ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಒಳಗೊಂಡ ಎನ್‌ಡಿಎ ಮೈತ್ರಿಕೂಟ ಜಯ ದಾಖಲಿಸಿದೆ. ಕುಪ್ಪಂ ಮತ್ತು ಮಾಚೆರ್ಲಾ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟ ಸಂಪೂರ್ಣ ಮೇಲುಗೈ ಸಾಧಿಸಿದೆ.
ಫಲಿತಾಂಶದ ಬೆನ್ನಲ್ಲೇ ವೈಎಸ್‌ಆರ್‌ಸಿಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರು ಎನ್‌ಡಿಎ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಜಗನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್‌ನ ನಿರ್ಮಾಣ ಹಂತದಲ್ಲಿದ್ದ ಕೇಂದ್ರ ಕಚೇರಿ ಕೆಡವಿದ ಆಂಧ್ರ ಸರ್ಕಾರ
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಜಗನ್ ರೆಡ್ಡಿ, “ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆಯಿಂದ ಹಿಡಿದು ಮತ ಎಣಿಕೆಯವರೆಗೆ ಪ್ರತಿಯೊಂದು ಹಂತದಲ್ಲೂ ಅಕ್ರಮ ಎಸಗಲಾಗಿದೆ. ವಿಪಕ್ಷಗಳಿಗೆ ಮುಕ್ತವಾಗಿ ಸ್ಪರ್ಧಿಸಲು ಅವಕಾಶವನ್ನೇ ನೀಡಲಾಗಿಲ್ಲ. ಇದು ಚುನಾವಣೆಯಲ್ಲ, ಆಡಳಿತ ಪಕ್ಷವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಾಗಿದೆ” ಎಂದು ಟೀಕಿಸಿದ್ದಾರೆ. ಜತೆಗೆ, ಪುಲಿವೆಂದುಲ ಸೇರಿದಂತೆ ಹಲವು ಮತಗಟ್ಟೆಗಳಲ್ಲಿ ವೈಎಸ್‌ಆರ್‌ಸಿಪಿ ಪೋಲಿಂಗ್ ಏಜೆಂಟರನ್ನು ತಡೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಆಂಧ್ರಪ್ರದೇಶದ ಸಚಿವ ಮತ್ತು ಟಿಡಿಪಿ ನಾಯಕ ನಾರಾ ಲೋಕೇಶ್ ವಿಪಕ್ಷದ ಆರೋಪಗಳನ್ನು ತಳ್ಳಿಹಾಕಿದ್ದಾರೆ. “ಜನರು ಕಳೆದೆರಡು ವರ್ಷಗಳ ನಮ್ಮ ಉತ್ತಮ ಆಡಳಿತ ಹಾಗೂ ಜನಪರ ನೀತಿಗಳನ್ನು ನೋಡಿ ಆಶೀರ್ವದಿಸಿದ್ದಾರೆ. ಈ ಗೆಲುವು ಸಂಭ್ರಮಿಸುವುದಕ್ಕಲ್ಲ, ಜನಸೇವೆ ಮಾಡಲು ಸಿಕ್ಕ ಆದೇಶ” ಎಂದು ಹೇಳಿದ್ದಾರೆ.





