ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಕಾನೂನು ಸೇವಾ ಸಮಿತಿಗಳ ಆಶ್ರಯದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ನಡೆಯಿತು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಆಯೋಜಿಸಲಾದ ಈ ಲೋಕ ಅದಾಲತ್‌ನಲ್ಲಿ ಜಿಲ್ಲೆಯಾದ್ಯಂತ 25 ಪೀಠಗಳಲ್ಲಿ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಪ್ರಕರಣಗಳನ್ನು ಪರಿಗಣಿಸಲಾಯಿತು. ಒಟ್ಟು 1,77,618 ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಾಗಿದ್ದು, ಅವುಗಳಲ್ಲಿ 6,731 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಲ ಮರುಪಾವತಿ, ಪರಿಹಾರ, ದಂಡ ಸೇರಿದಂತೆ ವಿವಿಧ ಹಣಕಾಸು ವ್ಯವಹಾರಗಳಲ್ಲಿ ಒಟ್ಟು ₹49,61,59,076 ಮೊತ್ತದ ಸಂಗ್ರಹ ಮತ್ತು ಪಾವತಿ ನಡೆದಿದೆ.ರಾಜಿಯಾದ ಪ್ರಕರಣಗಳಲ್ಲಿ 370 ಚೆಕ್ ಬೌನ್ಸ್ ಪ್ರಕರಣಗಳು, 50 ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, 35 ಕುಟುಂಬದ ಆಸ್ತಿ ವಿಭಜನೆ ಪ್ರಕರಣಗಳು ಹಾಗೂ 23 ಜೀವನಾಂಶ ಪ್ರಕರಣಗಳು ಪ್ರಮುಖವಾಗಿವೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ವಾಣಿಜ್ಯ ಉದ್ದೇಶಕ್ಕೆ ಗೃಹಬಳಕೆಯ LPG ಸಿಲಿಂಡರ್ ಬಳಕೆ ನಿಷೇಧ: ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ
ಇದಲ್ಲದೆ ಕಾರವಾರ, ಅಂಕೋಲಾ, ಹೊನ್ನಾವರ, ಯಲ್ಲಾಪುರ, ಹಳಿಯಾಳ ಹಾಗೂ ದಾಂಡೇಲಿಯ ಒಟ್ಟು 8 ಕೌಟುಂಬಿಕ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದು, ದಂಪತಿಗಳು ಮತ್ತೆ ಒಟ್ಟಾಗಿ ಜೀವನ ನಡೆಸಲು ಒಪ್ಪಿಕೊಂಡಿರುವುದು ಲೋಕ ಅದಾಲತ್‌ನ ವಿಶೇಷ ಸಾಧನೆಯಾಗಿದೆ.
ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ನಡೆಯಲು ಸಹಕರಿಸಿದ ನ್ಯಾಯಾಧೀಶರು, ವಕೀಲರು, ಸರ್ಕಾರಿ ಅಭಿಯೋಜಕರು, ಪೊಲೀಸ್ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿ, ಕಕ್ಷಿದಾರರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಪರಮೇಶ್ವರ ಪ್ರಸನ್ನ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ಅಭಿನಂದನೆ ಸಲ್ಲಿಸಿದ್ದಾರೆ.




