ಅರುಣಾಚಲ ಪ್ರದೇಶದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅತಿಕ್ರಮಣ ಮಾಡುತ್ತಿದೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಾಜಿ ಮುಖ್ಯಸ್ಥ ಶತ್ರುಜೀತ್ ಸಿಂಗ್ ಕಪೂರ್ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ‘ನಾಹ್ ವೆಲ್ಫೇರ್ ಸೊಸೈಟಿ’ಯ ಅಧ್ಯಕ್ಷ ಕೆರು ಚಾಡರ್, “ಸರ್ಕಾರವೇನು ಮಾಡಿದೆ ಎಂದು ಅವರನ್ನು ಕೇಳಿ. ನಾವು ದೀರ್ಘಕಾಲದಿಂದ ಇದನ್ನೇ ಹೇಳುತ್ತಿದ್ದೇವೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಪ್ಪರ್ ಸುಬಾನ್ಸಿರಿ ಜಿಲ್ಲೆಯ 7,000 ಅಡಿ ಎತ್ತರದ ಟಾಕ್ಸಿಂಗ್ ಪ್ರದೇಶದ ನಿವಾಸಿಯಾಗಿರುವ ಚಾಡರ್, ಕೇಂದ್ರ ಸರ್ಕಾರ ತಕ್ಷಣ ವಾಸ್ತವ ಸ್ಥಿತಿಯನ್ನು ಒಪ್ಪಿಕೊಂಡು, ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕಳೆದ ಜೂನ್‌ನಲ್ಲಿ ಅಪ್ಪರ್ ಸುಬಾನ್ಸಿರಿ ಜಿಲ್ಲಾಧಿಕಾರಿಗೆ ಜ್ಞಾಪಕ ಪತ್ರ ಸಲ್ಲಿಸಿದ್ದ ಈ ಸಂಘಟನೆಯು, ಟಾಕ್ಸಿಂಗ್ ಸೆಕ್ಟರ್ ಸಮೀಪ ಭಾರತೀಯ ಭೂಪ್ರದೇಶದೊಳಗೆ ಚೀನಾ ಪಡೆಗಳು ನಿಧಾನವಾಗಿ ತಮ್ಮ ಅಸ್ತಿತ್ವವನ್ನು ವಿಸ್ತರಿಸುತ್ತಿವೆ ಎಂದು ಆರೋಪಿಸಿತ್ತು. ಸ್ಥಳೀಯ ಬುಡಕಟ್ಟು ಜನಾಂಗದವರು ಸಾಂಪ್ರದಾಯಿಕವಾಗಿ ಮೇಯಿಸಲು, ಬೇಟೆಯಾಡಲು ಮತ್ತು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಬಳಸುತ್ತಿದ್ದ ಜಾಗಗಳಲ್ಲಿ ಚೀನಾ ಸೇನೆ ರಸ್ತೆಗಳು, ಸೇತುವೆಗಳು ಮತ್ತು ಸೇನಾ ಶಿಬಿರಗಳನ್ನು ನಿರ್ಮಿಸುತ್ತಿದೆ ಎಂದು ಸಂಘಟನೆ ಗಂಭೀರ ಆರೋಪ ಮಾಡಿತ್ತು.
ಆದರೆ, ಅರುಣಾಚಲ ಪ್ರದೇಶದ ಬಿಜೆಪಿ ಸರ್ಕಾರವು ಈ ವರದಿಗಳನ್ನು ತಕ್ಷಣವೇ ತಳ್ಳಿಹಾಕಿತ್ತು. ಗೃಹ ಸಚಿವ ಮಾಮಾ ನಟುಂಗ್ ಅವರು ಇದು “ಸುಳ್ಳು ಮತ್ತು ಸಾಮಾಜಿಕ ಜಾಲತಾಣಗಳ ವದಂತಿ” ಎಂದು ಹೇಳಿದ್ದರು. ಇದೇ ವೇಳೆ, ಪ್ರತಿಪಕ್ಷ ‘ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ’ (PPA) ವಾಸ್ತವಾಂಶ ತಿಳಿಯಲು ತನ್ನ ತಂಡವನ್ನು ಟಾಕ್ಸಿಂಗ್‌ಗೆ ಕಳುಹಿಸಿತ್ತು. ಪ್ರಭಾವಿ ವಿದ್ಯಾರ್ಥಿ ಸಂಘಟನೆ ‘ಆಲ್ ಅರುಣಾಚಲ ಪ್ರದೇಶ್ ಸ್ಟೂಡೆಂಟ್ಸ್ ಯೂನಿಯನ್’ (AAPSU) ಕೂಡಾ ಇಟಾನಗರದಿಂದ ತಂಡವೊಂದನ್ನು ಕಳುಹಿಸಿ, ಆಗಸ್ಟ್ 15 ರಂದು ಟಾಕ್ಸಿಂಗ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿತ್ತು. ಇದು ಗಡಿಯಲ್ಲಿರುವ ಭಾರತೀಯ ಸೇನೆಗೆ ಬೆಂಬಲ ಸೂಚಿಸಲು ಮತ್ತು ಕೇಂದ್ರದ ಗಮನ ಸೆಳೆಯುವ ಯತ್ನವಾಗಿತ್ತು ಎಂದು AAPSU ಹೇಳಿಕೊಂಡಿತ್ತು. ಟಾಕ್ಸಿಂಗ್ ಅನ್ನು ಒಳಗೊಂಡಿರುವ ಅರುಣಾಚಲ ಪಶ್ಚಿಮ ಲೋಕಸಭಾ ಕ್ಷೇತ್ರದ ಸಂಸದ, ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಚೀನಾ ಅತಿಕ್ರಮಣದ ಆರೋಪವನ್ನು ನಿರಾಕರಿಸಿದ್ದರು.
ಆದರೆ, ಅಕ್ಟೋಬರ್ 22 ರಂದು ನಿವೃತ್ತಿಗೂ ಒಂದು ವಾರ ಮುನ್ನ ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಐಟಿಬಿಪಿ ಮುಖ್ಯಸ್ಥ ಕಪೂರ್, ಅರುಣಾಚಲ ಪ್ರದೇಶದ ಹಲವು ಸ್ಥಳಗಳಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಮುಖಾಮುಖಿ ಘರ್ಷಣೆಗಳು ನಡೆಯುತ್ತಿವೆ ಎಂದು ಬಹಿರಂಗಪಡಿಸಿದ್ದರು. ಇದು ಸ್ಥಳೀಯ ಸಮುದಾಯಗಳ ಆರೋಪಗಳನ್ನು ತಳ್ಳಿಹಾಕಿದ್ದ ಕೇಂದ್ರ ಸರ್ಕಾರಕ್ಕೆ ಮುಜುಗರ ತಂದಿದೆ.
“ವಾಸ್ತವ ಗಡಿ ರೇಖೆ (LAC) ಎಲ್ಲಿ ಹಾದುಹೋಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಭಾರತೀಯ ಅಥವಾ ಚೀನಾ ಪಡೆಗಳಿಗೂ ಗಡಿಯ ನಿಖರ ಮಾಹಿತಿ ಇಲ್ಲ. ಗಡಿಯ ಬಗ್ಗೆ ಕೇವಲ ಸ್ಥಳೀಯ ಬುಡಕಟ್ಟು ಜನಾಂಗದವರಿಗೆ ಮಾತ್ರ ತಿಳಿದಿದೆ. 1962 ರ ಯುದ್ಧದ ಬಳಿಕ ಸಾಂಪ್ರದಾಯಿಕ ವ್ಯಾಪಾರ, ಸಾಂಸ್ಕೃತಿಕ ವಿನಿಮಯ ನಿಂತುಹೋಗಿದ್ದರೂ, ಗಡಿಯ ಬಗ್ಗೆ ಸ್ಥಳೀಯರಿಗೆ ಸ್ಪಷ್ಟ ಅರಿವಿದೆ” ಎಂದು ‘ಅರುಣಾಚಲ ಫ್ರಾಂಟಿಯರ್ ಟ್ರೈಬಲ್ ಫ್ರಂಟ್’ (AFTF) ಅಧ್ಯಕ್ಷ ತಡಕ್ ನಾಲೋ ‘ಡಿಎಚ್’ಗೆ ತಿಳಿಸಿದ್ದಾರೆ. “ಅತಿಕ್ರಮಣ ಹೊಸದೇನಲ್ಲ, ಕೋವಿಡ್ ಸಮಯದಿಂದ ಇದು ಹೆಚ್ಚಾಗಿದೆ. ಟಾಕ್ಸಿಂಗ್, ಗೆಲೆಮೊ ಮತ್ತು ಮಜಾ ಸೆಕ್ಟರ್‌ಗಳಲ್ಲಿ ಚೀನಾ ಪಡೆಗಳು ಭಾರತದ ಭೂಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಸ್ಥಳೀಯರು ಹೇಳುತ್ತಲೇ ಇದ್ದಾರೆ. ಸರ್ಕಾರ ಇದನ್ನು ‘ನಕಲಿ’ ಎಂದು ಹೇಳುವ ಬದಲು ಕ್ರಮ ಕೈಗೊಳ್ಳಬೇಕಿತ್ತು. ಈಗ ಐಟಿಬಿಪಿ ಮುಖ್ಯಸ್ಥರ ಹೇಳಿಕೆಯು ಸ್ಥಳೀಯರ ಆರೋಪಗಳಿಗೆ ಪುಷ್ಟಿ ನೀಡಿದೆ” ಎಂದು ಟಾಕ್ಸಿಂಗ್ ನಿವಾಸಿಯಾಗಿರುವ ನಾಲೋ ಹೇಳಿದ್ದಾರೆ.
ಟಾಕ್ಸಿಂಗ್‌ನಿಂದ ಎಲ್‌ಎಸಿ ಕೇವಲ 15-20 ಕಿ.ಮೀ. ದೂರದಲ್ಲಿದೆ. ಆದರೆ, “ಭಾರತದ ಕಡೆ ಗಡಿಯವರೆಗೆ ಯಾವುದೇ ರಸ್ತೆಯಿಲ್ಲ. ಚೀನಾ ಭೌಗೋಳಿಕ ಅನುಕೂಲವನ್ನು ಹೊಂದಿದ್ದು, ಗಡಿಯವರೆಗೂ ಹೆದ್ದಾರಿಗಳನ್ನು ನಿರ್ಮಿಸಿದೆ. ನಮಗೆ ರಸ್ತೆ ನಿರ್ಮಿಸಲು ಸಾಧ್ಯವಾಗದಿದ್ದರೆ, ನಮ್ಮ ಸೇನಾ ಪಡೆಗಳಿಗೆ ಉಪಕರಣಗಳನ್ನು ತಲುಪಿಸುವುದು ಹೇಗೆ?” ಎಂದು ನಾಲೋ ಪ್ರಶ್ನಿಸಿದ್ದಾರೆ. ಸಿಯಾಂಗ್ ನದಿಗೆ ಬೃಹತ್ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ಸ್ಥಳೀಯರ ಮೇಲೆ ಕೇಂದ್ರ ಪಡೆಗಳನ್ನು ನಿಯೋಜಿಸಿ ಬಂಧಿಸುತ್ತಿರುವುದರ ಬಗ್ಗೆಯೂ ಅವರು ಆಕ್ರೋಶ ವ್ಯಕ್ತಪಡಿಸಿದರು. ಚೀನಾ ಟಿಬೆಟ್‌ನಲ್ಲಿ ನಿರ್ಮಿಸುತ್ತಿರುವ 60,000 ಮೆಗಾವ್ಯಾಟ್ ಅಣೆಕಟ್ಟಿನಿಂದ ಎದುರಾಗಬಹುದಾದ ಅಪಾಯಗಳನ್ನು ಎದುರಿಸಲು 11,200 ಮೆಗಾವ್ಯಾಟ್ ಸಾಮರ್ಥ್ಯದ ‘ಸಿಯಾಂಗ್ ಅಪ್ಪರ್ ಮಲ್ಟಿಪರ್ಪಸ್ ಪ್ರಾಜೆಕ್ಟ್’ ಅಗತ್ಯ ಎಂದು ಭಾರತ ಹೇಳುತ್ತಿದೆ. ಆದರೆ, ಇದರಿಂದ ತಾವು ಒಕ್ಕಲೆಬ್ಬಿಸಲ್ಪಡಬಹುದು ಎಂಬುದು ಸ್ಥಳೀಯರ ಆತಂಕವಾಗಿದೆ.
ಗಡಿಯುದ್ದಕ್ಕೂ ರಸ್ತೆಗಳಿಲ್ಲದ ಕಾರಣ, ಭಾರತ ಮತ್ತು ಚೀನಾ ಸೇನೆಗಳು ಕಾಲ್ನಡಿಗೆಯಲ್ಲಿ ಗಸ್ತು ತಿರುಗುವಾಗ ಮುಖಾಮುಖಿಯಾಗಿ ಘರ್ಷಣೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಚೀನಾ, ಅರುಣಾಚಲ ಪ್ರದೇಶದ ಪೂರ್ವ ವಲಯದಲ್ಲಿನ ಸುಮಾರು 90,000 ಚ.ಕಿ.ಮೀ. ಭಾರತೀಯ ಭೂಪ್ರದೇಶವನ್ನು ತನ್ನದೆಂದು (ಇದನ್ನು ದಕ್ಷಿಣ ಟಿಬೆಟ್ ಅಥವಾ ‘ಜಂಗ್ನಾನ್’ ಎಂದು ಚೀನಾ ಕರೆಯುತ್ತದೆ) ಹೇಳಿಕೊಳ್ಳುತ್ತಿದೆ. ಆದರೆ, ಭಾರತವು ಈ ಹೇಳಿಕೆಗಳನ್ನು ನಿರಾಕರಿಸಿದ್ದು, ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದೆ. ಗಡಿಯಲ್ಲಿನ ಈ ವಿವಾದವು ಕೇವಲ ಭೌಗೋಳಿಕ ಮಾತ್ರವಲ್ಲ, ರಾಜಕೀಯ ಮತ್ತು ಭೌಗೋಳಿಕ-ಕಾರ್ಯತಂತ್ರದ ಆಯಾಮವನ್ನೂ ಹೊಂದಿದೆ.





