ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯ ಛಲವಾದಿ ಸಮುದಾಯದ ಸಾಮಾಜಿಕ ಅಭಿವೃದ್ದಿಗೆ ಒನಕೆ ಓಬವ್ವ ಹೆಸರಿನಲ್ಲಿ ನಿಗಮ ಸ್ಥಾಪಿಸಿ ಸಹಕಾರ ನೀಡಬೇಕು ಎಂದು ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಟಿ.ಈರಣ್ಣ ಆಗ್ರಹಿಸಿದರು.
ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ ಹಾಗೂ ಛಲವಾದಿ ಮಹಾಸಭಾ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪರಿಶಿಷ್ಟ ಜಾತಿಯ ಅಭಿವೃದ್ದಿಗೆ ಸರ್ಕಾರ ಜಾತಿ ಅನುಗುಣವಾಗಿ ಮೀಸಲಾತಿ ಒದಗಿಸಬೇಕಿದೆ. ನಮ್ಮ ಸಮುದಾಯಕ್ಕೆ ಇನ್ನೂ ಪರಿಪೂರ್ಣ ಮೀಸಲಾತಿ ದೊರಕಿಲ್ಲ. ಈ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರ್ಕಾರದಲ್ಲಿನ ಸಮುದಾಯದ ಸಚಿವರು, ಶಾಸಕರು ನಿಗಮ ಸ್ಥಾಪನೆಗೆ ಒತ್ತಡ ಹೇರಬೇಕು ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್ ಉಪನ್ಯಾಸ ನೀಡಿ ಕೆಚ್ಚೆದೆಯ ಧೀರ ಮಹಿಳೆ ಒನಕೆ ಓಬವ್ವ ಶತ್ರುಗಳಿಂದ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿ ಇಂದಿಗೂ ಎಲ್ಲರ ಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ವೀರ ಮಹಿಳೆಯ ಧೈರ್ಯ ಇಂದಿನ ಹೆಣ್ಣು ಮಕ್ಕಳಲ್ಲಿ ಮೂಡಬೇಕು. ಈ ನಿಟ್ಟಿನಲ್ಲಿ ಒನಕೆ ಓಬವ್ವಳ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಛಲವಾದಿ ಸಮುದಾಯದ ಅಭಿವೃದ್ದಿಗೆ ಶ್ರಮಿಸಿದ ಗಣ್ಯರಾದ ಕೆ.ಸಿ.ರವೀಶ್, ಟಿ.ಜಿ.ಸಚಿನ್, ಎಚ್.ಕೆ.ಮಧು, ಬಿ.ಆರ್.ಗೋಪಾಲ್, ಮುನಿರಾಜು, ಆನಂದ್, ಲೋಕೇಶ್, ಗಂಗಾಧರಯ್ಯ, ಬಸವರಾಜು, ಮಂಜುಳಾ ವೆಂಕಟೇಶ್, ಮಂಜುನಾಥ್ ಹಾಗೂ ಶಿವಣ್ಣ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಛಲವಾದಿ ಮಹಾಸಭಾ ವತಿಯಿಂದ ತಾಲ್ಲೂಕು ಕಚೇರಿ ಮುಂದಿನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಗ್ರೇಡ್ 2 ಶಶಿಕಲಾ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಪ್ರಸಾದ್, ಯಲ್ಲಪ್ಪ, ಛಲವಾದಿ ಮಹಾಸಭಾದ ಮುಖಂಡರಾದ ಕಿಟ್ಟದಕುಪ್ಪೆ ನಾಗರಾಜು, ರವೀಶ್, ಸುನಿಲ್, ಚಂದು, ಯತೀಶ್, ವೆಂಕಟೇಶ್, ನಟರಾಜು, ಗಿರಿಜಮ್ಮ ಇತರರು ಇದ್ದರು.




