ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಕನ್ನಡ ಸೇವಾ ಪ್ರಶಸ್ತಿಗೆ ಭಾಜನರಾದ ನಮ್ಮ ಕರ್ನಾಟಕ ಸೇನೆಯ ಬೀದರ್ ಜಿಲ್ಲಾಧ್ಯಕ್ಷ ಗಣೇಶ್ ಜಿ. ಪಾಟೀಲ್ ಅವರನ್ನು ತಾಲೂಕು ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪಟ್ಟಣದ ಚನ್ನಬಸವ ಪಟ್ಟದೇವರ ಆಶ್ರಮದಲ್ಲಿ ತಾಲೂಕು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಂಗಮೇಶ ಗುಮ್ಮೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣೇಶ್ ಜಿ.ಪಾಟೀಲ್ ಅವರಿಗೆ ಕನ್ನಡಾಂಬೆಯ ಭಾವಚಿತ್ರ ನೀಡಿ, ಶಾಲು ಹೊದಿಸಿ, ಹಾರ ಹಾಕಿ ಸಿಹಿ ತಿನಿಸುವ ಮೂಲಕ ಅಭಿನಂದಿಸಲಾಯಿತು.
ಗಣೇಶ್ ಜಿ. ಪಾಟೀಲ್ ಮಾತನಾಡಿ, “ಕಳೆದ ಹಲವು ವರ್ಷಗಳಿಂದ ನಾಡು, ನುಡಿ, ಭಾಷೆ, ನೆಲ, ಜಲ, ಗಡಿನಾಡಿನ ಕನ್ನಡದ ಉಳಿವು, ರೈತರ ಸಮಸ್ಯೆಗಳು ಹಾಗೂ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ನನ್ನ ಅಲ್ಪ ಪ್ರಮಾಣದ ಕನ್ನಡಪರ ಹೋರಾಟ ಮತ್ತು ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ ಜಿಲ್ಲಾ ಮಟ್ಟದ ಕನ್ನಡ ಸೇವಾ ಪ್ರಶಸ್ತಿ ನೀಡಿ ಗೌರವಿಸಿರುವುದು ಅಪಾರ ಸಂತಸ ತಂದಿದೆ” ಎಂದರು.

ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಈ ಗೌರವ ಕೇವಲ ನನಗೆ ಮಾತ್ರ ಸೀಮಿತವಲ್ಲ; ಕನ್ನಡಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಎಲ್ಲ ಕನ್ನಡಪರ ಹೋರಾಟಗಾರರಿಗೆ ಸಂದ ಗೌರವವಾಗಿದೆ. ಕನ್ನಡ ಮನಸ್ಸುಗಳೆಲ್ಲ ಒಂದಾಗಿ ಗಡಿಭಾಗದಲ್ಲಿ ಕನ್ನಡ ಜಾಗೃತಿ ಮೂಡಿಸುವುದರ ಜತೆಗೆ ಕನ್ನಡ ಭಾಷೆ, ನೆಲ, ಜಲ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಕರೆ ನೀಡಿದರು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಂಗಮೇಶ ಗುಮ್ಮೆ, ಸಂತೋಷ ಬಿ.ಜಿ. ಪಾಟೀಲ್, ಮಾಳಸ್ಕಾಂತ ವಾಘೆ, ಸಂಗಮೇಶ ಭೂರೆ, ಚಂದ್ರಕಾಂತ ಮಲ್ಲಾರೆ, ಅಶೋಕ್ ಅಂಬಿಗರ್, ಬಸವರಾಜ ಕಾರಬಾರಿ, ವಿಷ್ಣು ದುರ್ವೆ, ರಾಜಕುಮಾರ್ ದುರ್ವೆ, ನವನಾಥ ಕಲವಾಡಿ, ಶಿವಸ್ವಾಮಿ, ಮಹೇಶ ರಾಚೋಟೆ, ಮಹದೇವ ಸೂರ್ಯವಂಶಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ : ಔರಾದ್ | ಸಂಭ್ರಮದಿಂದ ಜರುಗಿದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನ




