ದೇಶದಲ್ಲಿ ಬಿಸಿಲಿನ ಬೇಗೆ ತೀವ್ರವಾಗಿ ಏರಿಕೆಯಾಗುತ್ತಿದೆ. ಜನರಿಗೆ ಹವಾಮಾನ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದೆ. ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ. ಈ ನಡುವೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, “ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜೇಬಿನಲ್ಲಿ ‘ಈರುಳ್ಳಿ’ ಇಟ್ಟುಕೊಳ್ಳಿ” ಎಂದು ಹೇಳಿದ್ದಾರೆ. ಈ ಮೂಲಕ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
ಸಿಂಧಿಯಾ ತಮ್ಮ ಗುಣ ಕ್ಷೇತ್ರದ ಪಿಚೋರೆ-ಶಿವಪುರಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಬಿಸಿಲು ಹೆಚ್ಚಾಗುತ್ತಿರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಸೂಚಿಸಿದ್ದಾರೆ. ಹಾಗೆಯೇ, “ನಮ್ಮ ಹಿರಿಯರು ಹೇಳುವಂತೆ, ಬಿಸಿಲು ತಟ್ಟಬಾರದೆಂದರೆ ಜೇಬಿನಲ್ಲಿ ಒಂದು ಸಣ್ಣ ಈರುಳ್ಳಿ ಇಟ್ಟುಕೊಳ್ಳಿ” ಎಂದು ಸಲಹೆ ನೀಡಿದ್ದಾರೆ. ಅಷ್ಟು ಮಾತ್ರವಲ್ಲದೆ, “ನಾನು ನನ್ನ ಕಾರಿನಲ್ಲಿ ಎಸಿ ಬಳಸುವುದಿಲ್ಲ, ಎಸಿ ಇರುವಲ್ಲಿ ನಾನು ಕೂರುವುದಿಲ್ಲ. ನಾನು ನನ್ನ ಜೇಬಿನಲ್ಲಿ ಈರುಳ್ಳಿ ಇಟ್ಟುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ವಿಶೇಷ | ಹರಿಯಾಣ ಫಲಿತಾಂಶದಿಂದ ರಾಜ್ಯ ಕಾಂಗ್ರೆಸ್ ಪಾಠ ಕಲಿಯುತ್ತದೆಯೇ?
ವಾಸ್ತವದಲ್ಲಿ ವಿಜ್ಞಾನದ ಪ್ರಕಾರ, ಜೇಬಿನಲ್ಲಿ ಈರುಳ್ಳಿ ಇಟ್ಟುಕೊಳ್ಳುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಅಥವಾ ಹೀಟ್ ಸ್ಟ್ರೋಕ್ ತಡೆಯಬಹುದು ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಬಿಸಿಲಿನಿಂದ ಬಚಾವಾಗಲು ಈರುಳ್ಳಿಯನ್ನು ಆಹಾರದಲ್ಲಿ ಬಳಸುವುದು ಉತ್ತಮ ಎಂಬುದು ತಜ್ಞರ ಸಲಹೆ. ಸಾಕಷ್ಟು ನೀರು ಕುಡಿಯುವುದು, ಸಡಿಲವಾದ ಬಟ್ಟೆ ಧರಿಸಿ ಎಂದು ತಜ್ಞರು ಹೇಳುತ್ತಾರೆ.
ಜೇಬಿನಲ್ಲಿ ಈರುಳ್ಳಿ ಇಟ್ಟುಕೊಂಡರೆ ಕಳ್ಳರ ಭಯ!
ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಜ್ಯೋತಿರಾದಿತ್ಯ ಸಿಂಧಿಯಾ ಅವರ ಕಾಲೆಳೆಯುತ್ತಿದ್ದಾರೆ. ಅನೇಕರು, “ಇದು ಕೇವಲ ಮೂಢನಂಬಿಕೆ, ಆಧುನಿಕ ಕಾಲದಲ್ಲಿ ಇಂತಹ ಮಾತುಗಳು ಹಾಸ್ಯಾಸ್ಪದ” ಎಂದು ಟೀಕಿಸಿದ್ದಾರೆ. ಇನ್ನು ಕೆಲವರು, “ಈಗಾಗಲೇ ಈರುಳ್ಳಿ ಬೆಲೆ ಏರಿದೆ, ಹೀಗಿರುವಾಗ ಜೇಬಿನಲ್ಲಿ ಈರುಳ್ಳಿ ಇಟ್ಟುಕೊಂಡರೆ ಕಳ್ಳರ ಭಯ ಇರುವುದಿಲ್ಲವೇ?” ಎಂದು ವ್ಯಂಗ್ಯವಾಡಿದ್ದಾರೆ. ಕೆಲವು ನೆಟ್ಟಿಗರು, “ಸದಾ ಅಪ್‌ಡೇಟ್ ಆಗಿರುವ ಮತ್ತು ರಾಜಮನೆತನದ ಹಿನ್ನೆಲೆಯುಳ್ಳ ಸಿಂಧಿಯಾ ಅವರಿಂದ ಇಂತಹ ನಾಟಿ ಮದ್ದಿನ ಸಲಹೆ ನಿರೀಕ್ಷಿಸಿರಲಿಲ್ಲ” ಎಂದು ಸಿಂಧಿಯಾ ಕಾಲೆಳೆದಿದ್ದಾರೆ. ಇನ್ನು ಕೆಲವರು ಅವೈಜ್ಞಾನಿಕ ವಿಚಾರಗಳಿಂದ ಜನರನ್ನು ದೂರ ಮಾಡಬೇಕಾದ ಸಚಿವರೇ ಜನರಿಗೆ ಅವೈಜ್ಞಾನಿಕ ರೀತಿಯನ್ನು ಪಾಲಿಸಲು ಹೇಳುವುದೇ? ಎಂದು ಪ್ರಶ್ನಿಸಿದ್ದಾರೆ.

“ನಾನು ಎಸಿ ಬಳಸುವುದಿಲ್ಲ” ಎಂಬ ಸಚಿವರ ಹೇಳಿಕೆಯೂ ಸದ್ಯ ಟ್ರೋಲ್ ಆಗುತ್ತಿದೆ. ಸಿಂಧಿಯಾ ಅವರು ಎಸಿ ಬಳಸುವುದಿಲ್ಲ ಎಂದು ಹೇಳಿದ ಬೆನ್ನಲ್ಲೇ, ಅವರು ಐಷಾರಾಮಿ ಕಾರುಗಳಲ್ಲಿ ಕುಳಿತಿರುವ, ಎಸಿ ಇರುವ ವಿಮಾನಗಳಲ್ಲಿ ಪ್ರಯಾಣಿಸುತ್ತಿರುವ ಮತ್ತು ಸುಸಜ್ಜಿತ ಕಚೇರಿಗಳಲ್ಲಿ ಇರುವ ಹಳೆಯ ಫೋಟೋಗಳನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ.
ಈ ಹಿಂದೆ ಲೋಕಸಭೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಉತ್ತರಿಸುವಾಗ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಹೇಳಿಕೆಯೂ ಮತ್ತೆ ವೈರಲ್ ಆಗುತ್ತಿದೆ. “ನಾನು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಸದ, ಅಂತಹ ಕುಟುಂಬದಿಂದ ಬಂದವಳು” ಎಂದು ನಿರ್ಮಲಾ ಹೇಳಿದ್ದರು. ಈರುಳ್ಳಿ ಬೆಲೆ ಏರಿಕೆ ನನಗೆ ಪರಿಣಾಮ ಬೀರುವುದಿಲ್ಲ ಎಂದಿದ್ದರು. ಆದ್ದರಿಂದ ಕೇಂದ್ರ ಸರ್ಕಾರಕ್ಕೂ ಈರುಳ್ಳಿಗೂ ಏನೋ ಅವಿನಾಭಾವ ಸಂಬಂಧವಿದೆ ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ.




