ರಾಮಮಂದಿರ ದೇಣಿಗೆ ಹಣ ಹಾಗೂ ಕಾಣಿಕೆಗಳ ಎಣಿಕೆಯಲ್ಲಿ ನಡೆದಿರುವ ಭಾರೀ ಅಕ್ರಮ ಮತ್ತು ಕಳ್ಳತನದ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ಒಪ್ಪಿಸಬೇಕೆಂದು ಅಯೋಧ್ಯೆಯ ಸಂತರು ಹಾಗೂ ಸಾಧುಗಳ ಸಮುದಾಯ ಆಗ್ರಹಿಸಿದೆ. ಹಾಗೆಯೇ ಈ ಪ್ರಕರಣ ಸಂಬಂಧ ಟ್ರಸ್ಟ್‌ನ ಚಂಪತ್ ರಾಯ್, ಗೋಪಾಲ್ ರಾವ್, ಅನಿಲ್ ಮಿಶ್ರಾ ವಿರುದ್ಧ ಕ್ರಮಕ್ಕೆ ಸಂತರು ಒತ್ತಾಯಿಸಿದ್ದಾರೆ.
ಕಂಪ್ಯೂಟರ್ ಬಾಬಾ ಎಂದೇ ಪ್ರಸಿದ್ಧರಾಗಿರುವ (ನಾಮದೇವ ದಾಸ್ ತ್ಯಾಗಿ) ಅವರ ಅಧ್ಯಕ್ಷತೆಯಲ್ಲಿ ನಡೆದ ಅಯೋಧ್ಯೆಯ ಸಾಧು-ಸಂತರ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ನಡೆಯುತ್ತಿರುವ ವಿಶೇಷ ತನಿಖಾ ತಂಡದ (SIT) ತನಿಖೆಯು ಸಣ್ಣಪುಟ್ಟ ನೌಕರರನ್ನು ಬಂಧಿಸಲು ಸೀಮಿತವಾಗಿದ್ದು, ಪ್ರಮುಖರನ್ನು ರಕ್ಷಿಸುವ ಯತ್ನ ನಡೆಯುತ್ತಿದೆ ಎಂದು ಸಂತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಮಮಂದಿರ ದೇಣಿಗೆ ದುರ್ಬಳಕೆ ಪ್ರಕರಣ: ಅಧ್ಯಕ್ಷ ಚಂಪತ್ ರಾಯ್ ರಾಜೀನಾಮೆ
ದೇಣಿಗೆ ಮತ್ತು ಕಾಣಿಕೆಗಳ ನಿರ್ವಹಣೆಯಲ್ಲಿ ಅಕ್ರಮ ಎಸಗಲಾಗಿರುವ ಸಂಬಂಧ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟಿ ಡಾ. ಅನಿಲ್ ಮಿಶ್ರಾ ಹಾಗೂ ಮಂದಿರ ನಿರ್ಮಾಣ ಉಸ್ತುವಾರಿ ವಹಿಸಿದ್ದ ಗೋಪಾಲ್ ರಾವ್ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂತರು ಪಟ್ಟು ಹಿಡಿದಿದ್ದಾರೆ.
ರಾಮಮಂದಿರ ದೇಣಿಗೆ ಹಗರಣವು ಬಹಿರಂಗಗೊಂಡು ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಚಂಪತ್ ರಾಯ್ ಹಾಗೂ ಅನಿಲ್ ಮಿಶ್ರಾ ಅವರು ತಮ್ಮ ಹುದ್ದೆಗಳಿಗೆ ಸಲ್ಲಿಸಿದ್ದ ರಾಜೀನಾಮೆಯನ್ನು ಜುಲೈನಲ್ಲಿ ಟ್ರಸ್ಟ್ ಅಂಗೀಕರಿಸಿತ್ತು. ಸದ್ಯ ದೇಣಿಗೆ ಎಣಿಕೆ ಕೊಠಡಿಯಿಂದ ಹಣ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಚಂಪತ್ ರಾಯ್ ಅವರ ಮಾಜಿ ಚಾಲಕ ಸೇರಿದಂತೆ ಒಟ್ಟು 8 ಮಂದಿ ನೌಕರರನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆದರೆ ಆರ್‌ಎಸ್‌ಎಸ್‌ಗೆ ಸೇರಿದ ದೊಡ್ಡ ತಿಮಿಂಗಿಲನ್ನು ರಕ್ಷಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಯದಿದ್ದರೆ ಒಂದು ಲಕ್ಷಕ್ಕೂ ಹೆಚ್ಚು ಸಂತರನ್ನು ಅಯೋಧ್ಯೆಗೆ ಕರೆತಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸಂತರ ಸಂಘಟನೆ ತಿಳಿಸಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಮುಖ ಸಭೆ ಶೀಘ್ರದಲ್ಲೇ ನಡೆಯಲಿದ್ದು, ಸಂತರ ಈ ತೀವ್ರ ಪ್ರತಿಭಟನೆಯು ಮಂದಿರ ಆಡಳಿತ ಮಂಡಳಿಯ ಮೇಲೆ ತೀವ್ರ ಒತ್ತಡ ತಂದಿಟ್ಟಿದೆ.




