ಇರಾನ್‌ನ ಪರಮೋಚ್ಚ ನಾಯಕ (Supreme Leader) ಅಯತೊಲ್ಲಾ ಮೊಜ್ತಬಾ ಖಮೇನಿ ಅವರ ಭಾರತದ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಅವರು ಭಾರತೀಯರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಆಗ್ರಾದಲ್ಲಿರುವ ಪ್ರಸಿದ್ಧ ‘ಶಹೀದ್-ಎ-ಸಾಲಿಸ್’ ದರ್ಗಾಕ್ಕೆ ನಾಲ್ಕು ದಿನಗಳ ಭೇಟಿ ನೀಡಿರುವ ಡಾ. ಇಲಾಹಿ, ಈ ಸಂದರ್ಭದಲ್ಲಿ ಹಬ್ಬದ ಶುಭಾಶಯಗಳನ್ನು ಕೋರಿದರು. ಪ್ರತಿಯೊಬ್ಬ ಭಾರತೀಯರೂ ದೀರ್ಘಕಾಲ ಆರೋಗ್ಯ ಮತ್ತು ಸಂತೋಷದಿಂದ ಇರಲಿ ಎಂದು ಅವರು ಪ್ರಾರ್ಥಿಸಿದರು.
ದೀಪಾವಳಿಯನ್ನು “ಬೆಳಕಿನ ಹಬ್ಬ” ಎಂದು ಬಣ್ಣಿಸಿದ ಅವರು, “ಈ ಹಬ್ಬವು ಸಂತೋಷ ಮತ್ತು ಬೆಳಕಿನ ಪ್ರತೀಕವಾಗಿದೆ. ಪ್ರತಿಯೊಬ್ಬ ಭಾರತೀಯರೂ ಸಮೃದ್ಧಿಯಿಂದಿರಲಿ ಹಾಗೂ ಭಾರತ ಮತ್ತು ಇರಾನ್ ಎರಡೂ ದೇಶಗಳು ಮತ್ತಷ್ಟು ಅಭಿವೃದ್ಧಿ ಹೊಂದಲಿ” ಎಂದು ಆಶಿಸಿದರು.
ಮೊಘಲರ ಕಾಲದಲ್ಲಿ ಹುತಾತ್ಮರಾದ ಪ್ರಸಿದ್ಧ ‘ಶಹೀದ್-ಎ-ಸಾಲಿಸ್’ ಅವರ ದರ್ಗಾ ಆಗ್ರಾದಲ್ಲಿದೆ. ಇಲ್ಲಿ ನಡೆಯುವ ನಾಲ್ಕು ದಿನಗಳ ‘ಮಜ್ಲಿಸ್’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾವಿರಾರು ಜನರು ಆಗಮಿಸುತ್ತಾರೆ.
‘ಶಹೀದ್-ಎ-ಸಾಲಿಸ್’ ದರ್ಗಾದಲ್ಲಿ ಆಯೋಜಿಸಿದ್ದ ಮಜ್ಲಿಸ್‌ನ ಸಂಚಾಲಕ ಮಿರ್ಜಾ ಶಫೀಕ್ ಹಸನ್ ಶಫಾಕ್ ಮಾತನಾಡಿ, “ವಿದೇಶಿ ಅತಿಥಿಯೊಬ್ಬರು ಆಗಮಿಸಿ ಭಾರತದ ಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ, ಭಾರತದಲ್ಲಿರುವ ಇರಾನ್ ರಾಯಭಾರಿ ಮೊಹಮ್ಮದ್ ಫತೇಲಿ ಅವರು ‘ಎಕ್ಸ್’ ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಸಂದೇಶವೊಂದನ್ನು ಹಂಚಿಕೊಂಡಿದ್ದು, “ನಮಸ್ಕಾರ್” ಎಂದು ಹೇಳುವ ಮೂಲಕ ತಮ್ಮ ಮಾತು ಆರಂಭಿಸಿದ್ದಾರೆ.
“ಎಲ್ಲಾ ಭಾರತೀಯರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಬೆಳಕಿನ ಹಬ್ಬವು ಕತ್ತಲೆಯ ಮೇಲಿನ ಬೆಳಕಿನ ಹಾಗೂ ಅಜ್ಞಾನದ ಮೇಲಿನ ಜ್ಞಾನದ ವಿಜಯದ ಸಂಕೇತವಾಗಿದೆ. ಇರಾನ್ ಮತ್ತು ಭಾರತದ ನಡುವಿನ ಬಾಂಧವ್ಯವು ಶತಮಾನಗಳಷ್ಟು ಹಳೆಯದಾಗಿದ್ದು, ಉಭಯ ದೇಶಗಳು ಹಂಚಿಕೊಂಡ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಆಧರಿಸಿದೆ. ಈ ದೀಪಾವಳಿಯು ನಿಮ್ಮೆಲ್ಲರ ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು, ಧನ್ಯವಾದಗಳು” ಎಂದು ವಿಡಿಯೊದಲ್ಲಿ ಅವರು ಹೇಳಿದ್ದಾರೆ.
ದೀಪಾವಳಿಯನ್ನು ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಸಡಗರದಿಂದ ಆಚರಿಸಲಾಗುತ್ತಿದೆ. ಹಲವು ರಾಷ್ಟ್ರಗಳು ಭಾರತಕ್ಕೆ ದೀಪಾವಳಿ ಶುಭಾಶಯಗಳನ್ನು ಕೋರಿದ್ದು, ವಿಶ್ವಾದ್ಯಂತ ಇರುವ ಭಾರತೀಯ ರಾಯಭಾರ ಕಚೇರಿಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
‘ಭಾರತ – ಇರಾನ್ ಬಾಂಧವ್ಯ ಶತಮಾನಗಳಿಗಿಂತ ಹಳೆಯದು’; ದೀಪಾವಳಿ ಹಬ್ಬಕ್ಕೆ ಖಮೇನಿ ಪ್ರತಿನಿಧಿ ಶುಭಾಶಯ
<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>
ಪೋಸ್ಟ್ ಹಂಚಿಕೊಳ್ಳಿ:




