ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸ ಸೇರಿದಂತೆ ರಾಜ್ಯದ 10ಕ್ಕೂ ಹೆಚ್ಚು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ED) ಬುಧವಾರ ದಾಳಿ ನಡೆಸಿದೆ. ED ಸಂಸ್ಥೆಯ ಈ ಕ್ರಮವನ್ನು ಖಂಡಿಸಿ ತಿರುವನಂತಪುರಂನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಿಪಿಎಂ (CPM) ಕಾರ್ಯಕರ್ತರು, ED ಅಧಿಕಾರಿಗಳ ವಾಹನದ ಮೇಲೆ ಭೀಕರ ದಾಳಿ ನಡೆಸಿದ್ದಾರೆ ಎಂದು ANI ವರದಿ ಮಾಡಿದೆ.
ಕೊಚ್ಚಿನ್ ಮಿನರಲ್ಸ್ ಅಂಡ್ ರುಟೈಲ್ ಲಿಮಿಟೆಡ್ (CMRL) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ED ಈ ಕಾರ್ಯಾಚರಣೆ ಕೈಗೊಂಡಿದೆ. ತಿರುವನಂತಪುರಂನಲ್ಲಿರುವ ವಿಜಯನ್ ಅವರ ಬಾಡಿಗೆ ಮನೆ, ಕಣ್ಣೂರಿನ ನಿವಾಸ, CMRL ವ್ಯವಸ್ಥಾಪಕ ನಿರ್ದೇಶಕ ಶಶಿಧರನ್ ಕರ್ತಾ ಅವರ ನಿವಾಸ ಹಾಗೂ ಮಾಜಿ ಸಚಿವ ಮೊಹಮ್ಮದ್ ರಿಯಾಸ್ ಅವರ ಕೋಝಿಕ್ಕೋಡ್ ನಿವಾಸ ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ನಡೆದಿದೆ.
ED ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಪಿಣರಾಯಿ ವಿಜಯನ್, “ಕೇಂದ್ರದ ಬಿಜೆಪಿ ಸರ್ಕಾರ ದೇಶದಲ್ಲಿರುವ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ‘ಟಾರ್ಗೆಟ್ ಅಟ್ಯಾಕ್’ನ ಭಾಗವೇ ಈ ದಾಳಿ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ʼಇಂಡಿಯನ್ ಯೂತ್ ಕಾಕ್ರೋಚಸ್ʼ ಅಭಿಯಾನ ಆರಂಭಿಸಿದ ಯೂತ್ ಕಾಂಗ್ರೆಸ್!
ಕೇರಳ ಹೈಕೋರ್ಟ್ ಇತ್ತೀಚೆಗಷ್ಟೇ ಈ ಪ್ರಕರಣದಲ್ಲಿ ತನಿಖೆ ಮುಂದುವರಿಸಲು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿತ್ತು. ತನಿಖೆಗೆ ತಡೆ ನೀಡಬೇಕೆಂಬ ಕಂಪನಿಯ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ED ಅಧಿಕಾರಿಗಳು ಈ ಆಕ್ರಮಣಕಾರಿ ಹೆಜ್ಜೆ ಇಟ್ಟಿದ್ದಾರೆ.




