ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ನಡುವೆ ಸಾಂಕೇತಿಕ ನಡೆಯೊಂದರಲ್ಲಿ, ಇಸ್ರೇಲ್‌ನತ್ತ ಉಡಾವಣೆ ಮಾಡಿದ ಕ್ಷಿಪಣಿಗಳ ಮೇಲೆ ಇರಾನ್ ‘ಭಾರತದ ಜನತೆಗೆ ಧನ್ಯವಾದಗಳು’ ಎಂಬ ಸಂದೇಶವನ್ನು ಬರೆದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಮುಂಬೈನಲ್ಲಿರುವ ಇರಾನ್ ಕಾನ್ಸುಲೇಟ್ ಜನರಲ್ ಮತ್ತು ಇರಾನ್‌ನ ಸರ್ಕಾರಿ ಮಾಧ್ಯಮಗಳು ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ದೃಶ್ಯಗಳಲ್ಲಿ, ಇರಾನ್‌ನ ಏರೋಸ್ಪೇಸ್ ಪಡೆಯ ಸಿಬ್ಬಂದಿ ಉಡಾವಣೆಗೂ ಮುನ್ನ ಕ್ಷಿಪಣಿಗಳ ಮೇಲೆ ನೀಲಿ ಬಣ್ಣದ ಮಾರ್ಕರ್ ಬಳಸಿ ‘ಭಾರತದ ಜನತೆಗೆ ಧನ್ಯವಾದಗಳು’ (Thank you to people of India) ಎಂದು ಬರೆಯುತ್ತಿರುವುದು ಕಂಡುಬಂದಿದೆ. ಸ್ಪೇನ್, ಪಾಕಿಸ್ತಾನ ಮತ್ತು ಜರ್ಮನಿಯ ಜನರನ್ನು ಉದ್ದೇಶಿಸಿಯೂ ಇಂತಹದ್ದೇ ಸಂದೇಶಗಳನ್ನು ಬರೆಯಲಾಗಿದ್ದು, ಟೆಹ್ರಾನ್ ಬಗ್ಗೆ ಸಹಾನುಭೂತಿ ಹೊಂದಿರುವ ರಾಷ್ಟ್ರಗಳತ್ತ ಇದು ಒಂದು ರೀತಿಯ ವಿಶ್ವಾಸದ ಹಸ್ತ ಚಾಚುವ ಪ್ರಯತ್ನವಾಗಿದೆ ಎಂದು ಹೇಳಲಾಗುತ್ತದೆ.
ಇರಾನ್‌ನ ‘ಪ್ರೆಸ್ ಟಿವಿ’ ವರದಿ ಮಾಡಿರುವಂತೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನಡೆಸುತ್ತಿರುವ ‘ಆಪರೇಷನ್ ಟ್ರೂ ಪ್ರಾಮಿಸ್ 4’ ಮಿಲಿಟರಿ ಕಾರ್ಯಾಚರಣೆಯ 83ನೇ ಅಲೆಯ ಭಾಗವಾಗಿ ಈ ಕ್ಷಿಪಣಿಗಳನ್ನು ಉಡಾವಣೆ ಮಾಡಲಾಗಿದೆ.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಐಆರ್‌ಜಿಸಿ, ಇತ್ತೀಚಿನ ದಾಳಿಯಲ್ಲಿ ಅಮೆರಿಕ ಮತ್ತು ಇಸ್ರೇಲ್‌ನ ಪ್ರಮುಖ ಸೇನಾ ನೆಲೆಗಳು ಹಾಗೂ ಮೂಲಸೌಕರ್ಯಗಳನ್ನು ಗುರಿಯಾಗಿಸಲಾಗಿದೆ ಎಂದು ತಿಳಿಸಿದೆ. ಅಶ್ಡೋಡ್‌ನಲ್ಲಿರುವ ತೈಲ ಸಂಗ್ರಹಣಾ ಕೇಂದ್ರ ಮತ್ತು ಅಮೆರಿಕದ ಮಿಲಿಟರಿ ಮಾಹಿತಿ ವಿನಿಮಯ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ. ಇದರ ಜೊತೆಗೆ ಅಲ್-ಧಫ್ರಾ, ಅಲ್-ಉದೈರಿ, ಅಲಿ ಅಲ್-ಸಲೇಂ ವಾಯುನೆಲೆ ಮತ್ತು ಶೇಖ್ ಇಸಾ ನೆಲೆಗಳಲ್ಲಿರುವ ಅಮೆರಿಕನ್ ಸೇನಾ ನೆಲೆಗಳ ಮೇಲೂ ಸ್ಟ್ರೈಕ್ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ದೀರ್ಘ ಮತ್ತು ಮಧ್ಯಮ-ಶ್ರೇಣಿಯ ಕ್ಷಿಪಣಿಗಳು, ನಿಖರ-ದಾಳಿ ವ್ಯವಸ್ಥೆಗಳು ಮತ್ತು ಡ್ರೋನ್‌ಗಳ ಮೂಲಕ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ.
ಇದನ್ನು ಓದಿದ್ದೀರಾ? ಎಚ್ಚರಿಕೆ ನೀಡಿದ ಒಂದು ಗಂಟೆಯಲ್ಲೇ ಅಮೆರಿಕದ ‘ಯುಎಸ್‌ಎಸ್ ಅಬ್ರಹಾಂ ಲಿಂಕನ್’ ಯುದ್ಧನೌಕೆಯತ್ತ ಕ್ಷಿಪಣಿ ಹಾರಿಸಿದ ಇರಾನ್
ಭಾರತದ ಉಲ್ಲೇಖವೇಕೆ?
ಸಂಘರ್ಷದ ಸಮಯದಲ್ಲಿ ಉಭಯ ದೇಶಗಳ (ಭಾರತ-ಇರಾನ್) ನಡುವಿನ ಉತ್ತಮ ಬಾಂಧವ್ಯವನ್ನು ಎತ್ತಿ ತೋರಿಸುವ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ‘ಧನ್ಯವಾದ’ ಸಂದೇಶ ಮಹತ್ವ ಪಡೆದುಕೊಂಡಿದೆ.
ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಹಡಗುಗಳ ಮೇಲೆ ನಿರ್ಬಂಧ ಮುಂದುವರಿದಿದ್ದರೂ, ಆಯಕಟ್ಟಿನ ಹಾರ್ಮುಜ್ ಜಲಸಂಧಿಯ ಮೂಲಕ ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಅವಕಾಶ ನೀಡುವುದಾಗಿ ಇರಾನ್ ಇತ್ತೀಚೆಗಷ್ಟೇ ಖಚಿತಪಡಿಸಿತ್ತು. ಈ ಕುರಿತು ಮಾತನಾಡಿದ್ದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ, ಯುದ್ಧದಂತಹ ಪರಿಸ್ಥಿತಿಯ ನಡುವೆಯೂ ಹಡಗುಗಳನ್ನು ತಡೆಯದ ಬೆರಳೆಣಿಕೆಯಷ್ಟು ‘ಸ್ನೇಹಪರ’ ದೇಶಗಳಲ್ಲಿ ಭಾರತವೂ ಸೇರಿದೆ ಎಂದು ಸ್ಪಷ್ಟಪಡಿಸಿದ್ದರು.
ಇದರ ಜೊತೆಗೆ, ಭಾರತೀಯರು, ವಿಶೇಷವಾಗಿ ಕಾಶ್ಮೀರದ ಜನತೆ ಇರಾನ್‌ಗೆ ತೋರಿದ ಮಾನವೀಯ ಬೆಂಬಲವೂ ಈ ಸಂದೇಶದ ಹಿಂದಿನ ಮತ್ತೊಂದು ಪ್ರಮುಖ ಕಾರಣವಾಗಿದೆ.
ಇತ್ತೀಚಿನ ವಾರಗಳಲ್ಲಿ, ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ನಾಗರಿಕರು ಇರಾನ್‌ನಲ್ಲಿ ಸಂಘರ್ಷದಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡಲು ದೇಣಿಗೆ ಸಂಗ್ರಹ ಅಭಿಯಾನಗಳನ್ನು ಆಯೋಜಿಸಿದ್ದಾರೆ. ನಗದು ಮತ್ತು ಆಭರಣಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ನೆರವು ನೀಡಲಾಗಿದೆ.




