ಸೋಮವಾರ (ಮೇ 18) ಯುರೋಪ್ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಭಾರತವನ್ನು ಮುಜುಗರಕ್ಕೆ ದೂಡಿದ್ದಾರೆ. ನಾರ್ವೆಯ ಪತ್ರಕರ್ತೆಯೊಬ್ಬರು ‘ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತೀರಾ’ ಎಂದು ಕೇಳಿದಾಗ, ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ಹೊರನಡೆದಿದ್ದಾರೆ.
ಓಸ್ಲೋದಲ್ಲಿ ಮೋದಿ ಮತ್ತು ನಾರ್ವೆಯ ಪ್ರಧಾನಿ ಜೊನಾಸ್ ಗಹ್ರ್ ಸ್ಟೋರ್ – ಇಬ್ಬರೂ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಅವರ ಹೇಳಿಕೆಗಳು ಪೂರ್ಣಗೊಂಡ ತಕ್ಷಣವೇ, ‘ಡಾಗ್‌ಸಾವಿಸನ್’ ಪತ್ರಿಕೆಯ ಅಂಕಣಕಾರ್ತಿ ಹೆಲ್ಲೆ ಲಿಂಗ್ ಅವರು ಏರುಧ್ವನಿಯಲ್ಲಿ, “ಪ್ರಧಾನಿ ಮೋದಿಯವರೇ, ವಿಶ್ವದ ಅತ್ಯಂತ ಸ್ವತಂತ್ರ ಮಾಧ್ಯಮದಿಂದ ನೀವು ಕೆಲವು ಪ್ರಶ್ನೆಗಳನ್ನು ಏಕೆ ತೆಗೆದುಕೊಳ್ಳಬಾರದು?” ಎಂದು ಕೇಳಿದರು.
ತಮ್ಮ ಭಾಷಣದಲ್ಲಿ ಭಾರತವನ್ನು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಬಣ್ಣಿಸಿದ್ದ ಮೋದಿ, ಪತ್ರಕರ್ತೆಯ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದೆ, ನರ್ವೆ ಪ್ರಧಾನಿ ಸ್ಟೋರ್ ಅವರೊಂದಿಗೆ ಅಲ್ಲಿಂದ ಹೊರಟುಹೋದರು. ಆದಾಗ್ಯೂ, ‘ದಿ ಹಿಂದು’ ಪತ್ರಿಕೆಯ ಸುಹಾಸಿನಿ ಹೈದರ್ ಅವರ ಪ್ರಕಾರ, ನಾರ್ವೆ ಪ್ರಧಾನಿ ಸ್ಟೋರ್ ಅವರು ಮಾಧ್ಯಮದವರಿಗೆ ಸಂದರ್ಶನ ನೀಡಲು ಮತ್ತೆ ಮರಳಿ ಬಂದರು. ಆದರೆ, ಮೋದಿ ಬರಲಿಲ್ಲ.
ಪ್ರಧಾನಿಯಾಗಿ ತಮ್ಮ 10 ವರ್ಷಗಳ ಅವಧಿಯಲ್ಲಿ ವಿದೇಶಗಳಲ್ಲಿ ಕೇವಲ ಎರಡು ಬಾರಿ ಮಾತ್ರ ಮುಕ್ತ ಪತ್ರಿಕಾಗೋಷ್ಠಿಗಳಲ್ಲಿ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಿರುವ ಮೋದಿ ಅವರು, ತಮ್ಮ ಪ್ರಶ್ನೆಯನ್ನು ಆಲಿಸುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಲಿಂಗ್ ಹೇಳಿಕೊಂಡಿದ್ದಾರೆ. “ನಾವು ಯಾರೊಂದಿಗೆ ಸಹಕರಿಸುತ್ತೇವೆಯೋ ಆ ಅಧಿಕಾರಸ್ಥರನ್ನು ಪ್ರಶ್ನಿಸುವುದು ನಮ್ಮ ಕೆಲಸ” ಎಂದು ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ. ‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್’ನ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ನಾರ್ವೆ ಮೊದಲ ಸ್ಥಾನದಲ್ಲಿದ್ದರೆ, ಭಾರತವು 157ನೇ ಸ್ಥಾನದಲ್ಲಿದೆ ಎಂಬುದನ್ನು ಅವರು ನೆನಪಿಸಿದ್ದಾರೆ.
“ಮೋದಿ ಅವರು ಲಿಫ್ಟ್ ಒಳಗೆ ಹೋಗುತ್ತಿದ್ದಾಗಲೂ ನಾವೊಂದು ಪ್ರಶ್ನೆ ಕೇಳಲು ಪ್ರಯತ್ನಿಸಿದೆ. ಆದರೆ, ಅದಕ್ಕೂ ಮುನ್ನವೇ ಲಿಫ್ಟ್ ಬಾಗಿಲು ಮುಚ್ಚಿಕೊಂಡಿತು” ಎಂದು ಅವರು ಬರೆದಿದ್ದಾರೆ.
ಮೋದಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿರುವ ಲಿಂಗ್, “ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು, ನಾರ್ಡಿಕ್ ದೇಶಗಳ ನಂಬಿಕೆಗೆ ತಾವು ಅರ್ಹರು ಎಂದು ಮೋದಿ ಭಾವಿಸುತ್ತಾರೆಯೇ ಎಂಬುದನ್ನು ತಿಳಿಯಲು ನಾನು ಬಯಸಿದ್ದೆ” ಎಂದು ಬರೆದಿದ್ದಾರೆ.
Primeminister of India, Narendra Modi, would not take my question, I was not expecting him to.
— Helle Lyng (@HelleLyngSvends) May 18, 2026
Norway has the number one spot on the World Press Freedom Index, India is at 157th, competing with Palestine, Emirates & Cuba.
It is our job to question the powers we cooperate… pic.twitter.com/vZHYZnAvev
ಲಿಂಗ್ ಅವರ ಟ್ವೀಟ್‌ಗೆ ಓಸ್ಲೋದಲ್ಲಿನ ಭಾರತೀಯ ರಾಯಭಾರ ಕಚೇರಿಯು ಪ್ರತಿಕ್ರಿಯಿಸಿ, ಸೋಮವಾರ ರಾತ್ರಿ 9:30ಕ್ಕೆ ನಿಗದಿ ಮಾಡಲಾಗಿರುವ ಪತ್ರಿಕಾಗೋಷ್ಠಿಗೆ ತಾವು ಹಾಜರಾಗಬಹುದು ಎಂದು ತಿಳಿಸಿತ್ತು. ಆ ಪತ್ರಿಕಾಗೋಷ್ಠಿಗೆ ಹಾಜರಾಗಿದ್ದ ಫೋಟೋವನ್ನು ಸಹ ಲಿಂಗ್ ಹಂಚಿಕೊಂಡಿದ್ದಾರೆ.
ಆ ಪತ್ರಿಕಾಗೋಷ್ಠಿಯಲ್ಲಿ ಲಿಂಗ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್ ಅವರಗೆ ತಮ್ಮ ಪ್ರಶ್ನೆಗೆ ತಕ್ಷಣ ಪ್ರತಿಕ್ರಿಯಿಸುವಂತೆ ವಿನಂತಿಸಿದರು. ಆದರೆ, ಜಾರ್ಜ್ ಅದನ್ನು ನಿರಾಕರಿಸಿ ಮತ್ತೊಂದು ಪ್ರಶ್ನೆಯನ್ನು ತೆಗೆದುಕೊಂಡರು. ಅಂತಿಮವಾಗಿ ಲಿಂಗ್ ಅವರ ಸರದಿ ಬಂದಾಗ ಅವರು, “ನಾವು ನಮ್ಮ ಪಾಲುದಾರಿಕೆಯನ್ನು ಬಲಪಡಿಸುತ್ತಿರುವಾಗ, ನಾವು ನಿಮ್ಮನ್ನು ಏಕೆ ನಂಬಬೇಕು? ನಿಮ್ಮ ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಪ್ರಯತ್ನಿಸುವುದಾಗಿ ನೀವು ಭರವಸೆ ನೀಡಬಲ್ಲಿರಾ? ಮತ್ತು ಪ್ರಧಾನಿಯವರು ಭವಿಷ್ಯದಲ್ಲಿ ಭಾರತೀಯ ಮಾಧ್ಯಮಗಳ ವಿಮರ್ಶಾತ್ಮಕ ಪ್ರಶ್ನೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆಯೇ?” ಎಂದು ಕೇಳಿದರು.
ಭಾರತವನ್ನು ಏಕೆ ನಂಬಬೇಕು ಎಂಬುದಕ್ಕೆ ಉದಾಹರಣೆಯಾಗಿ ಜಾರ್ಜ್ ಅವರು, ಮೋದಿ ಸರ್ಕಾರ ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಿದ ರೀತಿ, ಭಾರತವು ಲಸಿಕೆಗಳು ಮತ್ತು ಔಷಧಿಗಳನ್ನು ರಫ್ತು ಮಾಡಿದ್ದು ಹಾಗೂ ಭಾರತವು ಯೋಗದ ಉಗಮಸ್ಥಾನವಾಗಿದೆ ಎಂಬ ವಿಷಯಗಳನ್ನು ಪ್ರಸ್ತಾಪಿಸಿದರು. ಲಿಂಗ್ ಅವರು ಇನ್ನಷ್ಟು ಕೇಳಲು ಪ್ರಯತ್ನಿಸಿದಾಗ, ಜಾರ್ಜ್ ಅವರು ಅವರ ಪ್ರಶ್ನೆಗಳನ್ನು ಆಲಿಸಲು ನಿರಾಕರಿಸಿದರು.
ಇದರ ನಂತರ ಲಿಂಗ್ ಎಕ್ಸ್‌ನಲ್ಲಿ ಹೀಗೆ ಬರೆದಿದ್ದಾರೆ: “ನಾನು ಮತ್ತು ನನ್ನ ಸಹೋದ್ಯೋಗಿಗಳು ಇಂದು ರಾತ್ರಿಯ ಪತ್ರಿಕಾಗೋಷ್ಠಿಯಲ್ಲಿ ಭಾರತದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರವಾಗಿ ನಾವು ಭಾರತವನ್ನು ಏಕೆ ನಂಬಬೇಕು ಎಂಬ ಬಗ್ಗೆ ಪ್ರಶ್ನೆಗಳನ್ನು ಕೇಳಿದೆವು. ಮಾನವ ಹಕ್ಕುಗಳ ಕುರಿತು ನಿರ್ದಿಷ್ಟ ಉತ್ತರವನ್ನು ಪಡೆಯಲು ನಾನು ಹಲವು ಬಾರಿ ಪ್ರಯತ್ನಿಸಿದೆವು. ಆದರೆ, ನಮಗೆ ಉತ್ತರಗಳು ದೊರೆಯಲಿಲ್ಲ. ಪ್ರತಿನಿಧಿಗಳು ಕೋವಿಡ್ ಸಮಯದಲ್ಲಿ ಭಾರತದ ಪ್ರಯತ್ನ ಮತ್ತು ಯೋಗದ ಬಗ್ಗೆ ಮಾತನಾಡಿದರು. ನನ್ನ ಸಹೋದ್ಯೋಗಿ ಬಳಿ ಇದರ ವೀಡಿಯೊಗಳಿದ್ದು, ನಾಳೆ ಪ್ರಕಟಿಸುತ್ತೇವೆ” ಎಂದಿದ್ದಾರೆ.
ನಂತರ, ಸರ್ಕಾರದ ಬೆಂಬಲಿಗರಿಂದ ಎದುರಾದ ಟ್ರೋಲಿಂಗ್ ಮತ್ತು ಆರೋಪಗಳಿಗಾಗಿ ಮತ್ತೊಂದು ಪೋಸ್ಟ್ ಹಂಚಿಕೊಡಿರುವ ಲಿಂಗ್, “ನಾನು ಇದನ್ನು ಬರೆಯಬೇಕಾಗುತ್ತದೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಆದರೆ, ನಾನು ಯಾವುದೇ ವಿದೇಶಿ ಸರ್ಕಾರದಿಂದ ಕಳುಹಿಸಲ್ಪಟ್ಟ ವಿದೇಶಿ ಗೂಢಚಾರಿಣಿ ಅಲ್ಲ. ನನ್ನ ಕೆಲಸ ಪತ್ರಿಕೋದ್ಯಮ, ಪ್ರಸ್ತುತ ಮುಖ್ಯವಾಗಿ ನಾರ್ವೆಯಲ್ಲಿ ಕೆಲಸ ಮಾಡುತ್ತಿದ್ದೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಲೇಖನ ಓದಿದ್ದೀರಾ?: ಬೆಲೆ ಏರಿಕೆ | ಮೋದಿ ಪಡೆಯ ಸರಳತೆಯ ಸೋಗಲಾಡಿತನವೂ, ವಿಪಕ್ಷಗಳ ದೌರ್ಬಲ್ಯವೂ
ಇದೆಲ್ಲವೂ ನಡೆಯುವುದಕ್ಕೂ ಮುನ್ನ, ಶನಿವಾರ ಡಚ್ ಪ್ರಧಾನಿ ರಾಬ್ ಜೆಟ್ಟನ್ ಅವರನ್ನು ಮೋದಿ ಭೇಟಿ ಮಾಡಿದ್ದರು. ಅವರ ಭೇಟಿಗೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ್ದ ಜೆಟ್ಟನ್, “ಮೋದಿಯವರ ಆಡಳಿತದಲ್ಲಿ ಪತ್ರಿಕಾ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಮಾನವ ಹಕ್ಕುಗಳು ಹಾಗೂ ಕಾನೂನಿನ ನಿಯಮಗಳ ಬಗ್ಗೆ ತಮ್ಮ ಮತ್ತು ಇತರ ಯುರೋಪಿಯನ್ ದೇಶಗಳ ಸರ್ಕಾರಗಳಿಗೆ ಕಳವಳವಿದೆ” ಎಂದು ಹೇಳಿದ್ದಾರೆ. ಅವರ ಹೇಳಿಕೆಗಳಿಂದಾಗಿ ಮೋದಿ ಸರ್ಕಾರವು ಮಾಧ್ಯಮಗಳೊಂದಿಗೆ ಹೊಂದಿರುವ ಸಂಬಂಧ ಮತ್ತೆ ಮುನ್ನೆಲೆಗೆ ಬಂದಿತು.
ಈ ಬಗ್ಗೆಯೂ ಸೋಮವಾರ ರಾತ್ರಿ ನಡೆದ ಜಾರ್ಜ್ ಅವರ ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ, ಜಾರ್ಜ್ ಅವರು, “ನಾನು ಆ ಹೇಳಿಕೆಯನ್ನು ನೋಡಿಲ್ಲ. ಸ್ವಾತಂತ್ರ್ಯದ ಬಗ್ಗೆ ಎತ್ತಲಾದ ವಿಷಯದ ಬಗ್ಗೆ ನಾನು ಪ್ರಶ್ನೆಯನ್ನು ಉಲ್ಲೇಖಿಸುತ್ತಿದ್ದೇನೆ ಮತ್ತು ಭಾರತ ಎಷ್ಟು ಸುಂದರ ದೇಶ ಎಂಬುದನ್ನು ನಾನು ಸ್ಪಷ್ಟಪಡಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ಧನ್ಯವಾದಗಳು,” ಎಂದು ಹೇಳಿ ಚರ್ಚೆಯನ್ನು ಮುಗಿಸಿದ್ದಾರೆ.
ಅಂದಹಾಗೆ, ಕೊನೆಯದಾಗಿ, ಮೋದಿ ಅವರು 2023ರಲ್ಲಿ ವಾಷಿಂಗ್ಟನ್‌ನಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ನಡೆದ ಮುಕ್ತ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದರು. ಅಂದು ಅವರು ಎದುರಿಸಿದ ಪ್ರಶ್ನೆಯು, ತಮ್ಮ ಸರ್ಕಾರದಡಿಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ವಾಕ್ ಸ್ವಾತಂತ್ರ್ಯದ ಕುರಿತಾಗಿತ್ತು. ಆ ಪ್ರಶ್ನೆಯನ್ನು ಕೇಳಿದ್ದ ‘ವಾಲ್ ಸ್ಟ್ರೀಟ್ ಜರ್ನಲ್’ನ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ಅವರು ಹಿಂದುತ್ವ ರಾಜಕಾರಣಿಗಳು ಮತ್ತು ಬೆಂಬಲಿಗರಿಂದ ತೀವ್ರ ಆನ್‌ಲೈನ್ ಕಿರುಕುಳ ಮತ್ತು ದಾಳಿಗಳಿಗೆ ಒಳಗಾಗಿದ್ದರು.



