ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಮತ್ತು ಬಣ ರಾಜಕಾರಣ ಈಗ ಮತ್ತೊಂದು ತೀವ್ರ ಸ್ವರೂಪ ಪಡೆದುಕೊಂಡಿದೆ. ಜಾರಿ ನಿರ್ದೇಶನಾಲಯವು (ಇಡಿ) ಹಿರಿಯ ಟಿಎಂಸಿ ಶಾಸಕ ಮದನ್ ಮಿತ್ರಾ ಅವರ ಪತ್ನಿ ಮತ್ತು ಇಬ್ಬರು ಪುತ್ರರಿಗೆ ಸಮನ್ಸ್ ಜಾರಿ ಮಾಡಿದ ಮರುದಿನವೇ ಮದನ್ ಮಿತ್ರಾ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಬಣವನ್ನು ತೊರೆದು ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವನ್ನು ಅಧಿಕೃತವಾಗಿ ಸೇರಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಪುರಸಭೆ ನೇಮಕಾತಿ ಹಗರಣದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜುಲೈ 14ರಂದು ಜಾರಿ ನಿರ್ದೇಶನಾಲಯವು (ಇಒಡಿ) ಮದನ್ ಮಿತ್ರಾ ಅವರ ಪತ್ನಿ ಅರ್ಚನಾ ಮತ್ತು ಇಬ್ಬರು ಪುತ್ರರಾದ ಸ್ವರೂಪ್ ಮತ್ತು ಸುಭ್ರೂಪ್ ಅವರಿಗೆ ಸಮನ್ಸ್ ನೀಡಿತ್ತು. ಜುಲೈ 22 ಮತ್ತು 23 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.
ಇದನ್ನೂ ಓದಿ: ಮೋದಿಯ ಇಂದಿನ ಸುಳ್ಳುಗಳು | ವೋಟ್ ಬ್ಯಾಂಕ್ಗಾಗಿ ಮತುವಾ ಸಮುದಾಯ ಗುರಿಯಾಗಿಸಿದ್ದಾರಾ ಮೋದಿ?
ಇದಾದ ಮರುದಿನವೇ ಕಮರ್ಹಾಟಿ ಕ್ಷೇತ್ರದ ಶಾಸಕರಾದ ಮದನ್ ಮಿತ್ರಾ ಅವರು ಕೋಲ್ಕತ್ತಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಮಮತಾ ಬ್ಯಾನರ್ಜಿ ಬಣದ ಎಲ್ಲ ಪಕ್ಷದ ಸಾಂಸ್ಥಿಕ ಹುದ್ದೆಗಳಿಗೆ ಹಾಗೂ ಮುಖ್ಯ ಸಚೇತಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ತಾವು ಟಿಎಂಸಿ ಶಾಸಕರಾಗಿಯೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಅವರು ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣಕ್ಕೆ ಸೇರ್ಪಡೆಯಾಗಿದ್ದಾರೆ. “ನಾನು ಕೇವಲ ವಿಧಾನಸಭಾ ಕೊಠಡಿಯನ್ನು ಬದಲಾಯಿಸಿದ್ದೇನೆ, ಮನೆಯನ್ನಲ್ಲ” ಎಂದು ಹೇಳಿಕೊಂಡಿದ್ದಾರೆ.
ಹಾಗೆಯೇ ನಾಯಕತ್ವ ಬದಲಾವಣೆ ಮತ್ತು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ನಡೆಗಳ ವಿರುದ್ಧ ಮದನ್ ಮಿತ್ರಾ ಆಕ್ರೋಶ ಹೊರಹಾಕಿದ್ದಾರೆ. “ಆರು ತಿಂಗಳ ಕಾಲ ಪಕ್ಷದ ಜವಾಬ್ದಾರಿಯಿಂದ ದೂರ ಉಳಿಯುವಂತೆ ನಾನು ಅಭಿಷೇಕ್ ಬ್ಯಾನರ್ಜಿಗೆ ಸಲಹೆ ನೀಡಿದ್ದೆ. ಮೊದಲು ಪಕ್ಷವನ್ನು ಪುನರ್ ನಿರ್ಮಿಸೋಣ, ಆಮೇಲೆ ಅಧಿಕಾರ ವಹಿಸಿಕೊಳ್ಳಿ ಎಂದಿದ್ದೆ. ಆದರೆ ಅವರು ಒಪ್ಪಲಿಲ್ಲ. ದೋಣಿ ಈಗಾಗಲೇ ಮುಳುಗುತ್ತಿದೆ, ಜನರು ಸಾಯುತ್ತಿದ್ದಾರೆ. ಆದರೂ ಎಲ್ಲರನ್ನು ಬಲಿ ಕೊಟ್ಟು ಅಭಿಷೇಕ್ನನ್ನು ರಕ್ಷಿಸಲು ಪಕ್ಷ ನಿರ್ಧರಿಸಿದೆ” ಎಂದು ಮದನ್ ಮಿತ್ರಾ ಆರೋಪಿಸಿದ್ದಾರೆ.
“ಅಭಿಷೇಕ್ ಬ್ಯಾನರ್ಜಿ ಅವರು ಹಿಟ್ಲರ್ ತರಹ ವರ್ತಿಸುತ್ತಿದ್ದಾರೆ, ವಿಮಾನದಿಂದ ಇಳಿಯುತ್ತಿದ್ದಂತೆ ಆದೇಶಗಳನ್ನು ನೀಡುತ್ತಾರೆ. ಇಂತಹ ವರ್ತನೆಯಿಂದ ಪಕ್ಷವನ್ನು ಉಳಿಸಲು ಸಾಧ್ಯವಿಲ್ಲ” ಎಂದು ಕಿಡಿಕಾರಿದ್ದಾರೆ. ಆದರೆ ಇಡಿ ಸಮನ್ಸ್ ಬೆನ್ನಲ್ಲೇ ಈ ಬದಲಾವಣೆಯನ್ನು ನೆಟ್ಟಿಗರು ಟೀಕಿಸಿದ್ದಾರೆ.
ಈ ಬೆನ್ನಲ್ಲೇ, “ನನ್ನ ಕುಟುಂಬಕ್ಕೆ ಇಡಿ ಸಮನ್ಸ್ ಜಾರಿಯಾಗಿರುವುದು ನಿಜ. ಅವರು ಸಂಸ್ಥೆಯೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಾರೆ. ಆದರೆ ನನ್ನ ರಾಜಕೀಯ ನಿರ್ಧಾರಕ್ಕೂ, ಇಡಿ ಸಮನ್ಸ್ಗೂ ಯಾವುದೇ ಸಂಬಂಧವಿಲ್ಲ. ನನಗೆ ಇಡಿಗಿಂತ ಅಭಿಷೇಕ್ ಬ್ಯಾನರ್ಜಿ ಅವರ ವರ್ತನೆಯ ಬಗ್ಗೆ ಹೆಚ್ಚು ಭಯವಿದೆ” ಎಂದು ಸಮಜಾಯಿಷಿ ನೀಡಿದ್ದಾರೆ.
ಸೋದರಳಿಯನ ಬೆಂಬಲಕ್ಕೆ ನಿಂತ ಮಮತಾ ಬ್ಯಾನರ್ಜಿ
ಮದನ್ ಮಿತ್ರಾ ಅವರ ಈ ನಿರ್ಧಾರ ಹಾಗೂ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಬೆನ್ನಿಗೆ ಬಲವಾಗಿ ನಿಂತಿದ್ದಾರೆ. ಮದನ್ ಮಿತ್ರಾ ಅವರು ಇಡಿ ತನಿಖೆಯ ‘ಭಯ’ದಿಂದಾಗಿ ಬಣ ಬದಲಾಯಿಸಿದ್ದಾರೆ. ಇಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಕೇವಲ ಒಂದು ನೆಪವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಮಮತಾ ಪ್ರತ್ಯುತ್ತರ ನೀಡಿದ್ದಾರೆ.
ಟಿಎಂಸಿ ಮುಖಂಡರಲ್ಲಿ ಮೂಡಿರುವ ಈ ಬಂಡಾಯಕ್ಕೆ ಬಿಜೆಪಿ ಸರ್ಕಾರದ ಪ್ರಭಾವ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಮೇಲಿನ ಭಯವೇ ಕಾರಣ ಎಂದು ಮಮತಾ ಬ್ಯಾನರ್ಜಿ ಮತ್ತು ಸಂಸದೆ ಮಹುವಾ ಮೊಯಿತ್ರಾ ಅವರ ಬಣ ಪ್ರತಿಪಾದಿಸಿದೆ.




