“ಭಾರತದೊಳಗೆ ಶಿಕ್ಷಣವು ಖಾಸಗೀಕರಣದ ಕಡೆ ಹೆಚ್ಚು ಮುಖ ಮಾಡುತ್ತಿದೆ. ಶಿಕ್ಷಣ, ಆರೋಗ್ಯ ಇವೆಲ್ಲವೂ ಸೇವಾಕ್ಷೇತ್ರ ಎಂದು ಭಾವಿಸಿದ್ದೆವು. ಇದೀಗ ಸೇವಾ ಕ್ಷೇತ್ರಗಳೆಲ್ಲವೂ ಉದ್ಯಮ ಕ್ಷೇತ್ರಗಳಾಗಿರುವ ಕಾಲದಲ್ಲಿದ್ದೇವೆ’ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
ಶುಕ್ರವಾರ (ಮಾ.27) ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಅವರು ರಚಿಸಿರುವ ‘ಉನ್ನತ ಶಿಕ್ಷಣ: ಒಳಗೂ ಹೊರಗೂ(ನವ ಉದಾರಿಕರಣದ ಭಾರತ)’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಕೃತಿಯು ಕೊಠಾರಿ ಆಯೋಗದ ಉಲ್ಲೇಖಗಳಿಂದ ಹಿಡಿದು ಇತ್ತೀಚಿನ ಅನೇಕ ವಿಷಯಗಳನ್ನು ಒಳಗೊಂಡಿದೆ. ವಿಶ್ವವಿದ್ಯಾನಿಲಯಗಳಲ್ಲಿ ವೈಜ್ಞಾನಿಕತೆ, ವೈಚಾರಿಕತೆಯನ್ನು ಬೆಳೆಸಬೇಕು ಎನ್ನುವ ಅಂಶವನ್ನು ಹೇಳುತ್ತದೆ’ ಎಂದರು.
‘ಈ ಕೃತಿಯು ಗಂಭೀರವಾದ ವಿಚಾರಗಳನ್ನು ಹೇಳುತ್ತದೆ. ಜೊತೆಗೆ ಆಳವಾದ ಅಧ್ಯಯನಶೀಲವಾದದ್ದು. ಇದು ಶಿಕ್ಷಣ ಕ್ಷೇತ್ರಕ್ಕೆ, ಅದರಲ್ಲೂ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಕನ್ನಡಿಯು ಹೌದು, ಮುನ್ನುಡಿಯು ಹೌದು’ ಎಂದು ಅಭಿಮತ ವ್ಯಕ್ತಪಡಿಸಿದರು.
‘ಉದಾರೀಕರಣ, ಖಾಸಗೀಕರಣ, ಜಾಗತೀಕರಣದ ನಂತರ ಶಿಕ್ಷಣ ಏನಾಗಿದೆ ಎಂದು ಯೋಚಿಸಿದರೆ, ಉನ್ನತ ಶಿಕ್ಷಣದಲ್ಲಿ ಬಿಜಿನೆಸ್ ಮ್ಯಾನೇಜ್ಮೆಂಟ್ ಓದುತ್ತಿರುವಂತವರ ಸಂಖ್ಯೆ ಹೆಚ್ಚಾಗಿದೆ. ಕೆಲವರು ಆರ್ಕಿಟೆಕ್ಚರ್ ಓದುತ್ತಾರೆ, ಇನ್ನು ಕೆಲವರು ಹೋಟೆಲ್ ಮ್ಯಾನೇಜ್ಮೆಂಟ್ ಓದುತ್ತಾರೆ. ಏಳೆಂಟು ವರ್ಷಗಳಿಂದ ನಡೆದ ಸಮೀಕ್ಷೆಯ ವರದಿಯಂತೆ ಮಾನವಿಕ ವಿಷಯಗಳನ್ನು ತೆಗೆದುಕೊಳ್ಳುವವರು ವಿವಿಗಳಲ್ಲಿ ಶೇ.5 ರಷ್ಟು ಮಾತ್ರ. ಇದು ಬಹಳ ದೊಡ್ಡ ಅಪಾಯಕಾರಿ ಸನ್ನಿವೇಶ’ ಎಂದು ಆತಂಕ ವ್ಯಕ್ತಪಡಿಸಿದರು.
‘ಬಂಡವಾಳಶಾಹಿಗಳು ಆರ್ಥಿಕ ನೀತಿಗಳನ್ನು, ಶಿಕ್ಷಣ ನೀತಿಗಳನ್ನು ನಿರ್ಧರಿಸುವಂತಹ ಸನ್ನಿವೇಶದಲ್ಲಿದ್ದೇವೆ. ಇಲ್ಲಿಯವರೆಗೂ ಜ್ಞಾನಮುಖಿ ಶಿಕ್ಷಣ, ಉದ್ಯೋಗಮುಖಿ ಎಂಬ ಸರಳ ಪ್ರಶ್ನೆಗಳಿಗೆ ನಮ್ಮ ಶಿಕ್ಷಣ ನೀತಿಗಳು ಉತ್ತರ ಕಂಡುಕೊಂಡಿಲ್ಲ. ಸರ್ಕಾರಗಳೇ ಸರಿಯಾದ ಶಿಕ್ಷಣ ನೀತಿಯನ್ನು ರೂಪಿಸಿದ ಮೇಲೆ ಆ ಶಿಕ್ಷಣ ನೀತಿಗೆ ಅನುಗುಣವಾಗಿ ಎಲ್ಲ ಶಿಕ್ಷಣ ಸಂಸ್ಥೆಗಳು ಅನುಸರಿಸುವಂತಾಗಬೇಕು’ ಎಂದರು.

‘ಮಾನವಿಕ ವಿಷಯಗಳನ್ನು ಕಡ್ಡಾಯವಾಗಿ ಓದುವಂತೆ ಮಾಡುವ ಪಠ್ಯಕ್ರಮವನ್ನು ರೂಪಿಸುವ ಅಗತ್ಯವಿದೆ. ಒಬ್ಬ ವೈದ್ಯನಿಗೆ, ಇಂಜಿನಿಯರ್‌ಗೆ ಅಥವಾ ಯಾವುದೋ ಐಟಿ ಉದ್ಯೋಗಿಗೆ ಒಂದಷ್ಟು ದೇಶದ ಇತಿಹಾಸ ಗೊತ್ತಿಲ್ಲದಿದ್ದರೆ, ಸಮಾಜದ ಚಲನೆ, ಸಾಮಾಜಿಕ ಸಂರಚನೆಯ ವಿಷಯಗಳ ಅರಿವಿಲ್ಲದಿದ್ದರೆ, ಅವನು ಎಂತಹ ಪ್ರಜೆ ಆಗಬಹುದು, ಅವನಿಗೆ ದೇಶದ ದೃಷ್ಟಿಕೋನ ಹೇಗಿರಬಹುದು? ಹಾಗಾಗಿ ಮಾನವಿಕ ವಿಷಯಗಳನ್ನು ಬಿಟ್ಟುಕೊಡದೇ ಇರುವಂತ ಪಠ್ಯಕ್ರಮವನ್ನು ರೂಪಿಸುವ ಅಗತ್ಯವಿದೆ’ ಎಂದರು.
ಕಾರ್ಯಕ್ರಮದಲ್ಲಿ ಲೇಖಕ ಶ್ರೀಪಾದ್ ಭಟ್, ಚಿಂತಕ ಎ.ನಾರಾಯಣ, ಹಿರಿಯ ಹೋರಾಟಗಾರರಾದ ಮಾವಳ್ಳಿ ಶಂಕರ್, ಡಾ.ಮನಮೋಹನ್ ಸಿಂಗ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಮೇಶ್, ಪ್ರಾಧ್ಯಾಪಕಿ ನೇತ್ರಾವತಿ ಕೆ.ವಿ., ಹೋರಾಟಗಾರ ರವಿಕುಮಾರ್ ಬಾಗಿ, ಪ್ರವೀಣ್ ತೆಲ್ಲಪಲ್ಲಿ ಇದ್ದರು.




