ಶಿವಮೊಗ್ಗ- ಸಾಗರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಇಂದು ಬೆಳಗಿನ ಜಾವ ಆನಂದಪುರದ ಮುಂಬಾಳು ಸಮೀಪ ನಡೆದಿದೆ.
ಬೆಳಿಗ್ಗೆ ಸುಮಾರು 5.45ರ ವೇಳೆಗೆ ಬಸ್‌ನ ಬ್ಯಾಟರಿ ಬಳಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಚಾಲಕನ ಸೀಟಿನ ಸಮೀಪ ಹೊಗೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ತಕ್ಷಣ ಎಚ್ಚೆತ್ತ ಚಾಲಕ ಫೈರ್ ಎಕ್ಸ್‌ಟಿಂಗ್ವಿಷರ್ ಬಳಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಬೆಂಕಿ ಕ್ಷಣಾರ್ಧದಲ್ಲಿ ಬಸ್‌ನ ಇತರೆ ಭಾಗಗಳಿಗೂ ವ್ಯಾಪಿಸಿದೆ.
ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದು, ಶಿವಮೊಗ್ಗ ಹಾಗೂ ಕುಂಸಿ ಭಾಗಗಳಲ್ಲಿ ಬಹುತೇಕ ಪ್ರಯಾಣಿಕರು ಇಳಿದಿದ್ದರು. ಸಾಗರದತ್ತ ಪ್ರಯಾಣಿಸುತ್ತಿದ್ದ ಕೆಲ ಪ್ರಯಾಣಿಕರು ಮಾತ್ರ ಬಸ್‌ನಲ್ಲಿದ್ದರು. ಚಾಲಕ ಸಮಯಪ್ರಜ್ಞೆ ಮೆರೆದು ಪ್ರಯಾಣಿಕರು ಹಾಗೂ ಅವರ ಲಗೇಜ್‌ಗಳನ್ನು ಸುರಕ್ಷಿತವಾಗಿ ಕೆಳಗಿಳಿಸಿ, ಮತ್ತೊಂದು ಬಸ್‌ನಲ್ಲಿ ಸಾಗರಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದೆ.
ಘಟನೆ ಕುರಿತು ಆನಂದಪುರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಪ್ರವೀಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





