ಪ್ರಧಾನಿ ನರೇಂದ್ರ ಮೋದಿ ಅವರ ‘ದಿಮಾಗಿ ನಕ್ಸಲರು’ ಹೇಳಿಕೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ತಿರುಗೇಟು ನೀಡಿದ್ದಾರೆ. ‘ಪ್ರಧಾನಿಯ ಸುಳ್ಳುಗಳನ್ನು ಯೋಧರು ನಂಬಲಿಲ್ಲ’ ಎಂದು ಹೇಳಿರುವ ಅವರು, ದೇಶವಿರೋಧಿ ಯಾರು ಮತ್ತು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿರುವವರು ಯಾರು ಎಂಬುದರ ಕುರಿತು ತಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರುವಂತೆ ಮತ್ತೊಮ್ಮೆ ಸವಾಲು ಹಾಕಿದ್ದಾರೆ.
ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಯೋಧರನ್ನು ಉದ್ದೇಶಿಸಿ ‘ಎಕ್ಸ್’ನಲ್ಲಿ ಬರೆದಿರುವ ರಾಹುಲ್, ‘ಪ್ರಿಯ ಸಿಆರ್‌ಪಿಎಫ್ ಯೋಧರೇ, ನಿಮ್ಮ ಮುಖಭಾವಗಳೇ ಎಲ್ಲವನ್ನೂ ಹೇಳಿವೆ. ಪ್ರಧಾನಿಯ ಸುಳ್ಳುಗಳನ್ನು ನೀವು ನಂಬಿಲ್ಲ’ ಎಂದು ಹೇಳಿದ್ದಾರೆ.
‘ಅವರು ನಮ್ಮನ್ನು ನಕ್ಸಲರು ಎಂದು ಕರೆದಿದ್ದಾರೆ. ನನ್ನ ಸವಾಲು ಈಗಲೂ ಹಾಗೆಯೇ ಇದೆ. ದೇಶವಿರೋಧಿ ಯಾರು, ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿರುವವರು ಯಾರು ಎಂಬುದರ ಕುರಿತು ಅವರು ನನ್ನೊಂದಿಗೆ ಚರ್ಚಿಸಲಿ. ಯಾವುದೇ ಸಮಯ, ಯಾವುದೇ ಸ್ಥಳವಾದರೂ ಸರಿ. ಆ ಚರ್ಚೆಯ ಬಳಿಕ ಒಬ್ಬನೇ ಒಬ್ಬ ಯೋಧನ ಎದುರು ನಿಲ್ಲುವ ಧೈರ್ಯವೂ ಪ್ರಧಾನಿಗೆ ಇರುವುದಿಲ್ಲ ಎಂಬುದು ನನ್ನ ಗ್ಯಾರಂಟಿ’ ಎಂದು ರಾಹುಲ್ ಹೇಳಿದ್ದಾರೆ.
ಛತ್ತೀಸ್‌ಗಢದ ಬಸ್ತರ್‌ನ ಸಿಆರ್‌ಪಿಎಫ್ ಶಿಬಿರದಲ್ಲಿ ಭಾನುವಾರ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ ಮೋದಿ, ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ‘ದಿಮಾಗಿ ನಕ್ಸಲರು’ ಎಂಬ ಪದ ಬಳಸಿದ್ದರು. ಶಸ್ತ್ರಸಜ್ಜಿತ ಮಾವೋವಾದಿಗಳನ್ನು ನಿರ್ಮೂಲನೆ ಮಾಡಲಾಗಿದ್ದರೂ, ‘ದಿಮಾಗಿ ನಕ್ಸಲರು’ ಹಲವು ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳಲ್ಲಿ ನುಸುಳಿದ್ದು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
‘ಇಂತಹವರನ್ನು ಗುರುತಿಸಿ, ಸೋಲಿಸಿ, ದೇಶವನ್ನು ಸುರಕ್ಷಿತವಾಗಿಡಬೇಕು’ ಎಂದು ಮೋದಿ ಹೇಳಿದ್ದರು. ಈ ಹೇಳಿಕೆಯ ಮರುದಿನವೇ ರಾಹುಲ್ ಬಹಿರಂಗ ಚರ್ಚೆಯ ಸವಾಲನ್ನು ಪುನರುಚ್ಚರಿಸಿದ್ದಾರೆ.
ಮೋದಿ ಹೇಳಿಕೆಯನ್ನು ಕಾಂಗ್ರೆಸ್ ಕೂಡ ತೀವ್ರವಾಗಿ ಖಂಡಿಸಿದೆ. ಪ್ರಧಾನಿ ತೀವ್ರ ಹತಾಶೆ ಹಾಗೂ ತಳಮಳಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿರುವ ಪಕ್ಷ, ಅವರ ‘ಜೋಳಿಗೆ ಎತ್ತಿಕೊಂಡು ಹೊರಡುವ ಸಮಯ’ ವೇಗವಾಗಿ ಸಮೀಪಿಸುತ್ತಿದೆ ಎಂದು ವ್ಯಂಗ್ಯವಾಡಿದೆ.
ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿಯೂ ಮೋದಿ ‘ದಿಮಾಗಿ ನಕ್ಸಲರು’ ಅಂದರೆ ನಕ್ಸಲ್ ಮನಸ್ಥಿತಿಯವರು ಎಂಬ ಪದ ಬಳಸಿದ್ದರು. ಶಸ್ತ್ರಸಜ್ಜಿತ ನಕ್ಸಲಿಸಂ ಅನ್ನು ತೊಡೆದುಹಾಕುವಲ್ಲಿ ದೇಶ ಯಶಸ್ವಿಯಾಗಿದ್ದರೂ, ಅದರ ಸೈದ್ಧಾಂತಿಕ ಬೆಂಬಲಿಗರು ಹಿಂಸೆಯನ್ನು ಉತ್ತೇಜಿಸಲು ಅವಕಾಶ ಹುಡುಕುತ್ತಿದ್ದಾರೆ ಎಂದು ಹೇಳಿದ್ದರು. ಪ್ರಜಾಪ್ರಭುತ್ವದ ಚೌಕಟ್ಟಿನೊಳಗಿನ ಭಿನ್ನಮತಕ್ಕೆ ಉದ್ದೇಶಪೂರ್ವಕವಾಗಿ ಹಣೆಪಟ್ಟಿ ಹಚ್ಚಿ, ಅದರ ನ್ಯಾಯಸಮ್ಮತತೆಯನ್ನು ಪ್ರಶ್ನಿಸಲು ಪ್ರಧಾನಿ ಇಂತಹ ಪದಗಳನ್ನು ಬಳಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.
ತಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರುವಂತೆ ಮೋದಿ ಅವರಿಗೆ ರಾಹುಲ್ ಪದೇಪದೇ ಸವಾಲು ಹಾಕುತ್ತಿದ್ದಾರೆ. ಪ್ರಧಾನಿ ‘ದೇಶದ್ರೋಹಿ’ ಎಂಬುದನ್ನು ಐದೇ ನಿಮಿಷಗಳಲ್ಲಿ ಸಾಬೀತುಪಡಿಸುವುದಾಗಿ ಅವರು ಈ ಹಿಂದೆಯೂ ಹೇಳಿದ್ದರು. ಆದರೆ, ರಾಹುಲ್ ಅವರ ಸವಾಲನ್ನು ಲೇವಡಿ ಮಾಡಿರುವ ಬಿಜೆಪಿ ನಾಯಕರು, ಅವರೇ ಸಂಸತ್ತಿನ ಚರ್ಚೆಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಚರ್ಚೆಗೆ ಸ್ಥಳವನ್ನು ಆಯ್ಕೆ ಮಾಡುವಂತೆ ರಾಹುಲ್ ಪ್ರಧಾನಿಗೆ ಹೇಳುತ್ತಿದ್ದಾರೆ. ಆದರೆ, ಅದಕ್ಕಾಗಿ ಸಂಸತ್ತು ಎಂಬ ವೇದಿಕೆ ಈಗಾಗಲೇ ಇದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದರು. ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಂಭೀರತೆ ಮತ್ತು ಜವಾಬ್ದಾರಿ ತೋರಬೇಕು ಎಂದೂ ಅವರು ಆಗ್ರಹಿಸಿದ್ದರು.




