2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷ ಬಿಜೆಪಿ ಸೋತಿದ್ದರೆ, ಭಾರತವು ಇಂದು ಆರ್ಥಿಕವಾಗಿ ಮತ್ತಷ್ಟು ಸಮೃದ್ಧ ಮತ್ತು ಪ್ರಜಾಸತ್ತಾತ್ಮಕವಾಗಿ ಮುನ್ನಡೆಯುತ್ತಿತ್ತು ಎಂದು ನೂತನ ಸಂಶೋಧನಾ ವರದಿಯೊಂದು ಪ್ರತಿಪಾದಿಸಿದೆ.
ಟೆಕ್ಸಾಸ್ ಟೆಕ್ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದ ಕೆವಿನ್ ಗ್ರಿಯರ್ ಮತ್ತು ಕೃಷಿ, ಅನ್ವಯಿಕ ಅರ್ಥಶಾಸ್ತ್ರ ವಿಭಾಗದ ರಾಬಿನ್ ಗ್ರಿಯರ್ ಅವರು ಈ ಅಧ್ಯಯನವನ್ನು ನಡೆಸಿದ್ದಾರೆ. ‘ಪ್ರಾಮಿಸಸ್, ಪ್ರಾಮಿಸಸ್: ಗವರ್ನೆನ್ಸ್ ಅಂಡ್ ಗ್ರೋತ್ ಇನ್ ಇಂಡಿಯಾ ಅಂಡರ್ ಮೋದಿ ಅಂಡ್ ದಿ ಬಿಜೆಪಿ’ ಎಂಬ ಶೀರ್ಷಿಕೆಯಡಿ ವರದಿ ಸಿದ್ಧಪಡಿಸಿದ್ದಾರೆ. ವರದಿಯಲ್ಲಿ ಸುಮಾರು ಒಂದು ದಶಕದ ಆಡಳಿತಾವಧಿಯಲ್ಲಿ ಪ್ರಧಾನಿ ಮೋದಿಯವರು ನೀಡಿದ ಭರವಸೆಗಳು ಮತ್ತು ಅವುಗಳ ನೈಜ ಫಲಿತಾಂಶಗಳನ್ನು ವಿಶ್ಲೇಷಿಸಿದ್ದಾರೆ. ‘ಮೋದಿ ಅವರ ಆಡಳಿತವು ಮೂಲಭೂತವಾಗಿ ಮುರಿದುಬಿದ್ದ ಭರವಸೆಗಳ ಕಥನವಾಗಿದೆ’ ಎಂದು ಬಣ್ಣಿಸಿದ್ದಾರೆ.
ಮೋದಿ ಅವರ ಆಡಳಿತವು ಭಾರತದ ಆರ್ಥಿಕತೆ ಮತ್ತು ಪ್ರಜಾಪ್ರಭುತ್ವವನ್ನು ಉತ್ತಮಗೊಳಿಸಿದೆಯೇ ಅಥವಾ ಹದಗೆಡಿಸಿದೆಯೇ ಎನ್ನುವುದನ್ನು ತಿಳಿಯಲು ಸಂಶೋಧಕರು ‘ಸಿಂಥೆಟಿಕ್ ಭಾರತ’ (Synthetic India) ಎಂಬ ಕೃತಕ ಮಾದರಿಯನ್ನು ಸೃಷ್ಟಿಸಿಕೊಂಡು ವಿಶ್ಲೇಷಣೆ ನಡೆಸಿದ್ದಾರೆ.
ಮೋದಿ ಅವರು ಪ್ರಧಾನಿಯಾಗದಿದ್ದರೆ ಭಾರತ ಹೇಗಿರುತ್ತಿತ್ತು ಎಂಬುದನ್ನು ನೇರವಾಗಿ ನೋಡಲು ಸಾಧ್ಯವಿಲ್ಲದ ಕಾರಣ, 2014ಕ್ಕೂ ಮುಂಚಿನ ಭಾರತದ ಲಕ್ಷಣಗಳಿಗೆ ಹತ್ತಿರವಾಗಿದ್ದ ಚೀನಾ, ಬಾಂಗ್ಲಾದೇಶ, ಇಥಿಯೋಪಿಯಾ, ಪಾಕಿಸ್ತಾನ, ಅರ್ಜೆಂಟೀನಾ, ಬ್ರೆಜಿಲ್, ವಿಯೆಟ್ನಾಂ ಸೇರಿದಂತೆ ಕೆಲವು ಆಯ್ದ ದೇಶಗಳ ಕಾರ್ಯಕ್ಷಮತೆಯ ದತ್ತಾಂಶಗಳನ್ನು ಒಟ್ಟುಗೂಡಿಸಿ ಈ ‘ಸಿಂಥೆಟಿಕ್ ಭಾರತ’ವನ್ನು ರೂಪಿಸಲಾಗಿದೆ. ಮೋದಿ ನಾಯಕತ್ವ ಅಥವಾ ‘ಗುಜರಾತ್ ಮಾದರಿ’ಯ ಆಡಳಿತವೇ ಇಲ್ಲದಿದ್ದರೆ ಹಾಗೂ 2014ರವರೆಗೆ ದೇಶವು ಯಾವ ಮಾದರಿಯ ಆಡಳಿತದಲ್ಲಿ ಸಾಗುತ್ತಿತ್ತೋ ಅದೇ ಆಡಳಿತ ಮುಂದುವರಿದಿದ್ದರೆ, 2023ರ ವೇಳೆಗೆ ಭಾರತದ ತಲಾ ಆದಾಯವು ಈಗಿರುವುದಕ್ಕಿಂತ 1,000 ಡಾಲರ್ ಹೆಚ್ಚಿರುತ್ತಿತ್ತು ಎಂದು ವರದಿ ಹೇಳಿದೆ.
ಅಲ್ಲದೆ ರಾಜಕೀಯ ಭ್ರಷ್ಟಾಚಾರವು ತೀವ್ರವಾಗಿ ಕಡಿಮೆ ಇರುತ್ತಿತ್ತು. ಅಂತೆಯೇ, ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಉದಾರವಾದಿ ಪ್ರಜಾಪ್ರಭುತ್ವ, ಧಾರ್ಮಿಕ ಸ್ವಾತಂತ್ರ್ಯ, ಸಂಘಟನೆಯ ಸ್ವಾತಂತ್ರ್ಯ, ಕಾನೂನಿನ ಎದುರು ಸಮಾನತೆ, ಕಾನೂನಿನಡಿ ಸಮಾನ ರಕ್ಷಣೆ, ಕಾರ್ಯಾಂಗದ ಮೇಲೆ ನ್ಯಾಯಾಂಗದ ನಿಯಂತ್ರಣ ಹಾಗೂ ಕಾರ್ಯಾಂಗದ ಮೇಲೆ ಶಾಸಕಾಂಗದ ನಿಯಂತ್ರಣವು ಸುಧಾರಣೆಯಲ್ಲಿ ಇರುತ್ತಿತ್ತು. ಈ ಎಲ್ಲ ಅಂಶಗಳ ಸುಧಾರಣೆಯೊಂದಿಗೆ ಭಾರತವು ಬಹಳ ಉತ್ತಮ ಸ್ಥಾನದಲ್ಲಿರುತ್ತಿತ್ತು ಎಂದು ಅಧ್ಯಯನ ವರದಿ ವಿವರಿಸಿದೆ.
“ವಿಶ್ಲೇಷಿಸಲಾದ ಈ ಎಲ್ಲ 10 ಅಂಶಗಳಲ್ಲೂ ಆಡಳಿತದ ಮಟ್ಟ ತೀವ್ರವಾಗಿ ಕುಸಿದಿದೆ. ಇದರಲ್ಲಿ ಅರ್ಧದಷ್ಟು ಸೂಚಕಗಳು ‘ಕೃತಕ ಕೌಂಟರ್‌ಫ್ಯಾಕ್ಚುವಲ್’ ಮಾದರಿಗೆ ಹೋಲಿಸಿದರೆ 45%ಗಿಂತ ಹೆಚ್ಚು ಕುಸಿತವನ್ನು ಕಂಡಿವೆ ” ಎಂದು ವರದಿ ಉಲ್ಲೇಖಿಸಿದೆ.

ಜಿಡಿಪಿ ಪ್ರಗತಿಯನ್ನು ಮೋದಿ ಸರ್ಕಾರವು ತನ್ನ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದರೂ, ನೆರೆಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಬೆಳವಣಿಗೆ ತೀರಾ ಹಿಂದುಳಿದಿದೆ ಎಂದು ವರದಿ ವಿವರಿಸಿದೆ. 2014ಕ್ಕೂ ಮುಂಚೆ ನೈಜ ಭಾರತದ ತಲಾ ಆದಾಯ ಮತ್ತು ಸಿಂಥೆಟಿಕ್ ಭಾರತದ ತಲಾ ಆದಾಯದ ರೇಖೆಗಳು ಒಂದೇ ಹಾದಿಯಲ್ಲಿದ್ದವು. ಆದರೆ, 2014ರ ನಂತರ ನೈಜ ಭಾರತದ ಪ್ರಗತಿ ಹಿಂದೆ ಬಿದ್ದಿದೆ ಎಂದು ವರದಿ ತಿಳಿಸಿದೆ.
2014ರ ನಂತರ ಹಳೆಯ ಮಾದರಿಯೇ ಮುಂದುವರಿದಿದ್ದರೆ ಭಾರತದ ಪ್ರತಿಯೊಬ್ಬ ನಾಗರಿಕನ ತಲಾ ಆದಾಯವು ವರ್ಷಕ್ಕೆ ಹೆಚ್ಚುವರಿ 1,000 ಡಾಲರ್ (ಸುಮಾರು 1,4 ಟ್ರಿಲಿಯನ್ ಡಾಲರ್ ಹೆಚ್ಚುವರಿ ದೇಶೀಯ ಆರ್ಥಿಕ ಉತ್ಪಾದನೆ) ಹೆಚ್ಚಿರುತ್ತಿತ್ತು. ಈ ಆದಾಯವನ್ನು ನಾಲ್ಕು ಜನರ ಒಂದು ಕುಟುಂಬಕ್ಕೆ ಸಮಾನವಾಗಿ ಹಂಚಿಕೆಯಾಗಿದ್ದರೆ, ತಿಂಗಳಿಗೆ ಸರಾಸರಿ 27,000 ರೂಪಾಯಿ ಹೆಚ್ಚುವರಿ ಆದಾಯ ಸಿಗುತ್ತಿತ್ತು ಎಂದು ವರದಿ ವಿಶ್ಲೇಷಿಸಿದೆ.
ಇನ್ನು, ವರದಿಯ ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯವೂ ತೀರಾ ಕುಸಿದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಕೇವಲ ಜನರು ಮಾತನಾಡುವುದಷ್ಟೇ ಅಲ್ಲ, ಅವರು ತಮ್ಮ ಗ್ರಹಿಕೆ ಮತ್ತು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇರುವ ವಾತಾವರಣವಾಗಿರುತ್ತದೆ ಎಂದು ವರದಿ ಹೇಳಿದೆ.
2014ರ ವೇಳೆಗೆ ನೈಜ ಭಾರತ ಮತ್ತು ಸಿಂಥೆಟಿಕ್ ಭಾರತದ ಅಭಿವ್ಯಕ್ತಿ ಸ್ವಾತಂತ್ರ್ಯದ ರೇಖೆಗಳು ಬೇರ್ಪಟ್ಟವು. 2023ರ ವೇಳೆಗೆ ಭಾರತದ ಅಭಿವ್ಯಕ್ತಿ ಸ್ವಾತಂತ್ರ್ಯದ ಮಟ್ಟವು ಸಿಂಥೆಟಿಕ್ ಮಾದರಿಗಿಂತ ಬರೋಬ್ಬರಿ 56.2% ರಷ್ಟು ಕುಸಿದಿದೆ. ಈ ಕುಸಿತವು ಕ್ರಮೇಣವಾಗಿ ಆಗಿದ್ದಲ್ಲ, ಬದಲಾಗಿ ಏಕಾಏಕಿ ಸಂಭವಿಸಿದೆ ಎಂದು ವರದಿ ಗಮನಿಸಿದೆ.
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್‌ನದ್ದು ವೋಟ್ ಬ್ಯಾಂಕ್ ರಾಜಕಾರಣವಾದರೆ, ಧರ್ಮ-ʼದೇಶಭಕ್ತಿʼಯ ಹೆಸರಿನಲ್ಲಿ ಬಿಜೆಪಿ ಮಾಡುತ್ತಿರುವುದೇನು?
ಅದೇ ರೀತಿ, ಧಾರ್ಮಿಕ ಸ್ವಾತಂತ್ರ್ಯದ ವಿಚಾರದಲ್ಲಿಯೂ 2014ಕ್ಕೂ ಮುಂಚೆ ಭಾರತ ಮತ್ತು ಸಿಂಥೆಟಿಕ್ ಭಾರತ ಎರಡೂ ಸಮಾನವಾಗಿದ್ದವು. ಆದರೆ, ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತದಲ್ಲಿದ್ದ ಧಾರ್ಮಿಕ ಸ್ವಾತಂತ್ರ್ಯದಲ್ಲಿ 168.7%ರಷ್ಟು ಬೃಹತ್ ಕುಸಿತ ಕಂಡುಬಂದಿದೆ.
ವಿ-ಡೆಮ್ ಸಂಸ್ಥೆಯ ದತ್ತಾಂಶಗಳನ್ನು ಆಧರಿಸಿ ಈ ವಿಶ್ಲೇಷಣೆ ಮಾಡಲಾಗಿದೆ. ಸರ್ಕಾರ ಅಥವಾ ಪ್ರಾಧಿಕಾರದ ಹಸ್ತಕ್ಷೇಪವಿಲ್ಲದೆ ನಾಗರಿಕರು ತಮ್ಮ ಧರ್ಮವನ್ನು ಆಯ್ಕೆ ಮಾಡುವ, ಆಚರಿಸುವ ಹಾಗೂ ಶಾಂತಿಯುತವಾಗಿ ಪ್ರಚಾರ ಮಾಡುವ ಹಕ್ಕನ್ನು ಆಡಳಿತವು ಕಸಿದುಕೊಳ್ಳುತ್ತಿದೆ ಎಂಬುದನ್ನು ದತ್ತಾಂಶ ವಿವರಿಸಿದೆ.
ಗಮನಾರ್ಹವಾಗಿ, ರಾಜಕೀಯ ಭ್ರಷ್ಟಾಚಾರವು ಯುಪಿಎ ಸರ್ಕಾರ ಅಧಿಕಾರ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿತ್ತು. ಆದರೆ, ಈ ರಾಜಕೀಯ ಭ್ರಷ್ಟಾಚಾರವು ಮೋದಿ ಆಡಳಿತದಲ್ಲಿ ಕಡಿಮೆಯಾಗುವ ತೀವ್ರವಾಗಿ ಹೆಚ್ಚಾಗಿದೆ. ಭ್ರಷ್ಟಾಚಾರ ನಿರ್ಮೂಲನೆಯನ್ನೇ ಪ್ರಮುಖ ಪ್ರಚಾರ ಸರಕಾಗಿಸಿಕೊಂಡು ಅಧಿಕಾರಕ್ಕೆ ಬಂದ ಮೋದಿ ಆಡಳಿತದಲ್ಲಿ ಇದೇ ರಾಜಕೀಯ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ವರದಿ ಉಲ್ಲೇಖಿಸಿದೆ.
2014ರಲ್ಲಿ ಮೋದಿ ಮತ್ತು ಬಿಜೆಪಿ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಮತ್ತು ‘ಗುಜರಾತ್ ಮಾದರಿ’ಯ ಅಭಿವೃದ್ಧಿಯ ಭರವಸೆ ನೀಡಿ ಅಧಿಕಾರಕ್ಕೆ ಬಂದವು. ಆದರೆ ಈ ಭರವಸೆಗಳು ಈಡೇರದಿದ್ದರೂ ಜನರು ಅವರನ್ನು ಮತ್ತೆ ಏಕೆ ಆಯ್ಕೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಸಂಶೋಧಕರು ಎರಡು ಕಾರಣಗಳನ್ನು ನೀಡಿದ್ದಾರೆ:
- ಚುನಾವಣಾ ವ್ಯವಸ್ಥೆ ಮತ್ತು ವಿರೋಧ ಪಕ್ಷಗಳ ಭಿನ್ನಮತ: ಭಾರತದಲ್ಲಿರುವ ‘ಫಸ್ಟ್-ಪಾಸ್ಟ್-ದಿ-ಪೋಸ್ಟ್’ (First-past-the-post) ಚುನಾವಣಾ ಪದ್ಧತಿ ಮತ್ತು ವಿರೋಧ ಪಕ್ಷಗಳಲ್ಲಿನ ಒಡಕು ಬಿಜೆಪಿಗೆ ನೆರವಾಗಿದೆ. ಬಿಜೆಪಿ ಭಾರತದ ಅತಿದೊಡ್ಡ ಏಕೈಕ ಪಕ್ಷವಾಗಿದ್ದರೂ, ದೇಶದ ಬಹುಸಂಖ್ಯಾತ ಮತದಾರರ ಬೆಂಬಲ ಅದಕ್ಕಿಲ್ಲ. ವಿಭಜಿತ ವಿರೋಧ ಪಕ್ಷಗಳು ಅವರ ಆಡಳಿತಕ್ಕೆ ಅನುಕೂಲ ಮಾಡಿಕೊಟ್ಟಿವೆ.
- ‘ಗರಿಷ್ಠ ಆಡಳಿತ’ದ ಬಗೆಗಿನ ಭಿನ್ನ ವ್ಯಾಖ್ಯಾನ: ಬೆಂಬಲಿಗರು ‘ಗರಿಷ್ಠ ಆಡಳಿತ’ ಅಥವಾ ‘ಉತ್ತಮ ಆಡಳಿತ’ವನ್ನು ಕೆಲವರು ವಿಭಿನ್ನವಾಗಿ ನೋಡುತ್ತಿದ್ದಾರೆ. ಉದಾಹರಣೆಗೆ, ಮೋದಿ ಬೆಂಬಲಿಗರ ದೃಷ್ಟಿಕೋನದಲ್ಲಿ ‘ಧಾರ್ಮಿಕ ಸ್ವಾತಂತ್ರ್ಯವನ್ನು ಕಡಿತಗೊಳಿಸುವುದು’ ಅಥವಾ ನಿಯಂತ್ರಿಸುವುದು ಧನಾತ್ಮಕ ಅಥವಾ ಸಕಾರಾತ್ಮಕ ಬೆಳವಣಿಗೆಯಾಗಿ ಕಾಣಿಸಿರಬಹುದು ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ.



