲ್ಲಿ MBA ಮುಗಿಸಿರುವ ವರನಿಗೆ ₹2.5 ರಿಂದ ₹3 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಹಾಗೂ ಇತ್ತೀಚೆಗೆ ಶಾಸಕ ಸ್ಥಾನ ರದ್ದತಿಗೆ ಕಾರಣವಾದ ಪ್ರಕರಣಗಳ ನಡುವೆಯೂ ಕಿರಿಯ ಮಗ ಅಭಿನವ್ ಉಪನಯನಕ್ಕಾಗಿ ₹1 ಕೋಟಿ ಮೌಲ್ಯದ BMW ಕಾರನ್ನು ತರಿಸಿ ಗ್ರಾಮದಲ್ಲಿ ಭೀತಿ ಮತ್ತು ಅಚ್ಚರಿಯ ವಾತಾವರಣ ನಿರ್ಮಿಸಲಾಗಿದೆ.
4 ಲಕ್ಷಕ್ಕೂ ಹೆಚ್ಚು ಜನರು ಮದುವೆಗೆ ಬರುವ ನಿರೀಕ್ಷೆಯಿದ್ದು, ಸುತ್ತಮುತ್ತಲೂ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಕೇವಲ ವಿವಾಹ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತವಾಗದೆ, 12 ಬಿಘಾ ಮೈದಾನದಲ್ಲಿ ತಮ್ಮ ಪ್ರಭಾವದ ಪ್ರದರ್ಶನಕ್ಕಾಗಿ ಕುದುರೆ ರೇಸ್ ಆಯೋಜಿಸಲಾಗಿದೆ. ನವೆಂಬರ್ 25ರಂದು ಮಧ್ಯಾಹ್ನ 2ರಿಂದ 4ರವರೆಗೆ ವಿವಿಧ ರಾಜ್ಯಗಳ ಸ್ಪರ್ಧಿಗಳ ನಡುವೆ ನಡೆಯುವ ಈ ರೇಸ್‌ನಲ್ಲಿ ಉನ್ನತ ಬಹುಮಾನವಾಗಿ SUV ಕಾರು, ಬೈಕ್ ಹಾಗೂ ಸ್ಕೂಟರ್ ನೀಡಲಾಗುತ್ತಿದ್ದು, ಇದು ಆ ಪ್ರದೇಶದಲ್ಲಿ ತಮ್ಮ ಹಿಡಿತ ಸಾಧಿಸುವ ಹಳೆಯ ಬಾಹುಬಲಿ ತಂತ್ರ ಎಂದೇ ವಿಶ್ಲೇಷಿಸಲಾಗುತ್ತಿದೆ.
ಜೈಪುರದ ಪತ್ರಕಾರ್ ಚೌರಾಹಾ ಮಾದರಿಯ 30 ಅಡಿ ಎತ್ತರದ ‘ಜೈಮಾಲಾ’ ವೇದಿಕೆ, ಚೀನಾ ಮತ್ತು ಬೆಂಗಳೂರಿನಿಂದ ತರಿಸಿದ ಹೂವುಗಳು, ಉತ್ತರ ಪ್ರದೇಶದಿಂದ ಕರೆತರಲಾದ ಕಾರ್ಮಿಕರು ಹಾಗೂ 150ಕ್ಕೂ ಹೆಚ್ಚು ಖಾದ್ಯಗಳ ವ್ಯವಸ್ಥೆ ಒಂದೆಡೆಯಾದರೆ, ದುಬೈನಿಂದ 6 ಮಾಡೆಲ್‌ಗಳು ಮತ್ತು ಬಾಲಿವುಡ್/ಭೋಜ್‌ಪುರಿ ಕಲಾವಿದರನ್ನು ಕರೆತರುತ್ತಿರುವುದು ಸ್ಥಳೀಯವಾಗಿ ವ್ಯಾಪಕ ಟೀಕೆಗೂ ಗುರಿಯಾಗಿದೆ.
1990 ಮತ್ತು 1995ರಲ್ಲಿ ಸಹೋದರ ದಿಲೀಪ್ ಸಿಂಗ್ ಸಚಿವರಾಗಿದ್ದ ಕಾಲದಿಂದಲೂ ಮೊಕಮಾವನ್ನು ತಮ್ಮ ಕಂಟ್ರೋಲ್‌ನಲ್ಲಿಟ್ಟುಕೊಂಡಿರುವ ಅನಂತ್ ಸಿಂಗ್ ಕುಟುಂಬ, 2005ರಿಂದೀಚೆಗೆ ಜೆಡಿಯು ಹಾಗೂ ಆರ್‌ಜೆಡಿ ಪಕ್ಷಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾ ಬಂದಿದೆ. 2015ರ ಪುಟುಸ್ ಯಾದವ್ ಅಪಹರಣ-ಕೊಲೆ ಪ್ರಕರಣ, 2019ರಲ್ಲಿ ಇವರ ಮನೆಯಲ್ಲಿ ದೊರೆತ ಎಕೆ-47 ರೈಫಲ್ ಹಾಗೂ ಹ್ಯಾಂಡ್ ಗ್ರೆನೇಡ್‌ಗಳ ಕಾರ್ಯಾಚರಣೆ (UAPA ಕಾಯ್ದೆ) ಮತ್ತು ಇತ್ತೀಚಿನ ದುಲಾರ್‌ಚಂದ್ ಕೊಲೆ ಪ್ರಕರಣಗಳು ಇವರ ಭೀಕರ ಅಪರಾಧ ಹಿನ್ನೆಲೆಯನ್ನು ಎತ್ತಿಹಿಡಿಯುತ್ತವೆ. 2022ರಲ್ಲಿ ಶಿಕ್ಷೆಯಾಗಿ ಶಾಸಕ ಸ್ಥಾನ ರದ್ದಾದಾಗ ಪತ್ನಿ ನೀಲಮ್ ದೇವಿ ಮೂಲಕ ಅಧಿಕಾರ ಹಿಡಿದಿಟ್ಟುಕೊಂಡಿರುವುದು ಇವರ ರಾಜಕೀಯ ಗೂಂಡಾಗಿರಿಗೆ ಸಾಕ್ಷಿಯಾಗಿದೆ.
ಪ್ರಧಾನಿ ಮೋದಿ, ನಿತೀಶ್ ಕುಮಾರ್, ಲಾಲು ಯಾದವ್ ಸೇರಿದಂತೆ ಹೈಪ್ರೊಫೈಲ್ ನಾಯಕರಿಗೆ ಆಹ್ವಾನ ಕಳುಹಿಸುವ ಮೂಲಕ, ಸುಪ್ರೀಂ ಕೋರ್ಟ್‌ಗೆ ಶರಣಾಗುವ ಕೆಲವು ದಿನಗಳ ಮೊದಲು ತಮ್ಮ ರಾಜಕೀಯ ಪ್ರಭಾವ ಮತ್ತು ಬಾಹುಬಲ ಇಂದಿಗೂ ಜೀವಂತವಾಗಿದೆ ಎಂದು ತೋರಿಸಲು ಅನಂತ್ ಸಿಂಗ್ ಯತ್ನಿಸುತ್ತಿದ್ದಾರೆ.




