ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ದುರುಪಯೋಗ ಮತ್ತು ಕಳ್ಳತನದ ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಪಕ್ಷವು ಒತ್ತಾಯಿಸಿದೆ.
ಉತ್ತರ ಪ್ರದೇಶ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳದ (SIT) ತನಿಖೆಯು ಕೇವಲ ಕೆಳಹಂತದ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿದೆ. ಆದ್ದರಿಂದ ನೈಜ ಸತ್ಯ ಹೊರಬರಲು ಹಾಲಿ ಅಥವಾ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ಅಜಯ್ ಉಪಾಧ್ಯಾಯ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಲೂಟಿ: ಬಟ್ಟೆ, ಸಾಕ್ಸ್‌ನೊಳಗೆ ನೋಟಿನ ಕಂತೆ ಬಚ್ಚಿಟ್ಟುಕೊಳ್ಳುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್, ಯಾವುದೇ ತಪ್ಪು ನಡೆಯದಿದ್ದರೆ ಈ ಪ್ರಮುಖರು ಏಕೆ ರಾಜೀನಾಮೆ ನೀಡಬೇಕಿತ್ತೆಂದು ಕಟುವಾಗಿ ಟೀಕಿಸಿದೆ.
“ಅಕ್ರಮಗಳ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಅನ್ನು ತಕ್ಷಣವೇ ವಿಸರ್ಜಿಸಬೇಕು. ರಾಜಕೀಯ ವ್ಯಕ್ತಿಗಳ ಬದಲಿಗೆ ಶಂಕರಾಚಾರ್ಯರು, ಧಾರ್ಮಿಕ ಮುಖಂಡರು ಮತ್ತು ಆಧ್ಯಾತ್ಮಿಕ ನಾಯಕರನ್ನೊಳಗೊಂಡ ಹೊಸ ಪಾರದರ್ಶಕ ಸಮಿತಿಯನ್ನು ರಚಿಸಿ ಮಂದಿರದ ಜವಾಬ್ದಾರಿಯನ್ನು ಹಸ್ತಾಂತರಿಸಬೇಕು” ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ಹಾಗೆಯೇ “ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿಯೇ ಈ ಟ್ರಸ್ಟ್ ರಚನೆಯಾಗಿದ್ದು, ಮಂದಿರ ನಿರ್ಮಾಣದ ಸಂಪೂರ್ಣ ಕ್ರೆಡಿಟ್ ಪಡೆದ ಅವರು ಈ ಬೃಹತ್ ಹಣಕಾಸು ಅಕ್ರಮದ ಬಗ್ಗೆ ಏಕಾಗಿ ಮೌನ ವಹಿಸಿದ್ದಾರೆ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
“ಭಕ್ತರು ನೀಡಿದ ಕಾಣಿಕೆ, ಬ್ಯಾಂಕ್ ಖಾತೆಗಳು, ಜಮೀನು ಖರೀದಿ ಹಾಗೂ ಕಾರ್ಯಕ್ರಮಗಳ ವೆಚ್ಚ ಸೇರಿದಂತೆ ಎಲ್ಲ ಹಣಕಾಸು ವ್ಯವಹಾರಗಳ ಬಗ್ಗೆ ಸಮಗ್ರ ಫೋರೆನ್ಸಿಕ್ ಆಡಿಟ್ ನಡೆಸಿ ವರದಿಯನ್ನು ಸಾರ್ವಜನಿಕಗೊಳಿಸಬೇಕು” ಎಂದು ಕಾಂಗ್ರೆಸ್ ಒತ್ತಾಯಿಸಿದೆ.




