ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಎನ್‌ಟಿಎ ನಡೆಸಿದ ಹಲವು ಶೈಕ್ಷಣಿಕ ಅವಾಂತರಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಧರಣಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಸಿಜೆಪಿ ವಿನೂತನ ಅಭಿಯಾನಕ್ಕೆ ಕರೆ ನೀಡಿದೆ. ಅದುವೇ ‘ಡೈಪರ್’ ಅಭಿಯಾನ!
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿರುವ ಸಿಜೆಪಿ ಬೆಂಬಲಿಗ, “ಇಂದು ದೆಹಲಿಯ ಜಂತರ್‌ಮಂತರ್‌ನಲ್ಲಿ ನಾಲ್ಕನೇ ದಿನದ ಧರಣಿ. ಇಂದು ಡೈಪರ್ ಡೊನೇಶನ್ ಅಭಿಯಾನ ನಡೆಯಲಿದೆ. ನೀವು ಡೈಪರ್ ತನ್ನಿ, ಅದರ ಮೇಲೆ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಬರೆಯಿರಿ. ಅದನ್ನು ಇಲ್ಲಿರುವ ಬಾಕ್ಸ್‌ನ ಒಳಗೆ ಹಾಕಿ. ಅಲ್ಲಿಂದ ಶಿಕ್ಷಣ ಸಚಿವರಿಗೆ ತಲುಪಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; ಬಿಹಾರ ಮಾತ್ರವಲ್ಲ ಮಹಾರಾಷ್ಟ್ರಕ್ಕೂ ‘ಲಿಂಕ್’
“ದಿನಕ್ಕೊಂದು ಡೈಪರ್ ಸೋರಿಕೆಯಿಂದ ನಮ್ಮನ್ನು ಕಾಪಾಡುತ್ತದೆ” ಎಂದು ಸಿಜೆಪಿ ವ್ಯಂಗ್ಯಾತ್ಮಕ ಅಭಿಯಾನವನ್ನು ನಡೆಸುತ್ತಿದೆ. ಇದೀಗ ಸಾಮಾಜಿಕ ಮಾಧ್ಯಮಗಳಲ್ಲೂ ಈ ಅಭಿಯಾನದ್ದೇ ಸದ್ದು. “ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಈ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲು, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ನಿಮ್ಮ ಕೈಲಾಗದಿದ್ದರೆ, ಡೈಪರ್ ಬಳಸಿ” ಎಂದು ಯುವಜನತೆ ಮತ್ತು ವಿದ್ಯಾರ್ಥಿ ಸಂಘಟನೆಗಳು ಸರ್ಕಾರದ ವಿರುದ್ಧ ವ್ಯಂಗ್ಯವಾಡುತ್ತಿವೆ.
ಈ ನಡುವೆ ಪೊಲೀಸರು ಪ್ರತಿಭಟನಾ ಪ್ರದೇಶವನ್ನು ಬ್ಯಾರಿಕೇಟ್ ಹಾಕಿ ಸಣ್ಣದಾಗಿಸಲು ಯತ್ನಿಸಿದ್ದಾರೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಆರೋಪಿಸಿದ್ದಾರೆ. ಸೋಮವಾರ ತಡರಾತ್ರಿ, ದೆಹಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಸ್ಥಳಾಂತರಿಸಿದ್ದಾರೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಆದರೆ ದೆಹಲಿ ಪೊಲೀಸರು ಮಾತ್ರ ಇದಕ್ಕೆ ಪ್ರತಿಕ್ರಿಯಿಸಿಲ್ಲ.
ಸಿಜೆಪಿ ಧರಣಿಗೆ ರೈತರ ಬೆಂಬಲ
ಸಿಜೆಪಿ ಧರಣಿಗೆ ವಿದ್ಯಾರ್ಥಿಗಳು ಮತ್ತು ಯುವಜನತೆಯ ಜೊತೆಗೆ ಈಗ ರೈತ ಸಂಘಟನೆಗಳೂ ಬೆಂಬಲ ನೀಡುತ್ತಿದೆ. ದೇಶದ ಬೆನ್ನೆಲುಬಾದ ರೈತ ಸಂಘಟನೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಧ್ವನಿಗೂಡಿಸಿ ಜಂತರ್ ಮಂತರ್ ತಲುಪುತ್ತಿವೆ.
ಈ ಬಗ್ಗೆ ಕಾಕ್ರೋಚ್ ಇಸ್ ಬ್ಯಾಕ್ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. “ನಮ್ಮ ರೈತ ಸಹೋದರರು ಇಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಆಗಮಿಸಿದ್ದಾರೆ. ನಮ್ಮ ಪ್ರತಿಭಟನೆಗೆ ಅವರ ಬೆಂಬಲ ಪಡೆಯುವುದು ನಮಗೆ ಹೆಮ್ಮೆಯ ವಿಷಯ. ನಮ್ಮ ಬೇಡಿಕೆಗಳು ವಿಭಿನ್ನವಾಗಿವೆ, ಆದರೆ ನಂಬಿಕೆ ಒಂದೇ. ಸಾಮಾನ್ಯ ಜನರಿಗೆ ಕೇಳುವ ಹಕ್ಕಿದೆ” ಎಂದು ಸಿಜೆಪಿ ಹೇಳಿದೆ.
ಇನ್ನೊಂದು ಪೋಸ್ಟ್‌ನಲ್ಲಿ, “ಬ್ಯಾರಿಕೇಡ್‌ಗಳು ನಮ್ಮನ್ನು ಭೌತಿಕವಾಗಿ ಬೇರ್ಪಡಿಸಬಹುದು. ಆದರೆ ನಮ್ಮ ಉದ್ದೇಶವನ್ನಲ್ಲ. ನ್ಯಾಯಕ್ಕಾಗಿ ನಮ್ಮ ಹೋರಾಟದಲ್ಲಿ ರೈತರು ಮತ್ತು ವಿದ್ಯಾರ್ಥಿಗಳು ಒಗ್ಗಟ್ಟಾಗಿ ನಿಂತಿದ್ದಾರೆ” ಎಂದು ತಿಳಿಸಿದೆ.




