ಕರಾವಳಿಯಲ್ಲಿ ದಲಿತ ಚಳವಳಿಗೆ ಅಡಿಪಾಯ ಹಾಕಿ, ಬಡವರ ಗುಡಿಸಲಿನಲ್ಲಿ ಅರಿವಿನ ಅಂಕುರ ಮೂಡಿಸಲು ನಿರಂತರವಾಗಿ ಶ್ರಮಿಸಿದ ಮಂಗಳೂರಿನ ಹಿರಿಯ ದಲಿತ ಮುಖಂಡ ಎನ್. ದೇವದಾಸ ಅವರ ನಿಧನಕ್ಕೆ ಅಂಬೇಡ್ಕರ್ ಯುವಸೇನೆ, ಉಡುಪಿ ಜಿಲ್ಲಾ ಘಟಕದ ವತಿಯಿಂದ ನುಡಿನಮನ ಕಾರ್ಯಕ್ರಮ ನಡೆಯಿತು.
ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ದೇವದಾಸ ಅವರು ದಲಿತರು ಸ್ವಾಭಿಮಾನಿಗಳಾಗಿ, ಸ್ವಾವಲಂಬಿಗಳಾಗಿ ಬದುಕಬೇಕು ಎಂಬ ಆಶಯದೊಂದಿಗೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ತತ್ವಗಳನ್ನು ಮೈಗೂಡಿಸಿಕೊಂಡು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸದಾ ತ್ಯಾಗಕ್ಕೆ ಸಿದ್ಧರಾಗಿ ಶ್ರಮಿಸಿದ್ದರು ಎಂದು ಹೇಳಿದರು.
ದಲಿತ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿ, ದೃಢ ಹಾಗೂ ಪ್ರಖರ ವೈಚಾರಿಕತೆಯ ಮೂಲಕ ದೇವದಾಸ ಅವರು ಸಂಪ್ರದಾಯವಾದಿ ಮನೋಭಾವವನ್ನು ವಿರೋಧಿಸಿ, ಆಧುನಿಕ ದೃಷ್ಟಿಕೋನದೊಂದಿಗೆ ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು. ಅಂಬೇಡ್ಕರ್ ಅವರ ವಿಚಾರಧಾರೆಯ ಹಾದಿಯಲ್ಲಿ ನಿಷ್ಠೆಯಿಂದ ದುಡಿದ ಅಪರೂಪದ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿದರು.
ಹಿರಿಯ ದಲಿತ ಮುಖಂಡ ಕರುಣಾಕರ ಮಾಸ್ಟರ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ದಲಿತ ಸಂಘಟನೆ ಕಟ್ಟುವಲ್ಲಿ ದೇವದಾಸ ಅವರ ಶ್ರಮವನ್ನು ಸ್ಮರಿಸಿ ಭಾವುಕರಾದರು.
ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೇರ್ಗಿ, ಕರ್ನಾಟಕ ರಾಜ್ಯ ಎಸ್‌ಸಿ-ಎಸ್‌ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಯು. ಪರಮೇಶ್ವರ್, ದಲಿತ ಮುಖಂಡ ಹರೀಶ್ ಸಲ್ಯಾನ್ ಸೇರಿದಂತೆ ಹಲವರು ಎನ್. ದೇವದಾಸ ಅವರಿಗೆ ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ದಯಾಕರ ಮಲ್ಪೆ, ನಾರಾಯಣ ಪರ್ಕಳ, ಶಿವಣ್ಣ, ರವಿರಾಜ್ ಲಕ್ಷ್ಮೀನಗರ, ಗುಣವಂತ ತೊಟ್ಟಂ, ಪ್ರಸಾದ್ ಮಲ್ಪೆ, ಅರುಣ್ ಸಲ್ಯಾನ್, ಶ್ರೀನಾಥ್ ಅಚಾರಿ, ಹರೀಶ್ ಅಮೀನ್ ತೊಟ್ಟಂ, ಫಜೀಲ್, ಬಿ.ಎನ್. ಪ್ರಶಾಂತ್, ಸುಶೀಲ್ ಕುಮಾರ್ ಕೊಡವೂರು, ಯೋಗೀಶ್ ನೇರ್ಗಿ, ನಾರಾಯಣ ಅಚಾರಿ, ಶಿವಕುಮಾರ್ ಪರ್ಕಳ, ವನಿತಾ ಅರುಣ್, ಶಶಿಕಲಾ ತೊಟ್ಟಂ, ಶ್ರೀಮತಿ ಗಂಗೆ, ಜಲಜ, ಸಂಧ್ಯಾ ತಿಲಕ್‌ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುಕೇಶ್ ನಿಟ್ಟೂರು ಸ್ವಾಗತಿಸಿ, ಅಶೋಕ್ ಪುತ್ತೂರು ವಂದಿಸಿದರು.






