ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯದ ಮೂರು ವಿಶ್ವವಿದ್ಯಾಲಯಗಳ ಕುಲಪತಿಗಳ ನಡೆಗೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇದೊಂದು ಗಂಭೀರ ಲೋಪವಾಗಿದ್ದು, ಕುಲಪತಿಗಳು ಕೇರಳದ ಜನತೆಯ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಶನಿವಾರ (ಜೂನ್ 13) ತಿರುವನಂತಪುರದಲ್ಲಿ ನಡೆದ ಆರೆಸ್ಸೆಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾಷಣ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಕೇರಳ ವಿಶ್ವವಿದ್ಯಾಲಯ, ಎಂ.ಜಿ (ಮಹಾತ್ಮಾ ಗಾಂಧಿ) ವಿಶ್ವವಿದ್ಯಾಲಯ ಮತ್ತು ಮಲಯಾಳಂ ವಿಶ್ವವಿದ್ಯಾಲಯಗಳ ಕುಲಪತಿಗಳು ಪಾಲ್ಗೊಂಡಿದ್ದರು. ಈ ಬಗ್ಗೆ ಭಾನುವಾರ ಸಾಮಾಜಿಕ ಜಾಲತಾಣ ‘ಎಕ್ಸ್’ ಹಾಗೂ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸತೀಶನ್, “ಮೂವರು ಕುಲಪತಿಗಳು ಮೋಹನ್ ಭಾಗವತ್ ಭಾಗವಹಿಸಿದ್ದ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಫಿಫಾ ಜಗತ್ತಿನಲ್ಲಿ ಭಾರತದ ಹೆಜ್ಜೆಗುರುತು – ಕನ್ನಡಿಗ ಕೆಂಪಯ್ಯನವರ ಮರೆಯಲಾಗದ ಸಾಧನೆ
“ಕುಲಪತಿಗಳ ಈ ನಡೆಯು ಕೇರಳದ ಶೈಕ್ಷಣಿಕ ಪರಂಪರೆ ಮತ್ತು ಅವರು ಹೊಂದಿರುವ ಉನ್ನತ ಹುದ್ದೆಯ ಘನತೆಗೆ ಶೋಭೆ ತರುವಂಥದ್ದಲ್ಲ. ಕುಲಪತಿ ಹುದ್ದೆಯನ್ನು ಕೇರಳದ ಸಮಾಜ ಅತ್ಯಂತ ಗೌರವದಿಂದ ಕಾಣುತ್ತದೆ. ತೀವ್ರ ಕೋಮುವಾದವನ್ನು ಬೋಧಿಸುವ ಆರೆಸ್ಸೆಸ್ ನಾಯಕರ ನೇತೃತ್ವದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಅವರು ಆ ಗೌರವವನ್ನು ಹಾಳುಮಾಡಿದ್ದಾರೆ. ಕೋಮುವಾದಕ್ಕೆ ಮಾನ್ಯತೆ ನೀಡುವ ಅಥವಾ ಅದನ್ನು ಪ್ರೋತ್ಸಾಹಿಸುವ ಯಾವುದೇ ನಡೆಯನ್ನು ನಾವು ಸಹಿಸುವುದಿಲ್ಲ” ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಈ ವಿದ್ಯಮಾನದ ಕುರಿತು ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಕೂಡ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ಉನ್ನತ ಶಿಕ್ಷಣ ವಲಯದಲ್ಲಿ ಸಂಘಪರಿವಾರವು ತನ್ನ ಪ್ರಭಾವ ಮತ್ತು ಹಿಡಿತವನ್ನು ವಿಸ್ತರಿಸಿಕೊಳ್ಳಲು ಹೇಗೆ ಪ್ರಯತ್ನಿಸುತ್ತಿದೆ ಎಂಬುದಕ್ಕೆ ಈ ಘಟನೆಯೇ ಸ್ಪಷ್ಟ ಉದಾಹರಣೆ. ಜಾತ್ಯತೀತ ಕೇರಳವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ” ಎಂದು ಅವರು ಆರೋಪಿಸಿದ್ದಾರೆ.




