ಕರ್ನಾಟಕವು ತಮಿಳುನಾಡಿಗೆ ನಿಗದಿಪಡಿಸಲಾಗಿರುವ ವಾರ್ಷಿಕ 177.25 TMC ಕಾವೇರಿ ನೀರನ್ನು ಬಿಲಿಗುಂಡ್ಲು ಮಾಪನದ ಮೂಲಕ ಬಿಡುಗಡೆ ಮಾಡಲೇಬೇಕು. ಈ ನೀರನ್ನು ಸಮರ್ಪಕವಾಗಿ ಹರಿಸುವ ಜವಾಬ್ದಾರಿಗೆ ಧಕ್ಕೆಯಾಗದಂತೆ ಕರ್ನಾಟಕವು ಯೋಜನೆಯನ್ನು ಮುಂದುವರಿಸಬಹುದು.
ಕರ್ನಾಟಕ ಸರ್ಕಾರದ ಪ್ರಸ್ತಾವಿತ ಮೇಕೆದಾಟು ಯೋಜನೆಯನ್ನು ತಡೆಯಲು ಶತಪ್ರಯತ್ನ ಮಾಡುತ್ತಿರುವ ತಮಿಳುನಾಡಿಗೆ ಭಾರೀ ಹಿನ್ನಡೆಯಾಗಿದೆ. ಆದರೂ, ಯೋಜನೆಯನ್ನು ಆರಂಭದಲ್ಲೇ ಮೊಟಕುಗೊಳಿಸುವ ಪ್ರಯತ್ನಕ್ಕೆ ಅಲ್ಲಿನ ನೂತನ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಕೂಡ ಕೈಹಾಕಿದ್ದಾರೆ. ಸುಪ್ರೀಂಕೋರ್ಟ್‌ನ ಸ್ಪಷ್ಟ ನಿರ್ದೇಶನಗಳಿದ್ದರೂ ತಮಿಳುನಾಡು ಆತುರ ತೋರುತ್ತಿರುವುದು ಮತ್ತೆ ಸ್ಪಷ್ಟವಾಗಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಕಾವೇರಿ ಮತ್ತು ಅರ್ಕಾವತಿ ನದಿಗಳು ಸಂಗಮಿಸುವ ಕಣಿವೆ ಪ್ರದೇಶವಾದ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸಬೇಕೆಂಬ ಕರ್ನಾಟಕ ಸರ್ಕಾರದ ನಿಲುವಿಗೆ ಮೊದಲಿನಿಂದಲೂ ತಮಿಳುನಾಡು ತಕರಾರು ತೆಗೆಯುತ್ತಾ ಬಂದಿದೆ. “ಚೇಳು ಕಡಿದಿಲ್ಲ, ವಿಷವೂ ಏರಿಲ್ಲ. ಆದರೂ ಚೇಳು ಕಡಿದಿದೆ ಎನ್ನುತ್ತಿದ್ದರು” ಎಂಬಂತೆ ತಮಿಳುನಾಡು ವರ್ತಿಸಲು ಶುರು ಮಾಡಿದೆ. ಯೋಜನೆಯ ರೂಪುರೇಷೆ ಕುರಿತ ಚರ್ಚೆಗೂ ತಮಿಳುನಾಡು ಸಿದ್ಧವಿರುವಂತೆ ಕಾಣುತ್ತಿಲ್ಲ.
ಕರ್ನಾಟಕ ಸರ್ಕಾರವು ಸುಮಾರು ₹14,000 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜಿಸಿರುವ ಪ್ರಸ್ತಾವಿತ ಮೇಕೆದಾಟು ಜಲಾಶಯವನ್ನು ಪ್ರಶ್ನಿಸಿ, ಸಲ್ಲಿಕೆಯಾಗಿದ್ದ ಅರ್ಜಿಯನ್ನು 2025ರ ನವೆಂಬರ್‌ನಲ್ಲೇ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಇದರ ನಡುವೆ 2025ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ತಮಿಳುನಾಡು ಮತ್ತೆ ಕೋರ್ಟ್ ಮೆಟ್ಟಿಲೇರಿತ್ತು. ಮಂಗಳವಾರ, ಈ ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಜಸ್ಟಿಸ್ ಜೋಯ್ಮಲ್ಯ ಬಾಗ್ಚಿ ಹಾಗೂ ಜಸ್ಟಿಸ್ ವಿಫುಲ್ ಎಂ. ಪಾಂಚೋಲಿ ಅವರಿದ್ದ ತ್ರಿಸದಸ್ಯ ಪೀಠ ಮರು ಪರಿಶೀಲನಾ ಅರ್ಜಿಯನ್ನೂ ವಜಾಗೊಳಿಸಿದೆ. “ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಯಂತಹ ತಜ್ಞರ ಸಮಿತಿಗಳು ಯೋಜನೆಯ ವರದಿಯನ್ನು ಪರಿಶೀಲಿಸುತ್ತಿರುವಾಗ, ನ್ಯಾಯಾಲಯವು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕರ್ನಾಟಕ ಸರ್ಕಾರವು ಪ್ರಸ್ತುತ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುವ ಮತ್ತು ತಾಂತ್ರಿಕ ಪರಿಶೀಲನೆಯ ಪ್ರಾಥಮಿಕ ಹಂತದಲ್ಲಿದೆಯಷ್ಟೇ. ಯೋಜನೆಗೆ ಇನ್ನೂ ಅಂತಿಮ ಅನುಮೋದನೆ ಸಿಕ್ಕಿಲ್ಲ. ಆದ್ದರಿಂದ ಯೋಜನೆಗೆ ಈಗಲೇ ತಡೆ ನೀಡಲು ಸಾಧ್ಯವಿಲ್ಲ ಎಂಬುದು ಕೋರ್ಟ್‌ನ ಅಭಿಪ್ರಾಯ.
ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿರುವಂತೆ, ಕರ್ನಾಟಕವು ತಮಿಳುನಾಡಿಗೆ ನಿಗದಿಪಡಿಸಲಾಗಿರುವ ವಾರ್ಷಿಕ 177.25 TMC ಕಾವೇರಿ ನೀರನ್ನು ಬಿಲಿಗುಂಡ್ಲು ಮಾಪನದ ಮೂಲಕ ಬಿಡುಗಡೆ ಮಾಡಲೇಬೇಕು. ಈ ನೀರನ್ನು ಸಮರ್ಪಕವಾಗಿ ಹರಿಸುವ ಜವಾಬ್ದಾರಿಗೆ ಧಕ್ಕೆಯಾಗದಂತೆ ಕರ್ನಾಟಕವು ಯೋಜನೆಯನ್ನು ಮುಂದುವರಿಸಬಹುದು. ಮೇಕೆದಾಟು ಯೋಜನೆಯ ವರದಿಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಗಳಂತಹ ಉನ್ನತ ಮಟ್ಟದ ತಜ್ಞರ ಸಮಿತಿಗಳ ಮುಂದೆ ಮಂಡಿಸಬೇಕು.
ಕೇಂದ್ರ ಜಲ ಆಯೋಗ (CWC) ಅಥವಾ ಕರ್ನಾಟಕ ಸರ್ಕಾರವು ಈ ತಜ್ಞರ ಸಮಿತಿಗಳ ಪೂರ್ವಾನುಮತಿ ಇಲ್ಲದೆ ಯಾವುದೇ ಮುಂದಿನ ನಿರ್ಮಾಣ ಕಾಮಗಾರಿ ಹಂತಕ್ಕೆ ಹೋಗುವಂತಿಲ್ಲ. DPR ಪರಿಶೀಲನೆಯ ಹಂತ ಮುಗಿದ ನಂತರ ತಮಿಳುನಾಡಿಗೂ ಮತ್ತೊಂದು ಅವಕಾಶವನ್ನು ನ್ಯಾಯಾಲಯ ನೀಡಿದೆ. ಒಂದು ವೇಳೆ ಕಾವೇರಿ ಪ್ರಾಧಿಕಾರ (CWMA) ಅಥವಾ ಕೇಂದ್ರ ಜಲ ಆಯೋಗವು ಕರ್ನಾಟಕದ ವರದಿಗೆ (DPR) ಅಧಿಕೃತ ಒಪ್ಪಿಗೆ ನೀಡಿದರೆ, ಆ ನಿರ್ಧಾರವನ್ನು ಪ್ರಶ್ನಿಸಲು ಅಥವಾ ಅದರಿಂದ ತಮಗೆ ಅನ್ಯಾಯವಾಗುತ್ತಿದೆ ಎಂದು ಅನಿಸಿದರೆ ತಮಿಳುನಾಡು ಸರ್ಕಾರಕ್ಕೆ ಕಾನೂನುಬದ್ಧವಾಗಿ ನ್ಯಾಯಾಲಯದ ಮೊರೆ ಹೋಗಲು ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಕೋರ್ಟ್ ನಿರ್ದೇಶನ ನೀಡಿದೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್‌ಐಆರ್’
ಈ ಬೆಳವಣಿಗೆಗಳ ನಡುವೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ನಾವು ಕೇವಲ ಪ್ರಚಾರಕ್ಕಾಗಿ ಅಥವಾ ರಾಜಕೀಯ ಗಿಮಿಕ್ಗಾಗಿ ಹೋಗಿ ಮೇಕೆದಾಟು ಜಾಗದಲ್ಲಿ ಗುದ್ದಲಿ ಪೂಜೆ ಮಾಡುವುದಿಲ್ಲ. ಯೋಜನೆ ಮರುಪರಿಶೀಲಿಸಿ ಹೊಸ ಡಿಪಿಆರ್ ಸಿದ್ಧಪಡಿಸಲಾಗಿದ್ದು ಕೇಂದ್ರಕ್ಕೆ ಕಳಹಿಸಲಾಗುವುದು. CWMA ಮತ್ತು ಕೇಂದ್ರ ಪರಿಸರ ಇಲಾಖೆಯಿಂದ ಅಂತಿಮ ಕ್ಲಿಯರೆನ್ಸ್ ಸಿಕ್ಕ ತಕ್ಷಣ, ಯಾವುದೇ ವಿಳಂಬವಿಲ್ಲದೆ ಅಧಿಕೃತವಾಗಿ ಗುದ್ದಲಿ ಪೂಜೆ ನೆರವೇರಿಸಿ, ಕಾಮಗಾರಿಯನ್ನು ಆರಂಭಿಸುತ್ತೇವೆ” ಎಂದು ಹೇಳಿಕೆ ನೀಡಿದ್ದಾರೆ. ಇದೆಲ್ಲದರಿಂದ ಆಘಾತಗೊಂಡಿರುವ ತಮಿಳುನಾಡು ಮುಖ್ಯಮಂತ್ರಿ ವಿಜಯ್, ಪ್ರಧಾನಿ ಮೋದಿಯವರಿಗೆ ತಕ್ಷಣ ಪತ್ರ ಬರೆದಿದ್ದಾರೆ. ಡಿಪಿಆರ್ ಹಂತದಲ್ಲೇ ಯೋಜನೆಯನ್ನು ತಡೆಯಬೇಕು ಎಂಬುದು ತಮಿಳುನಾಡಿನ ಉದ್ದೇಶ.
ಜೋಸೆಫ್ ವಿಜಯ್ ಪತ್ರದಲ್ಲಿ ಹೇಳುವುದೇನು?
“ದಶಕಗಳ ಕಾನೂನು ಹೋರಾಟದ ಬಳಿಕ 2018ರಲ್ಲಿ ಸುಪ್ರೀಂ ಕೋರ್ಟ್ ಕಾವೇರಿ ನೀರಿನ ವಿವಾದಕ್ಕೆ ಅಂತಿಮ ತೀರ್ಪು ನೀಡಿದೆ. ಮೇಕೆದಾಟು ಯೋಜನೆಯು ಕಾವೇರಿ ಜಲ ವಿವಾದ ನ್ಯಾಯಮಂಡಳಿ ಅನುಮತಿಸಿದ ಯೋಜನೆಗಳ ಪಟ್ಟಿಯಲ್ಲಿಲ್ಲ. ಇಂತಹ ಸನ್ನಿವೇಶದಲ್ಲಿ ಕರ್ನಾಟಕ ಸರ್ಕಾರ ಭೂಮಿ ಪೂಜೆ ಘೋಷಿಸಿರುವುದು ಸುಪ್ರೀಂ ಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆ” ಎಂದಿದ್ದಾರೆ ವಿಜಯ್ ಜೋಸೆಫ್.
ಮುಂದುವರಿದು, “ಕಾವೇರಿ ಜಲಾನಯನ ಪ್ರದೇಶವು ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಹೊಸದಾಗಿ ಬೃಹತ್ ಸಂಗ್ರಹಣಾ ಜಲಾಶಯ ನಿರ್ಮಿಸಲು ಕಾನೂನಿನ ಮಾನ್ಯತೆ ಇಲ್ಲ. ಕರ್ನಾಟಕ-ತಮಿಳುನಾಡು ಗಡಿಯ ಮೇಲ್ಭಾಗದಲ್ಲಿ 67.16 ಟಿಎಂಸಿ ಸಂಗ್ರಹಣಾ ಸಾಮರ್ಥ್ಯದ ಜಲಾಶಯ ನಿರ್ಮಿಸುವ ಮೂಲಕ, ತಮಿಳುನಾಡಿಗೆ ಹರಿಯಬೇಕಾದ ಅನಿಯಂತ್ರಿತ ಜಲಾನಯನ ಪ್ರದೇಶದ ನೀರನ್ನು ತಡೆಯಲು ಕರ್ನಾಟಕ ಪ್ರಯತ್ನಿಸುತ್ತಿದೆ. ಕೆಳಭಾಗದ ರಾಜ್ಯಕ್ಕೆ ಸಿಗುವ ನೀರಿನ ಮೇಲೆ ಪರಿಣಾಮ ಬೀರುವ ಯಾವುದೇ ಕ್ರಮವನ್ನು ಮೇಲ್ಭಾಗದ ರಾಜ್ಯ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ಯೋಜನೆಗೆ ಪರಿಸರ ವಿರೋಧಿಯಾಗಿದೆ. ತಮಿಳುನಾಡು ಸರ್ಕಾರದ ಮನವಿಯನ್ನು ಪರಿಗಣಿಸದೆ, ಕೇಂದ್ರ ಜಲ ಆಯೋಗ (CWC) ಕರ್ನಾಟಕದ ಮೇಕೆದಾಟು ಯೋಜನೆಯ ಪ್ರಸ್ತಾವನೆಯನ್ನು ಪರಿಗಣಿಸುತ್ತಿರುವುದು ಆಶ್ಚರ್ಯ ತಂದಿದೆ. ತಮಿಳುನಾಡು ಒಪ್ಪಿಗೆಯನ್ನು ಪಡೆಯದೆ ಯಾವುದೇ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳದಂತೆ ಕರ್ನಾಟಕ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಬೇಕು. ಮೇಕೆದಾಟು ಯೋಜನೆಯ ವಿಸ್ತೃತ ಡಿಪಿಆರ್ಅನ್ನು ತಕ್ಷಣವೇ ತಿರಸ್ಕರಿಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಕೇಂದ್ರ ಜಲ ಆಯೋಗದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ ವಿಜಯ್.
ರಾಜಕೀಯ ಲೆಕ್ಕಾಚಾರ
ಆಯಾ ರಾಜ್ಯದ ಹಿತಾಸಕ್ತಿಗಳು, ಸ್ಥಳೀಯ ರಾಜಕೀಯ ಲೆಕ್ಕಾಚಾರಗಳು ಮೇಕೆದಾಟು ಯೋಜನೆಯ ಹಿಂದೆ ಇದ್ದೇ ಇದೆ. ಮುಖ್ಯಮಂತ್ರಿ ಸ್ಥಾನದತ್ತ ದಾಪುಗಾಲು ಇಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮೇಕೆದಾಟು ಯೋಜನೆ ಪ್ರತಿಷ್ಠೆಯ ವಿಚಾರವೂ ಹೌದು. ಹಳೆಯ ಮೈಸೂರು ಭಾಗದ ಒಕ್ಕಲಿಗರ ನಾಯಕರಾಗಿ ಗುರುತಿಸಿಕೊಳ್ಳಲು ಡಿ.ಕೆ. ಶಿವಕುಮಾರ್ ಮುಖ್ಯವಾಗಿ ಕೈಗೆತ್ತಿಕೊಂಡ ವಿಚಾರವೇ ‘ಮೇಕೆದಾಟು ಯೋಜನೆ’. 2022ರಲ್ಲಿ ವಿರೋಧ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ಹಮ್ಮಿಕೊಂಡಿದ್ದ ‘ನಮ್ಮ ನೀರು ನಮ್ಮ ಹಕ್ಕು- ಮೇಕೆದಾಟು ಪಾದಯಾತ್ರೆ’ ಮೂಲಕ ಡಿ.ಕೆ.ಶಿವಕುಮಾರ್ ಗಮನ ಸೆಳೆದದ್ದೂ ಉಂಟು.
ಈ ಲೇಖನ ಓದಿದ್ದೀರಾ?: ಬಿಡದಿ ಟೌನ್‌ಶಿಪ್: ‘ಲ್ಯಾಂಡ್ ಮಾಫಿಯಾ’ಕ್ಕೆ ಬಗ್ಗದ ರೈತರು
ಮೇಕೆದಾಟು ವಿಚಾರ ಜೆಡಿಎಸ್‌ಗೂ ಪ್ರತಿಷ್ಠೆಯ ಸಂಗತಿ. ಮೇಕೆದಾಟು ಯೋಜನೆ ಯಶಸ್ವಿಯಾದರೆ, ಜೆಡಿಎಸ್ ಭದ್ರಕೋಟೆಯಲ್ಲಿ ಡಿ.ಕೆ. ಶಿವಕುಮಾರ್ ಮೇಲುಗೈ ಸಾಧಿಸುತ್ತಾರೆಂಬ ಭಯ ಜೆಡಿಎಸ್ ನಾಯಕರಿಗೂ ಇದೆ. ಕಾವೇರಿ ವಿಷಯದಲ್ಲಿ ದೇವೇಗೌಡರ ಕುಟುಂಬದ ಕೊಡುಗೆಯನ್ನು ಜನರಿಗೆ ನೆನಪಿಸುವ ಮೂಲಕ ಜೆಡಿಎಸ್ ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳಲು ಮೊದಲಿನಿಂದಲೂ ಯತ್ನಿಸುತ್ತಿದೆ. ಜೆಡಿಎಸ್ ಈಗ ಬಿಜೆಪಿಯ ಮಿತ್ರಪಕ್ಷವಾಗಿರುವ ಕಾರಣ, ಕೇಂದ್ರದಿಂದ ಯೋಜನೆಗೆ ಅನುಮತಿ ಕೊಡಿಸಬೇಕಾದ ನೈತಿಕ ಜವಾಬ್ದಾರಿಯೂ ಅದರ ಹೆಗಲ ಮೇಲಿದೆ.
ಇನ್ನ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಉಭಯ ರಾಜ್ಯಗಳನ್ನು ಸರಿದೂಗಿಸಬೇಕಾದ ಜವಾಬ್ದಾರಿ ಹೊಂದಿದೆ. “ಯೋಜನೆ ಯಶಸ್ವಿಯಾದರೆ ಅದರ ಕ್ರೆಡಿಟ್ ಕಾಂಗ್ರೆಸ್ ಸರ್ಕಾರ ಪಡೆಯುತ್ತದೆ ಎಂಬ ಆತಂಕವೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಇದ್ದಂತೆ ಕಾಣುತ್ತದೆ. ಹೀಗಾಗಿ, ಪರಿಸರ ಒಪ್ಪಿಗೆ ಮತ್ತು ಸಿಡಬ್ಲ್ಯೂಎಂಎ (CWMA)ಯ ತಾಂತ್ರಿಕ ವರದಿಗಳ ನೆಪವೊಡ್ಡಿ ನಿರ್ಧಾರವನ್ನು ಮುಂದೂಡುತ್ತಾ ಬಂದಿದೆ” ಎಂಬ ರಾಜಕೀಯ ಟೀಕೆಗಳಿವೆ.
ಮೇಕೆದಾಟು ಯೋಜನೆಯ ಉದ್ದೇಶ
ಬೆಂಗಳೂರು ಮಹಾನಗರ, ಬಿಡದಿ, ರಾಮನಗರ, ಚನ್ನಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳ ಕುಡಿಯುವ ನೀರಿನ ದಾಹವನ್ನು ತೀರಿಸುವುದು ಇದರ ಮುಖ್ಯ ಗುರಿ. ಯೋಜನೆಯ ಒಟ್ಟು ನೀರಿನಲ್ಲಿ ಸುಮಾರು 4.75 TMC ನೀರನ್ನು ಶುದ್ಧೀಕರಿಸಿ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ಕಾಯ್ದಿರಿಸಲಾಗುತ್ತದೆ ಎಂದು ಯೋಜನೆಯ ರೂಪುರೇಷೆ ಹೇಳುತ್ತದೆ. ಜಲಾಶಯದ ಕೆಳಭಾಗದಲ್ಲಿ ಒಂದು ಜಲವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಯೋಜಿಸಲಾಗಿದೆ. ಇದರ ಮೂಲಕ ಒಟ್ಟು 400 ಮೆಗಾವ್ಯಾಟ್ ಸಾಮರ್ಥ್ಯದ ಪರಿಸರಸ್ನೇಹಿ ಜಲವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶವಿದೆ. ಈ ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 67.16 TMC ಎಂದು ಅಂದಾಜಿಸಲಾಗಿದೆ.
ಈ ಯೋಜನೆಯ ಅಡಿಯಲ್ಲಿ ಕರ್ನಾಟಕವು ಯಾವುದೇ ಹೊಸ ಕೃಷಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವುದಿಲ್ಲ. ಇದು ಕೇವಲ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಸೀಮಿತ. ಮಳೆಗಾಲದಲ್ಲಿ ಕೃಷ್ಣರಾಜಸಾಗರ (ಕೆಆರ್‌ಎಸ್) ಮತ್ತು ಕಬಿನಿ ಜಲಾಶಯಗಳು ತುಂಬಿ ಹರಿಯುವಾಗ, ಹೆಚ್ಚುವರಿ ನೀರು ಯಾವುದೇ ಬಳಕೆಯಿಲ್ಲದೆ ತಮಿಳುನಾಡು ದಾಟಿ ಸಮುದ್ರ ಸೇರುತ್ತದೆ. ಆ ‘ಉಪಯುಕ್ತವಲ್ಲದ’ ಹೆಚ್ಚುವರಿ ನೀರನ್ನು ಇಲ್ಲಿ ಹಿಡಿದಿಟ್ಟುಕೊಳ್ಳುವುದು ಯೋಜನೆಯ ಮುಖ್ಯ ತಂತ್ರ. ಮಳೆ ಕೈಕೊಟ್ಟ ವರ್ಷಗಳಲ್ಲಿ ತಮಿಳುನಾಡಿಗೆ ನಿಗದಿಪಡಿಸಿದ 177 TMC ನೀರನ್ನು ಹರಿಸಲು ಕರ್ನಾಟಕ ತಡಕಾಡುತ್ತದೆ. ಮೇಕೆದಾಟು ಜಲಾಶಯವಿದ್ದರೆ, ಮಳೆಗಾಲದಲ್ಲಿ ಸಂಗ್ರಹಿಸಿದ ನೀರನ್ನು ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ತಕ್ಷಣವೇ ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಉಭಯ ರಾಜ್ಯಗಳಿಗೂ ಅನುಕೂಲವಾಗುತ್ತದೆ ಎಂಬುದು ಕರ್ನಾಟಕ ಸರ್ಕಾರದ ವಾದ. ಆದರೆ ಈ ಯೋಜನೆಯ ಹಿಂದೆ ಬೃಹತ್ ಹಣಕಾಸಿನ ವ್ಯವಹಾರ, ರಾಜಕೀಯ ಲೆಕ್ಕಾಚಾರಗಳು ಇರುವುದರಿಂದ ಯೋಜನೆ ಕಾರ್ಯಗತಗೊಳ್ಳುವುದು ಕಷ್ಟ-ಸಾಧ್ಯ.
ಪರಿಸರ ತಜ್ಞರ ಆತಂಕ
ಈ ಯೋಜನೆ ವಿರುದ್ಧ ಪರಿಸರ ತಜ್ಞರ ಅಭಿಪ್ರಾಯಗಳು ದಾಖಲಾಗಿವೆ. ಜಲಾಶಯ ನಿರ್ಮಾಣದಿಂದ ಸುಮಾರು 4,996 ಹೆಕ್ಟೇರ್ (ಸುಮಾರು 12,000 ಕ್ಕೂ ಹೆಚ್ಚು ಎಕರೆ) ಅರಣ್ಯ ಮತ್ತು ಕಂದಾಯ ಭೂಮಿ ನೀರಿನಲ್ಲಿ ಮುಳುಗಡೆಯಾಗಲಿದೆ. ಇದರಲ್ಲಿ ಬಹುಪಾಲು ಭೂಮಿ ‘ಕಾವೇರಿ ವನ್ಯಜೀವಿ ಧಾಮ’ಕ್ಕೆ ಸೇರಿದ್ದಾಗಿದೆ. ರಾಮನಗರ ಜಿಲ್ಲೆಯ ಕನಕಪುರ ಮಾತ್ರವಲ್ಲದೆ, ಇತ್ತೀಚಿನ ವರದಿಗಳ ಪ್ರಕಾರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಐದು ಹಳ್ಳಿಗಳ ವ್ಯಾಪ್ತಿಯ ಸುಮಾರು 1,079 ಹೆಕ್ಟೇರ್ ಅರಣ್ಯ ಭೂಮಿಯೂ ಇದರಲ್ಲಿ ಮುಳುಗಡೆಯಾಗಲಿದೆ. ಮೇಕೆದಾಟು ಅರಣ್ಯ ಪ್ರದೇಶವು ಏಷ್ಯನ್ ಆನೆಗಳ ಪ್ರಮುಖ ವಲಸೆ ದಾರಿಯಾಗಿದ್ದು, ಇದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಜಲಾಶಯ ನಿರ್ಮಾಣದಿಂದ ಆನೆಗಳ ಸಹಜ ಸಂಚಾರ ಮಾರ್ಗ (ಕಾರಿಡಾರ್) ಕಡಿತಗೊಳ್ಳುತ್ತದೆ. ಇದರಿಂದ ಆನೆಗಳು ದಾರಿ ತಪ್ಪಿ ಸುತ್ತಮುತ್ತಲಿನ ಹಳ್ಳಿಗಳು ಮತ್ತು ಕೃಷಿ ಭೂಮಿಗೆ ನುಗ್ಗುವ ಸಾಧ್ಯತೆ ಹೆಚ್ಚಾಗಲಿದ್ದು, ಈಗಾಗಲೇ ಕರಾವಳಿ ಮತ್ತು ಮಲೆನಾಡಿನಲ್ಲಿರುವಂತೆ ಇಲ್ಲೂ ‘ಮಾನವ-ಆನೆ ಸಂಘರ್ಷ’ ತೀವ್ರಗೊಳ್ಳಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.



