ಕೇರಳದಲ್ಲಿ ಇನ್ನೆರಡು ವಾರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪಾಲಕ್ಕಾಡ್‌ನಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಇದು ಪಾಲಕ್ಕಾಡ್‌ನಲ್ಲಿ ರಾಜಕೀಯ ಕಾವು ಹೆಚ್ಚಿಸಿದೆ.
24 ನೇ ವಾರ್ಡ್‌ನ ಕಾಂಗ್ರೆಸ್ ಪುರಸಭೆ ಸದಸ್ಯ ಪ್ರಶೋಭ್ ಸಿ. ವಲ್ಸನ್ ವಿರುದ್ಧ ದಲಿತ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಇದು ಎಲ್‌ಡಿಎಫ್ ಮತ್ತು ಎನ್‌ಡಿಎಗೆ ಚುನಾವಣಾ ಪ್ರಚಾರದ ಅಸ್ತ್ರವಾಗಿ ಮಾರ್ಪಟ್ಟಿದೆ.
ಇದನ್ನು ಓದಿದ್ದೀರಾ? ಅತ್ಯಾಚಾರ ಪ್ರಕರಣ | ಕೇರಳ ಶಾಸಕ ರಾಹುಲ್ ಮಾಂಕೂಟತ್ತಿಲ್‌ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು
ಈ ಸಂಬಂಧ ಮಹಿಳೆ ಮುಖ್ಯಮಂತ್ರಿ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಉದ್ಯೋಗದ ಭರವಸೆ ನೀಡಿ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಆರೋಪಿ ಕಾಂಗ್ರೆಸ್ ಕೌನ್ಸಿಲರ್ ಪ್ರಶೋಭ್ ಸಿ. ವಲ್ಸನ್ ಆರಂಭದಲ್ಲಿ ಉದ್ಯೋಗ ನೀಡುವ ನೆಪದಲ್ಲಿ ಮಹಿಳೆಯನ್ನು ಮನೆಗೆ ಕರೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅದಾದ ಬಳಿಕ ಪಟ್ಟಂಬಿಯಲ್ಲಿ ಉದ್ಯೋಗವಿದೆ ಎಂದು ಹೇಳಿ ಕಾರಿನಲ್ಲಿ ಕರೆದೊಯ್ದು, ಪ್ರಯಾಣದ ವೇಳೆ ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಯ ಬಳಿ ಮತ್ತು ಇತರೆಡೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಹೋಟೆಲ್‌ನಲ್ಲಿ ತಂಗುವಂತೆ ಒತ್ತಾಯಿಸಿ ಅಲ್ಲಿಯೂ ಅತ್ಯಾಚಾರ ಎಸಗಿದ್ದಾನೆ. ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಬೆದರಿಸಿದ್ದಾನೆ. ಗರ್ಭಪಾತ ಮಾಡಿಸಲೂ ಒತ್ತಾಯಿಸಿದ್ದಾನೆ. ಪದೇ ಪದೇ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ದೂರು ನೀಡಲು ಹಲವು ಅಧಿಕಾರಿಗಳನ್ನು ಸಂಪರ್ಕಿಸಿದ್ದೇನೆ. ಈಗ ಅಂತಿಮವಾಗಿ ಸಿಎಂ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡುತ್ತಿದ್ದೇನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ
ಈ ಆರೋಪಗಳ ಬಗ್ಗೆ ಕಾಂಗ್ರೆಸ್ ಪುರಸಭೆ ಸದಸ್ಯ ಪ್ರಶೋಭ್ ಸಿ. ವಲ್ಸನ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಗಾಗಲೇ ಹಾಲಿ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳಿವೆ. ಇದೀಗ ಕಾಂಗ್ರೆಸ್ ಕೌನ್ಸಿಲರ್ ವಿರುದ್ಧವೂ ಆರೋಪ ಕೇಳಿಬಂದಿದೆ. ಈ ಸತತ ವಿವಾದಗಳು ಪಾಲಕ್ಕಾಡ್‌ನಲ್ಲಿ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.
ಕಾಂಗ್ರೆಸ್ ವಿರುದ್ಧ ಬಿಜೆಪಿ, ಸಿಪಿಐಎಂ ವಾಗ್ದಾಳಿ
ಚುನಾವಣೆಯ ನಡುವೆ ಈ ಬೆಳವಣಿಗೆಯು ರಾಜಕೀಯವಾಗಿ ತೀವ್ರ ಚರ್ಚೆಗೆ ಒಳಗಾಗುತ್ತಿದೆ. ಬಿಜೆಪಿ ಮತ್ತು ಸಿಪಿಐಎಂ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಯುಡಿಎಫ್, ಎಲ್‌ಡಿಎಫ್ ಮತ್ತು ಎನ್‌ಡಿಎ ಮೂರು ಕೂಡಾ ಗೆಲುವಿನತ್ತ ದೃಷ್ಟಿ ಹಾಯಿಸಿರುವ ಕ್ಷೇತ್ರ ಪಾಲಕ್ಕಾಡ್. ಇದೀಗ ಕಾಂಗ್ರೆಸ್ ನಾಯಕರುಗಳ ವಿರುದ್ಧದ ಆರೋಪಗಳು ಇತರೆ ಪಕ್ಷಗಳಿಗೆ ಚುನಾವಣಾ ಪ್ರಚಾರದ ಅಸ್ತ್ರವಾಗಿದೆ. ಪ್ರಸ್ತುತ ಯುಡಿಎಫ್ ತೆಕ್ಕೆಯಲ್ಲಿರುವ ಕ್ಷೇತ್ರ ಪಾಲಕ್ಕಾಡ್. ಆದರೆ ಹಾಲಿ ಶಾಸಕರ ವಿರುದ್ಧದ ಆರೋಪ, ಕೌನ್ಸಿಲರ್ ವಿರುದ್ಧದ ಆರೋಪಗಳು ಯುಡಿಎಫ್‌ಗೆ ಹಿನ್ನಡೆ ತರುವ ಸಾಧ್ಯತೆಯಿದೆ.
ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್ ತಕ್ಷಣ ಪೊಲೀಸ್ ಕ್ರಮ ಕೈಗೊಳ್ಳಬೇಕು, ಆರೋಪಿಯನ್ನು ಬಂಧಿಸುವಲ್ಲಿ ವಿಳಂಬವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನೊಂದೆಡೆ ಸಿಪಿಐಎಂ ನಾಯಕರು ಈ ಪ್ರಕರಣವನ್ನು ಕಾಂಗ್ರೆಸ್ ವಿರುದ್ಧದ ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಅದೂ ರಾಹುಲ್ ಮಾಂಕೂಟತ್ತಿಲ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವವರು ಪ್ರಶೋಭ್. ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕತ್ವವನ್ನು ಸಿಪಿಐಎಂ ಟೀಕಿಸುತ್ತಿದೆ.




