ದೇಶದಲ್ಲಿ ಹಸಿರು ಕ್ರಾಂತಿಯ ಮೂಲಕ ಆಹಾರ ಉತ್ಪಾದನೆ ಹೆಚ್ಚಿಸಲು ಕಾರಣರಾದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಜಯಂತಿ ಆಚರಿಸುವಲ್ಲಿ ಹರಿಹರ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ನಿರ್ಲಕ್ಷ್ಯತೋರಿದ್ದು,
ನಿರ್ಲಕ್ಷ್ಯವಹಿಸಿದ ಅಧಿಕಾರಿಗಳ ವಿರುದ್ಧ ವಿಚಾರಣೆ, ಕ್ರಮ ಕೈಗೊಂಡು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ ದಸಂಸ) ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಗಿತ್ತೆ ವಿಠ್ಠಲ್ ಮಾಧವರಾವ್ ಅವರಿಗೆ ಮನವಿ ಸಲ್ಲಿಸಿದರು.
ದಾವಣಗೆರೆ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೋಮವಾರ ಪ್ರತಿಭಟನಾ ಧರಣಿ ನಡೆಸಿದ ಕದಸಂಸ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ ಮಾತನಾಡಿ, “ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಡಾ.ಬಾಬು ಜಗಜೀವನರಾಂ ಜಯಂತಿ ನಿರ್ಲಕ್ಷ್ಯ ತೋರಿದ ಸಂಬಂಧಿತ ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಗಳು, ಪಿಡಿಒಗಳು ಮತ್ತು ಕಾರ್ಯದರ್ಶಿಗಳನ್ನು ತಕ್ಷಣ ಅಮಾನತು ಮಾಡಬೇಕು. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಹರಿಹರ ತಾಲೂಕು ಸಂಚಾಲಕ ಮಹಾಂತೇಶ ಮಾತನಾಡಿ “ಕಳೆದ ಏ.4ರಂದು ನಡೆದ ಜಯಂತಿ ಆಚರಣೆಯಲ್ಲಿ ಹಲವೆಡೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸದೇ ಕರ್ತವ್ಯ ಲೋಪ ತೋರಿದ್ದಾರೆ. ಹೊಳೆಸಿರಿಗೆರೆ ಹಾಗೂ ಬೆಳ್ಳೂಡಿ ಗ್ರಾಮ ಪಂಚಾಯಿತಿಗಳಲ್ಲಿ ಒಬ್ಬರು ಮಾತ್ರ ಭಾಗವಹಿಸಿದ್ದು, ಯಲವಟ್ಟಿ, ಕಡರನಾಯಕನಹಳ್ಳಿ, ಕುಣಿಬೆಳೆಕೆರೆ ಹಾಗೂ ನಂದಿಗಾವಿ ಗ್ರಾಮ ಪಂಚಾಯಿತಿಗಳಲ್ಲಿ ಇಬ್ಬರು ಮಾತ್ರ ಉಪಸ್ಥಿತರಿದ್ದರು. ಭಾನುವಳ್ಳಿ, ರಾಜನಹಳ್ಳಿ, ಹನಗವಾಡಿ, ಕೊಂಡಜ್ಜಿ, ಉಕ್ಕಡಗಾತ್ರಿ ಮತ್ತು ಬನ್ನಿಕೋಡು ಗ್ರಾಮ ಪಂಚಾಯಿತಿಗಳಲ್ಲಿ ಕೇವಲ ಮೂವರು ಭಾಗವಹಿಸಿದ್ದರು” ಎಂದು ಆರೋಪಿಸಿದರು.

“ಹಲವು ಗ್ರಾಮ ಪಂಚಾಯಿತಿಗಳಲ್ಲಿ ಡಾ. ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಹೂವಿನ ಹಾರವನ್ನೂ ಹಾಕದೆ ಅವಮಾನ ಮಾಡಲಾಗಿದೆ. ಭಾನುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪ್ಲಾಸ್ಟಿಕ್ ಹಾರ ಬಳಸಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬೀಜ ರಸಗೊಬ್ಬರ ಪೂರೈಕೆಗೆ ರೈತಸಂಘ ಆಗ್ರಹ

ಪ್ರತಿಭಟನೆಯಲ್ಲಿ ಮಹಿಳಾ ಸಂಚಾಲಕಿ ವಿಜಯಲಕ್ಷಿ, ಬಿ.ಮುಗ್ದುಂ, ಚೌಡಪ್ಪ ಸಿ.ಭಾನುವಳ್ಳಿ, ತಿಮ್ಮಣ್ಣ, ಸುಶೀಲಮ್ಮ ಕಡ್ಲೆಗೊಂದಿ, ಎಂ.ಎಸ್.ಮಂಜುನಾಥ್ ಕೊಕ್ಕನೂರ್, ಡಿ.ರಾಮಣ್ಣ ಹಿಂಡಸಘಟ್ಟ, ಮರಿ ಮಲ್ಲಯ್ಯನಳ್ಳಿ ಗುಡ್ಡಪ್ಪ, ಲೋಕೇಶ್, ಶಿವಪ್ಪ ಸೇರಿದಂತೆ ಕದಸಂಸ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.





