ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಈ ನಿಗೂಢ ಪೋಸ್ಟ್ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಭಾನುವಾರ ರಾಹುಲ್ ಗಾಂಧಿ ಅವರು ತಮ್ಮ ‘X’ ಖಾತೆಯಲ್ಲಿ, “ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ. ಕಠಿಣ ವಾತಾವರಣವೂ ಮತ್ತೊಂದು ರೀತಿಯ ಶಾಂತಿಯೇ ಎಂಬುದನ್ನು ಅದು ಕಲಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ದೆಹಲಿ ಪೊಲೀಸರು ಸಾಮಾನ್ಯ ನಾಗರಿಕರನ್ನು ಹೆದರಿಸಲಷ್ಟೇ ಇದ್ದಾರೆಯೇ?; ಬಾಲಕಿಯ ಅತ್ಯಾಚಾರ, ಕೊಲೆ ಖಂಡಿಸಿ ರಾಹುಲ್ ಗಾಂಧಿ ವಾಗ್ದಾಳಿ
ಯಾವುದೇ ಸ್ಪಷ್ಟ ಸಂದರ್ಭ ಅಥವಾ ವಿವರಣೆ ನೀಡದೆ ರಾಹುಲ್ ಗಾಂಧಿ ಈ ಪೋಸ್ಟ್ ಹಂಚಿಕೊಂಡಿದ್ದರೂ, ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆ ಇದು ತೀವ್ರ ಗಮನಸೆಳೆದಿದೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿಷಯದಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಾಗೂ ‘ಇಂಡಿಯಾ’ ಒಕ್ಕೂಟವು ಕಟು ವಿರೋಧ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೇ ಈ ಪೋಸ್ಟ್ ಹೊರಬಿದ್ದಿದೆ.




