ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಭಾರತದಿಂದ ಗಡೀಪಾರು ಮಾಡುವಂತೆ ಬಾಂಗ್ಲಾ ಸರ್ಕಾರವು ಅಧಿಕೃತವಾಗಿ ಪತ್ರ ಬರೆದಿದೆ. ಬಾಂಗ್ಲಾದೇಶದ ಕಾನೂನು ಸಚಿವ ಎಂ.ಡಿ. ಅಸದುಜ್ಜಮಾನ್ ಅವರು ಶೇಖ್ ಹಸೀನಾ ಅವರನ್ನು ‘ಅಪರಾಧಿ’ ಎಂದು ಕರೆದಿದ್ದು, ಕಾನೂನು ಮಾರ್ಗದ ಮೂಲಕ ಅವರನ್ನು ಮರಳಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಢಾಕಾದಲ್ಲಿ ನಡೆದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಹಸೀನಾ ಅವರು ನ್ಯಾಯಮಂಡಳಿಯಿಂದ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾರೆ. ತಮ್ಮ ಸರ್ಕಾರದ ದೃಷ್ಟಿಯಲ್ಲಿ ಇದುವೇ ಅವರ ಅಂತಿಮ ಗುರುತಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
“ಅವರ ಗಡೀಪಾರು ಪ್ರಕ್ರಿಯೆಯು ಗೃಹ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಗೆ ಬರುವುದರಿಂದ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಒಪ್ಪಂದ ಹಾಗೂ ಕಾನೂನು ಪ್ರಕ್ರಿಯೆಗಳಿಗೆ ಅನುಗುಣವಾಗಿ ಇದನ್ನು ನಿಭಾಯಿಸಲಾಗುವುದು” ಎಂದು ಅವರು ವಿವರಿಸಿದ್ದಾರೆ.
“ಯಾವುದೇ ಭಾವನೆಗಳಿಗೆ ಅವಕಾಶ ನೀಡದೆ ಕೇವಲ ಕಾನೂನಿನ ಚೌಕಟ್ಟಿನಲ್ಲಿ ಈ ಕ್ರಮ ಜರುಗಲಿದೆ” ಎಂದು ಅವರು ಪುನರುಚ್ಚರಿಸಿದ್ದಾರೆ.
ಭಾರತವು ಈ ಹಿಂದೆ ಬಾಂಗ್ಲಾದೇಶದಿಂದ ಶೇಖ್ ಹಸೀನಾ ಅವರ ಗಡೀಪಾರು ಕೋರಿಕೆಯನ್ನು ಸ್ವೀಕರಿಸಿರುವುದಾಗಿ ದೃಢಪಡಿಸಿತ್ತಾದರೂ, ಈ ಕುರಿತು ಅಂತಿಮ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಮನವಿಗಳನ್ನು ಸೂಕ್ತ ಪ್ರಕ್ರಿಯೆಗಳ ಮೂಲಕ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ.
2024ರ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಬೃಹತ್ ಜನಪರ ಆಂದೋಲನ ಮತ್ತು 15 ವರ್ಷಗಳ ಆಡಳಿತದ ಅಂತ್ಯದ ಬಳಿಕ ಶೇಖ್ ಹಸೀನಾ ಅವರು ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ. 2025ರ ನವೆಂಬರ್‌ನಲ್ಲಿ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು, 2024ರ ಜುಲೈ-ಆಗಸ್ಟ್ ಅವಧಿಯ ಗಲಭೆಗಳ ಸಂದರ್ಭದಲ್ಲಿ ಮಾನವೀಯತೆಯ ವಿರುದ್ಧ ಎಸಗಿದ ಅಪರಾಧಗಳಿಗಾಗಿ ಶೇಖ್ ಹಸೀನಾ ಅವರನ್ನು ದೋಷಿಯೆಂದು ತೀರ್ಪು ನೀಡಿತ್ತು. ಅವರ ಅನುಪಸ್ಥಿತಿಯಲ್ಲಿಯೇ ವಿಚಾರಣೆ ನಡೆಸಿ, ಒಂದು ಆರೋಪಕ್ಕೆ ಮರಣದಂಡನೆ ಮತ್ತು ಮತ್ತೊಂದು ಆರೋಪಕ್ಕೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸಂಸತ್ ಚುನಾವಣೆಯ ಬಳಿಕ ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷ (BNP) ಸರ್ಕಾರ ರಚಿಸಿದೆ.



