ಉಪರಾಜ್ಯಪಾಲರ (L-G) ನೇತೃತ್ವದ ಲಡಾಖ್ ಆಡಳಿತವು ತಮ್ಮ ವಿರುದ್ಧ ಸುಳ್ಳು ಪ್ರಚಾರ, ಮಾನಹಾನಿ ಅಭಿಯಾನ ನಡೆಸುತ್ತಿದೆ ಎಂದು ಲಡಾಖ್‌ನ ಪ್ರಮುಖ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ತಕ್ಷಣದ ಹಸ್ತಕ್ಷೇಪವನ್ನು ಕೋರಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಕಚೇರಿಯು ತಮ್ಮ ಮತ್ತು ಇತರ ಸ್ಥಳೀಯ ನಾಯಕರ ವರ್ಚಸ್ಸಿಗೆ ಧಕ್ಕೆ ತರಲು ತೆರಿಗೆದಾರರ ಹಣವನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮತ್ತು ‘ವಿಚ್-ಹಂಟ್’ ನಡೆಸುತ್ತಿದೆ ಎಂದು ದೂರಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿರುವ ವಾಂಗ್‌ಚುಕ್, ಲಡಾಖ್‌ನಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮರುಸ್ಥಾಪಿಸಲು ತಕ್ಷಣವೇ ಹಸ್ತಕ್ಷೇಪ ಮಾಡಬೇಕೆಂದು ವಿನಂತಿಸಿದ್ದಾರೆ.
ಇದನ್ನೂ ಓದಿ: ಪ್ರತಿಭಟನೆಗೆ ವಾಂಗ್‌ಚುಕ್ ಬೆಂಬಲ: ಲಡಾಖ್‌ನ ‘ನೀರಿನ ಜೈವಿಕ ಬಾಂಬ್‌ಗಳ’ ಕಡೆಗೆ ಗಮನ ಹರಿಸಲು ಮನವಿ
ಕಳೆದ 6 ವರ್ಷಗಳಿಂದ ಲಡಾಖ್ ಅನ್ನು ಒಂದು ರೀತಿಯ ‘ಪೋಲಿಸ್ ರಾಜ್ಯ’ವನ್ನಾಗಿ ಬದಲಾಯಿಸಲಾಗಿದೆ. ದೇಶದ ಇತರೆ ಭಾಗಗಳಲ್ಲಿ ಇರುವಂತಹ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಲಡಾಖ್ ನಿವಾಸಿಗಳಿಗೆ ಸಿಗುತ್ತಿಲ್ಲ. ಜಾಲತಾಣಗಳಲ್ಲಿ ಆಡಳಿತದ ವಿರುದ್ಧ ಮಾಡುವ ಸಣ್ಣ ಕಾಮೆಂಟ್ ಅಥವಾ ಲೈಕ್‌ಗಳಿಗೂ ಎಫ್‌ಐಆರ್ ದಾಖಲಿಸಿ, ಜನರನ್ನು ಬಂಧಿಸಲಾಗುತ್ತಿದೆ ಎಂದು ದೂರಿದ್ದಾರೆ.
ವಾಂಗ್‌ಚುಕ್ ನೇತೃತ್ವದ ‘ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್, ಲಡಾಖ್’ (HIAL) ಮತ್ತು ಅದಕ್ಕೆ ಸಂಯೋಜಿತವಾಗಿರುವ ಶಾಲೆಗಳಿಗೆ (ಡೆಸರ್ಟ್ ಫ್ಲವರ್ ಸ್ಕೂಲ್ ಸೇರಿದಂತೆ) ವಿವಿಧ ರೀತಿಯ ಆಡಳಿತಾತ್ಮಕ ನೋಟಿಸ್ ನೀಡುವ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂಬ ದೂರೂ ಇದೆ.
ಆಡಳಿತವು ಜಾರಿಗೆ ತರುತ್ತಿರುವ ಭೂಮಿ, ಪ್ರವಾಸೋದ್ಯಮ ಮತ್ತು ವಿದ್ಯುತ್ ನೀತಿಗಳು ಸ್ಥಳೀಯ ರೈತರು ಹಾಗೂ ಜನಸಾಮಾನ್ಯರ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಬೃಹತ್ ಕಾರ್ಪೊರೇಟ್‌ಗಳಿಗೆ ಅನುಕೂಲಕರವಾಗಿವೆ ಎಂಬುದು ವಾಂಗ್‌ಚುಕ್ ಆರೋಪವಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಗಡಿ ಪ್ರದೇಶವಾದ ಲಡಾಖ್ ನಿವಾಸಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಎತ್ತಿಹಿಡಿಯಲು ಮತ್ತು ಆಡಳಿತ ದುರುಪಯೋಗವನ್ನು ತಡೆಯಲು ರಾಷ್ಟ್ರಪತಿಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಾಂಗ್‌ಚುಕ್ ಆಗ್ರಹಿಸಿದ್ದಾರೆ.
ವಾಂಗ್‌ಚುಕ್ ಅವರ ಈ ಆರೋಪಗಳಿಗೆ ಲಡಾಖ್ ಲೆಫ್ಟಿನೆಂಟ್ ಗವರ್ನರ್ ಕಚೇರಿಯಿಂದ ತಕ್ಷಣಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.




