ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸುವವರೆಗೆ ಮತ್ತು ದೇಶದಲ್ಲಿ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ಚುನಾವಣಾ ವ್ಯವಸ್ಥೆಯನ್ನು ಮರುಸ್ಥಾಪಿಸುವವರೆಗೆ ಕಾಂಗ್ರೆಸ್ ನೇತೃತ್ವದ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವೇಣುಗೋಪಾಲ್, ಚುನಾವಣಾ ಆಯೋಗವು ತನ್ನ ನಿಷ್ಪಕ್ಷಪಾತ ಸ್ವರೂಪವನ್ನು ಕಳೆದುಕೊಂಡಿದ್ದು, ಪ್ರಜಾಪ್ರಭುತ್ವದ ಆಶಯಗಳನ್ನು ಹೊಸಕಿ ಹಾಕುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
“ಗ್ಯಾನೇಶ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕನ್ನು ಹೊಂದಿಲ್ಲ. ಅವರನ್ನು ಆ ಹುದ್ದೆಯಿಂದ ಕೆಳಗಿಳಿಸುವವರೆಗೂ ಈ ಜನಾಂದೋಲನ ಶಮನವಾಗುವುದಿಲ್ಲ” ಎಂದು ಖಡಕ್ ಆಗಿ ಹೇಳಿದರು.
ಇದನ್ನೂ ಓದಿ: ಡಿ ಕೆ ಶಿವಕುಮಾರ್ ಪರ ಘೋಷಣೆ ಕೂಗಿ ಕೆ.ಸಿ. ವೇಣುಗೋಪಾಲ್‌ಗೆ ಸ್ವಾಗತ
ಚುನಾವಣಾ ಆಯೋಗದ ನಡೆಯನ್ನು ವಿರೋಧಿಸಿ ಪ್ರತಿಭಟನೆಯನ್ನು ದೇಶಾದ್ಯಂತ ಮನೆಮನೆಗೆ ತಲುಪಿಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ. ‘ವೋಟ್ ಬಚಾವೋ, ದೇಶ್ ಬಚಾವೋ’ (ವೋಟ್ ಉಳಿಸಿ, ದೇಶ ಉಳಿಸಿ) ಹೆಸರಿನ ಬೃಹತ್ ಅಭಿಯಾನವನ್ನು ಪ್ರತಿಯೊಂದು ಪಂಚಾಯತ್ ಮಟ್ಟದಲ್ಲೂ ಆರಂಭಿಸಲಾಗುವುದು.
ಮತದಾರರ ಪಟ್ಟಿಯಿಂದ ಅಕ್ರಮವಾಗಿ ಮತ್ತು ಕಾನೂನುಬಾಹಿರವಾಗಿ ಹೆಸರುಗಳನ್ನು ತೆಗೆದುಹಾಕಿರುವ ಪ್ರಕರಣಗಳನ್ನು ಗುರುತಿಸಲು ಹಾಗೂ ಅಂತಹ ಮತದಾರರ ಹಕ್ಕುಗಳನ್ನು ಮರಳಿ ಕೊಡಿಸಲು ಪ್ರತಿಯೊಂದು ಬೂತ್ ಮಟ್ಟದಲ್ಲಿ ‘ಬೂತ್ ಗಾರ್ಡಿಯನ್’ಗಳನ್ನು (ಬೂತ್ ರಕ್ಷಕರು) ನೇಮಿಸಲಾಗುತ್ತದೆ.
ಈ ಹೋರಾಟಕ್ಕೆ ‘ಇಂಡಯಾ’ ಪ್ರತಿಪಕ್ಷಗಳ ಒಕ್ಕೂಟದ ಪೂರ್ಣ ಬೆಂಬಲವಿದ್ದು, ದೆಹಲಿ ಪೊಲೀಸರು ಈ ಹಿಂದೆ ಆಯೋಜಿಸಲಾಗಿದ್ದ ಸಾಂಕೇತಿಕ ವಿರೋಧ ಸಭೆಗಳಿಗೆ ಅನುಮತಿ ನಿರಾಕರಿಸಿದ್ದರೂ ಪ್ರತಿಭಟನೆ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.
ಸರ್ಕಾರ ಪೊಲೀಸರ ಮೂಲಕ ನಮ್ಮ ಧ್ವನಿಯನ್ನು ಅಡಗಿಸಲು ಯತ್ನಿಸಿದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನಿವಾಸಗಳ ಎದುರು ಬೃಹತ್ ಧರಣಿ ನಡೆಸಲಾಗುವುದು ಎಂದು ಗುಡುಗಿದರು.
ಮುಂದಿನ ದಿನಗಳಲ್ಲಿ ಗ್ಯಾನೇಶ್ ಕುಮಾರ್ ಅವರ ವಿರುದ್ಧ ಮತ್ತಷ್ಟು ಗಂಭೀರ ಸ್ವರೂಪದ ಅಕ್ರಮಗಳು ಮತ್ತು ದಾಖಲೆಗಳು ಹೊರಬರಲಿದ್ದು, ಕೇಂದ್ರ ಸರ್ಕಾರವು ಅವರನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ವೇಣುಗೋಪಾಲ್ ಹೇಳಿದ್ದಾರೆ.




