ರಾಮಮಂದಿರ ಕಳ್ಳತನ ಪ್ರಕರಣದ ಎಂಟು ಮಂದಿ ಬಂಧಿತ ಆರೋಪಿಗಳ ಪೈಕಿ ಐವರು ದೇವಾಲಯದಲ್ಲಿ ಎಣಿಕೆ ಪ್ರಕ್ರಿಯೆಯಲ್ಲಿ ರಹಸ್ಯವಾಗಿ ಹಣವನ್ನು ತೆಗೆದು ಅದನ್ನು ತಮ್ಮ ಬಟ್ಟೆ, ಸಾಕ್ಸ್‌ನೊಳಗೆ ಬಚ್ಚಿಟ್ಟುಕೊಳ್ಳುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಸಂಬಂಧ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ತನಿಖೆ ವೇಳೆ ಸಿಸಿಟಿವಿ ಪರಿಶೀಲಿಸಿದಾಗ ಆರೋಪಿಗಳು ಹಣ ಬಚ್ಚಿಟ್ಟುಕೊಳ್ಳುತ್ತಿದ್ದುದ್ದು ಪತ್ತೆಯಾಗಿದೆ.
ಇದನ್ನೂ ಓದಿ: ರಾಮಮಂದಿರ ಲೂಟಿ | ಪ್ರತಿ 45 ದಿನಗಳಿಗೊಮ್ಮೆ ಸಿಸಿಟಿವಿ ದೃಶ್ಯಾವಳಿ ಡಿಲೀಟ್; ತನಿಖೆಯಲ್ಲಿ ಬಹಿರಂಗ
45 ದಿನಗಳಿಗೊಮ್ಮೆ ಸಿಸಿಟಿವಿ ದೃಶ್ಯ ತಾನಾಗಿಯೇ ಅಳಿಸಿಹೋಗುವಂತಹ ತಂತ್ರಜ್ಞಾನವನ್ನು ರಾಮಮಂದಿರದಲ್ಲಿ ಬಳಸಲಾಗುತ್ತಿದೆ. ಆದ್ದರಿಂದ ತನಿಖಾ ತಂಡಕ್ಕೆ ಕಳೆದ 45 ದಿನಗಳ ದೃಶ್ಯಾವಳಿ ಮಾತ್ರ ಪತ್ತೆಯಾಗಿದೆ. ಈ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದಾಗ ಐವರು ಸಿಬ್ಬಂದಿ ಕಂತೆ ಕಂತೆ ನೋಟುಗಳನ್ನು ತೆಗೆದು ತಮ್ಮ ಬಟ್ಟೆ ಅಥವಾ ಸಾಕ್ಸ್‌ಗಳಲ್ಲಿ ಅಡಗಿಸಿಟ್ಟಿರುವುದು ಕಂಡುಬಂದಿದೆ.
“ಈ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಹುಡುಕಾಟ ನಡೆಸಿದಾಗ ಈಗಾಗಲೇ ನಗದು ಪತ್ತೆಯಾಗಿದೆ. ದುರದೃಷ್ಟವಶಾತ್, ದೇವಾಲಯದಲ್ಲಿ 45 ದಿನಗಳಿಗಿಂತ ಹೆಚ್ಚು ಕಾಲದ ಸಿಸಿಟಿವಿ ದೃಶ್ಯಾವಳಿ ಇಲ್ಲ. ಆದ್ದರಿಂದ ಈ ಕಳ್ಳತನ ಎಷ್ಟು ಸಮಯದಿಂದ ನಡೆಯುತ್ತಿದೆ ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ” ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.




