ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ ನಾರಾಯಣಪುರ, ತೆಲಂಗಾಣ ರಾಜ್ಯ ಹಾಗೂ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ವ್ಯಾಪ್ತಿಗೆ ಹರಿಸಿರುವ ನೀರಿನ ಪ್ರಮಾಣದ ಕುರಿತು ರಾಜ್ಯ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಿ, ನೀರು ಹಂಚಿಕೆಯ ಸಂಪೂರ್ಣ ಲೆಕ್ಕವನ್ನು ಬಹಿರಂಗಪಡಿಸಬೇಕು ಎಂದು ರೈತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ವಿಜಯಪುರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ್ ಬಿರಾದಾರ್ ಹಾಗೂ ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ಸಂಘದ ಜಿಲ್ಲಾ ಕಾರ್ಯದರ್ಶಿ ಮಹದೇವಪ್ಪ ತೇಲಿ, ಆಲಮಟ್ಟಿ ಜಲಾಶಯದ ನೀರು ಹಂಚಿಕೆಯಲ್ಲಿ ಅವಳಿ ಜಿಲ್ಲೆಯ ರೈತರಿಗೆ ಅನ್ಯಾಯವಾಗಿರುವ ಶಂಕೆ ವ್ಯಕ್ತಪಡಿಸಿದರು.
ಜಲಾಶಯದಲ್ಲಿದ್ದ ಒಟ್ಟು 123.081 ಟಿಎಂಸಿ ನೀರಿನಲ್ಲಿ ನಿರ್ಬಂಧಿತ 17.65 ಟಿಎಂಸಿ ಹೊರತುಪಡಿಸಿ ಉಳಿದ ನೀರನ್ನು ನಾರಾಯಣಪುರ, ತೆಲಂಗಾಣ ಹಾಗೂ ವಿವಿಧ ನೀರಾವರಿ ಯೋಜನೆಗಳಿಗೆ ಎಷ್ಟು ಪ್ರಮಾಣದಲ್ಲಿ ಹರಿಸಲಾಗಿದೆ ಎಂಬುದರ ಬಗ್ಗೆ ಅಧಿಕೃತ ದಾಖಲೆಗಳೊಂದಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಕೆಬಿಜೆಎನ್ಎಲ್ ಅಧಿಕಾರಿಗಳು ನೀಡಿರುವ ಲೆಕ್ಕಾಚಾರದಲ್ಲಿ ಅವಳಿ ಜಿಲ್ಲೆಯ 183 ಕೆರೆಗಳನ್ನು ಸಂಪೂರ್ಣ ಭರ್ತಿ ಮಾಡಲು ಅಗತ್ಯವಿರುವ ನೀರಿನ ಪ್ರಮಾಣದ ಬಗ್ಗೆಯೂ ಸ್ಪಷ್ಟತೆ ಇಲ್ಲ. ಕೆರೆಗಳಿಗೆ ಸುಮಾರು 1ರಿಂದ 1.15 ಟಿಎಂಸಿ ನೀರು ಸಾಕಾಗುತ್ತದೆ. ಎರಡು ಟಿಎಂಸಿ ಎಂದು ಪರಿಗಣಿಸಿದರೂ ಉಳಿಯುವ 3.191 ಟಿಎಂಸಿ ನೀರು ಎಲ್ಲಿ ಬಳಕೆಯಾಗಿದೆ ಎಂಬುದಕ್ಕೆ ಅಧಿಕಾರಿಗಳು ಉತ್ತರಿಸಬೇಕು ಎಂದು ಪ್ರಶ್ನಿಸಿದರು.
ನಾರಾಯಣಪುರ ಜಲಾಶಯಕ್ಕೆ ಒಟ್ಟು 46.33 ಟಿಎಂಸಿ ನೀರು ಹರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ನೀರಿನ ಹಂಚಿಕೆ ಮತ್ತು ಬಳಕೆಯ ಲೆಕ್ಕದಲ್ಲಿ ಪಾರದರ್ಶಕತೆ ಇಲ್ಲ. ಬಸವನ ಬಾಗೇವಾಡಿಯಲ್ಲಿ ನಡೆದ ಸಭೆಯಲ್ಲಿ ನೀಡಿದ ಕಂಪ್ಯೂಟರ್ ಸಿದ್ಧಪಡಿತ ಮಾಹಿತಿಯ ಬದಲು ಇಲಾಖೆಯ ಅಧಿಕೃತ ಮುದ್ರೆ ಹೊಂದಿರುವ ದಾಖಲೆಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ನೀರಿನ ಹಂಚಿಕೆಯ ಲೆಕ್ಕಾಚಾರದಿಂದ ಅವಳಿ ಜಿಲ್ಲೆಯ ರೈತರ ಬೆಳೆಗಳಿಗೆ ಅನ್ಯಾಯವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಸಮಗ್ರ ಶ್ವೇತಪತ್ರ ಹೊರಡಿಸಿ, ನೀರು ಹಂಚಿಕೆಯ ಸತ್ಯಾಂಶವನ್ನು ರೈತರು ಹಾಗೂ ಜನಸಾಮಾನ್ಯರ ಮುಂದಿಡಬೇಕು ಎಂದು ಮುಖಂಡರು ಒತ್ತಾಯಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಹನುಮಂತರಾಯ ಹಂದ್ರಾಳ, ಆಯುಬ್ ನಾಗರವಾಡಿ ಹಾಗೂ ಗುರುರಾಜ ಪಡಶೆಟ್ಟಿ ಉಪಸ್ಥಿತರಿದ್ದರು.



