ಪುಣೆಯ ಲೋಹಗಢ್ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಎಂಬ ಯುವಕನ ನಿಗೂಢ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರಿಗೆ ಕೇತನ್ ಅವರ ತಾಯಿ ಭಾವನಾತ್ಮಕ ಪತ್ರ ಬರೆದಿದ್ದಾರೆ. ತನಿಖೆ ಚುರುಕುಗೊಳಿಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಕೇತನ್ ಅವರ ಕೊಲೆಯನ್ನು ಆರಂಭದಲ್ಲಿ ಆಕಸ್ಮಿಕವಾಗಿ ಬಿದ್ದು ಸಂಭವಿಸಿದ ಸಾವು ಎಂದು ಭಾವಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪುಣೆ ಗ್ರಾಮಾಂತರ ಪೊಲೀಸರು, ಇದು ಆಕಸ್ಮಿಕ ಸಾವಲ್ಲ, ಯೋಜಿತ ಕೊಲೆ ಎಂದು ಪತ್ತೆಹಚ್ಚಿದ್ದರು. ಇದೀಗ, ಕೇತನ್ ತಾಯಿ ರಾಖಿ ಅಗರ್ವಾಲ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಇ-ಮೇಲ್ ಮೂಲಕ ಕಳಿಸಿದ್ದಾರೆ. ‘ತನ್ನ ಮಗನ ಸಾವು ಕೇವಲ ಮತ್ತೊಂದು ತನಿಖಾ ಕಡತವಾಗಿ ಉಳಿಯಬಾರದು. ಅಪರಾಧಿಗಳಿಗೆ ಕಾನೂನಿನಡಿ ಕಠಿಣ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದ್ದಾರೆ.
ಪತ್ರದಲ್ಲಿ ತನ್ನ ಅಳಲನ್ನು ತೋಡಿಕೊಂಡಿರುವ ರಾಖಿ ಅಗರ್ವಾಲ್, “ಪ್ರತಿಯೊಬ್ಬ ತಾಯಿಯಂತೆ ನಾನೂ ಕೂಡ ಮಗನ ಮದುವೆ ಹಾಗೂ ಆತನ ಸುಂದರ ಭವಿಷ್ಯದ ಕನಸು ಕಂಡಿದ್ದೆ. ಆದರೆ, ವಿಧಿಯ ಆಟದಿಂದಾಗಿ ಮಗನ ಅಂತ್ಯಸಂಸ್ಕಾರ ಮಾಡುವಂತಾಯಿತು” ಎಂದು ಹೆತ್ತ ಕರುಳಿನ ವೇದನೆಯನ್ನು ವ್ಯಕ್ತಪಡಿಸಿದ್ದಾರೆ.
“ಮಗನ ಕ್ರೂರ ಕೊಲೆಯಿಂದಾಗಿ ನಮ್ಮ ಇಡೀ ಜಗತ್ತೇ ಕೊನೆಗೊಂಡಂತಾಗಿದೆ. ಕೇತನ್ ಸಾವಿನ ದುಃಖವನ್ನು ತಡೆಯಲಾರದೆ, ಆತನ ತಾತ ಕೂಡ ಕೇವಲ ಇಪ್ಪತ್ತು ದಿನಗಳ ಅಂತರದಲ್ಲಿ ನಿಧನರಾಗಿದ್ದಾರೆ. ತಮ್ಮ ಕುಟುಂಬವು ಕೆಲವೇ ದಿನಗಳಲ್ಲಿ ಎರಡು ತಲೆಮಾರುಗಳನ್ನು ಕಳೆದುಕೊಂಡು ತೀವ್ರ ಆಘಾತದಲ್ಲಿದೆ” ಎಂದು ಅವರು ಬರೆದಿದ್ದಾರೆ.
ಈ ಲೇಖನ ಓದಿದ್ದೀರಾ?: ಹಾರ್ಮುಜ್ನಲ್ಲಿ ಟ್ರಂಪ್ ‘ದಾದಾಗಿರಿ’: ಅಮೆರಿಕದ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ಯನ್ನು ಇರಾನ್ ವಶಕ್ಕೆ ಪಡೆದರೆ ಹೇಗಿರುತ್ತದೆ?
“ನಾವು ಯಾವುದೇ ವಿಶೇಷ ಸೌಕರ್ಯ ಅಥವಾ ಸಹಾನುಭೂತಿಯನ್ನು ಯಾಚಿಸುತ್ತಿಲ್ಲ. ಒಬ್ಬ ತಾಯಿಯಾಗಿ ಮಗನ ಸಾವಿಗೆ ನ್ಯಾಯವನ್ನು ಮಾತ್ರ ಕೇಳುತ್ತಿದ್ದೇನೆ. ಪ್ರತಿ ರಾತ್ರಿ ಮಗನ ಭಾವಚಿತ್ರವನ್ನು ನೋಡುತ್ತಾ ಆತನಿಗಾಗಿ ನಾನು ಹೋರಾಡುತ್ತಿದ್ದೇವೆ. ನಮಗೆ ಮತ್ತು ನಮ್ಮ ಮಗನಿಗೆ ನ್ಯಾಯ ಸಿಕ್ಕಿದ ದಿನ, ನಮಗೆ ನಿರಾಳತೆ ಸಿಗಲಿದೆ” ಎಂದು ಅವರು ಹೇಳಿಕೊಂಡಿದ್ದಾರೆ.
“ಈ ಪ್ರಕರಣದಲ್ಲಿ ಯಾವುದೇ ವಿಳಂಬವಿಲ್ಲದೆ ಸೂಕ್ತ ಗಮನಹರಿಸಿ ನ್ಯಾಯ ಒದಗಿಸಿಕೊಡಬೇಕು” ಎಂದು ಅವರು ವಿನಂತಿಸಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಕೇತನ್ ಅಗರ್ವಾಲ್ ಅವರಿಗೆ ಸಿಯಾ ಗೋಯಲ್ ಎಂಬಾಕೆಯೊಂದಿಗೆ ಫೆಬ್ರವರಿ 19 ರಂದು ನಿಶ್ಚಿತಾರ್ಥ ನಡೆದಿತ್ತು. ಇದೇ ವರ್ಷದ ಕೊನೆಯಲ್ಲಿ ಮದುವೆ ನಿಶ್ಚಯವಾಗಿತ್ತು. ಆದರೆ, ಸಿಯಾ ಗೋಯಲ್ ಕಳೆದ ಅಕ್ಟೋಬರ್ನಿಂದ ಚೇತನ್ ಚೌಧರಿ ಎಂಬಾತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು, ಕೇತನ್ನನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಸೇರಿ ಜೂನ್ 18 ರಂದು ಲೋಹಗಢ್ ಕೋಟೆಯ ಕಡಿದಾದ ಬಂಡೆಯಿಂದ ಕೆಳಗೆ ತಳ್ಳಿ ಕೇತನ್ನನ್ನು ಕೊಲೆ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಗ್ರಾಮಾಂತರ ಪೊಲೀಸರು ಜೂನ್ 23 ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹತ್ತು ದಿನಗಳ ಪೊಲೀಸ್ ಕಸ್ಟಡಿಯ ನಂತರ ನ್ಯಾಯಾಲಯವು ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಸದ್ಯ ಆರೋಪಿಗಳು ಜೈಲಿನಲ್ಲಿದ್ದಾರೆ.



