ಕೇರಳದ ಪ್ರಮುಖ ರಾಜಕೀಯ ಪಕ್ಷವಾದ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ (IUML) ತನ್ನ ಸಾಂಸ್ಥಿಕ ಪುನಾರಚನೆಯಲ್ಲಿ ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ತೀರ್ಮಾನವೊಂದನ್ನು ತೆಗೆದುಕೊಂಡಿದೆ. ತನ್ನ 70ಕ್ಕೂ ಹೆಚ್ಚು ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ, IUML ಉನ್ನತ ಸಾಂಸ್ಥಿಕ ಹುದ್ದೆಯಾದ ರಾಜ್ಯ ಉಪಾಧ್ಯಕ್ಷರನ್ನಾಗಿ ಹಿಂದೂ ನಾಯಕ ಸಿ. ಶ್ಯಾಮ್ (61) ಅವರನ್ನು ಆಯ್ಕೆ ಮಾಡಲಾಗಿದೆ.
ಆಲಪ್ಪುಝದ ಪ್ರಭಾವಿ ನಾಯರ್ ಕುಟುಂಬಕ್ಕೆ ಸೇರಿದ ಸಿ. ಶ್ಯಾಮ್ ಅವರು (ಕೇರಳ ವಿಧಾನಸಭೆಯ ಪ್ರಥಮ ಸ್ಪೀಕರ್ ಆರ್. ಶಂಕರನಾರಾಯಣನ್ ತಂಬಿ ಅವರ ಸೋದರಳಿಯ) ಹಿಂದೆ ಎಡಪಂಥೀಯ ಯುವಜನ ಸಂಘಟನೆ ಡಿವೈಎಫ್‌ಐನಲ್ಲಿ ಸಕ್ರಿಯರಾಗಿದ್ದರು. 2010ರಲ್ಲಿ ಸಿಪಿಐ(ಎಂ) ಒಡನಾಟ ತೊರೆದು ಮುಸ್ಲಿಂ ಲೀಗ್ ಸೇರಿದ ಅವರು, ಕಳೆದ 15 ವರ್ಷಗಳಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರಿಗೆ ಇಡುಕ್ಕಿ ಮತ್ತು ಪತ್ತನಂತಿಟ್ಟ ಜಿಲ್ಲೆಗಳ ಉಸ್ತುವಾರಿಯನ್ನೂ ವಹಿಸಲಾಗಿದೆ.
ಇದನ್ನೂ ಓದಿ: ಕೇರಳ ಚುನಾವಣೆ: ಮುಸ್ಲಿಂ ಲೀಗ್‌ನ ಮೊದಲ ಶಾಸಕಿಯಾಗಿ ಐತಿಹಾಸಿಕ ದಾಖಲೆ ಬರೆದ ಫಾತಿಮಾ ತಹ್ಲಿಯಾ
ಮುಸ್ಲಿಂ ಲೀಗ್ ಮೇಲೆ ಎಡಪಂಥೀಯ ಪಕ್ಷಗಳು ನಿರಂತರವಾಗಿ ಹೊರಿಸುತ್ತಿದ್ದ ‘ಕೋಮುವಾದಿ’ ಅಥವಾ ‘ಒಂದು ಸಮುದಾಯಕ್ಕೆ ಸೀಮಿತ ಪಕ್ಷ’ ಎಂಬ ಆರೋಪವನ್ನು ಮುರಿಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಶಾಸಕರು ಹಾಗೂ ಸಚಿವರುಗಳನ್ನು ಪಕ್ಷದ ಸಾಂಸ್ಥಿಕ ಹುದ್ದೆಗಳಿಂದ ಮುಕ್ತಗೊಳಿಸಿ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಈ ಪುನಾರಚನೆ ನಡೆದಿದೆ. ಸಿ. ಶ್ಯಾಮ್ ಅವರ ಜೊತೆಗೆ ದಲಿತ ನಾಯಕ ಯು.ಸಿ. ರಾಮನ್ ಅವರು ಕೂಡ ಪಕ್ಷದ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.
This video cannot be played in your browser. Open the video directly
ಕೇವಲ ಧಾರ್ಮಿಕ ಸಮತೋಲನ ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ IUML ತನ್ನ ಸಾಂಪ್ರದಾಯಿಕ ನಿಲುವಿನಿಂದ ಹೊರಬಂದು ಮಹಿಳಾ ನಾಯಕಿಯರಿಗೂ ರಾಜಕೀಯ ಪ್ರಾಶಸ್ತ್ಯ ನೀಡಲು ಹೆಜ್ಜೆ ಇಡುತ್ತಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ ನೀಡಿ ಟಿಕೆಟ್ ನೀಡಿತ್ತು.
ವಿದ್ಯಾರ್ಥಿ ಮತ್ತು ಯುವಜನ ರಂಗದಲ್ಲಿ (MSF / ಹರಿತಾ) ಮುಂಚೂಣಿಯಲ್ಲಿದ್ದ ಫಾತಿಮಾ ತಹಿಲಿಯಾ ಅವರಂತಹ ಯುವ ನಾಯಕಿಯರು ಶಾಸಕಿಯಾಗಿ ಹಾಗೂ ರಾಜಕೀಯ ರಂಗದಲ್ಲಿ ಮುನ್ನಲೆಗೆ ಬಂದರು. ಇದು ಪಕ್ಷದೊಳಗೆ ಮಹಿಳಾ ಧ್ವನಿಗೆ ಆದ್ಯತೆ ಸಿಗುತ್ತಿದೆ ಎಂಬ ಚರ್ಚೆಗೆ ಗ್ರಾಸವಾಯಿತು. ಈ ನೂತನ ತಂತ್ರಗಾರಿಕೆಯು ಯುಡಿಎಫ್ ಮೈತ್ರಿಕೂಟಕ್ಕೆ ಹೆಚ್ಚಿನ ಬಲ ತರಲಿದ್ದು, ಮುಸ್ಲಿಂ ಲೀಗ್ ಅನ್ನು ‘ಸರ್ವಜನ ಸಮ್ಮತ’ ಜಾತ್ಯತೀತ ಪಕ್ಷವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬ ಅಭಿಪ್ರಾಯವಿದೆ.





