ಮಧ್ಯಪ್ರದೇಶದ ಇಂದೋರ್ ಮಹಾನಗರ ಪಾಲಿಕೆಯ ಬಜೆಟ್ ಅಧಿವೇಶನದ ವೇಳೆ ‘ವಂದೇ ಮಾತರಂ’ ಹಾಡಲು ಕಾಂಗ್ರೆಸ್‌ನ ಮಹಿಳಾ ಕೌನ್ಸಿಲರ್ ಫೌಝಿಯಾ ಶೇಖ್ ಅಲಿಮ್ ನಿರಾಕರಿಸಿದ್ದಾರೆ. ಆ ಕಾರಣಕ್ಕಾಗಿ, ಅವರನ್ನು ಸದನದಿಂದ ಅಮಾನತುಗೊಳಿಸಲಾಗಿದೆ.
ಬುಧವಾರ, ಪಾಲಿಕೆಯ ಬಜೆಟ್ ಮೇಲಿನ ಚರ್ಚೆ ಆರಂಭವಾಗುವ ಮೊದಲು ವಂದೇ ಮಾತರಂ ಹಾಡುವುದನ್ನು ನಿಗದಿ ಮಾಡಲಾಗಿತ್ತು. ಆದರೆ, ಫೌಝಿಯಾ ಅಲಿಮ್ ಅವರು ‘ವಂದೇ ಮಾತರಂ ಹಾಡಲೇಬೇಕೆಂಬ ಕಡ್ಡಾಯವಿಲ್ಲ. ನಾವು ಹಾಡುವುದಿಲ್ಲ’ ಎಂದು ನಿರಾಕರಿಸಿದರು.
ಅವರ ನಿಲುವನ್ನು ವಿರೋಧಿಸಿದ ಆಡಳಿತಾರೂಢ ಬಿಜೆಪಿ ಕೌನ್ಸಿಲರ್‌ಗಳು, ಅಧ್ಯಕ್ಷರ ಪೀಠದ ಬಳಿ ನುಗ್ಗಿ ಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ, ಸಭಾಧ್ಯಕ್ಷ ಮುನ್ನಾಲಾಲ್ ಯಾದವ್ ಅವರು ಫೌಝಿಯಾ ಅವರನ್ನು ಸದನದಿಂದ ಅಮಾನತು ಮಾಡಿ, ಹೊರಹೋಗುವಂತೆ ಸೂಚಿಸಿದರು.
ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವ ಫೌಝಿಯಾ ಅಲಿಮ್, “ಸಂವಿಧಾನವು ನಮಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ನನ್ನ ಇಸ್ಲಾಮಿಕ್ ನಂಬಿಕೆಗಳ ಪ್ರಕಾರ ನಾನು ಅದನ್ನು ಹಾಡಲು ಸಾಧ್ಯವಿಲ್ಲ. ನನ್ನನ್ನು ಯಾರೂ ಬಲವಂತಪಡಿಸುವಂತಿಲ್ಲ. ನಾನು ರಾಷ್ಟ್ರಗೀತೆಯನ್ನು ಗೌರವಿಸುತ್ತೇನೆ,” ಎಂದು ಹೇಳಿದ್ದಾರೆ.
ಅಲ್ಲದೆ, “ನಗರದ ಕಲುಷಿತ ಕುಡಿಯುವ ನೀರಿನ ಸಮಸ್ಯೆಯಂತಹ ಮೂಲಭೂತ ವಿಷಯಗಳಿಂದ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಈ ವಿವಾದವನ್ನು ಸೃಷ್ಟಿಸಿದೆ” ಎಂದು ಅವರು ಆರೋಪಿಸಿದ್ದಾರೆ.
ವಂದೇ ಮಾತರಂ ಮತ್ತು ವಿವಾದ
ಬಂಕಿಮ ಚಂದ್ರ ಚಟರ್ಜಿ ಬರೆದಿರುವ ವಂದೇ ಮಾತರಂ ಗೀತೆಯ ಪರಿಪೂರ್ಣ ಸಾರವು ಅಲ್ಪಸಂಖ್ಯಾತರ ವಿರುದ್ಧ, ಅದರಲ್ಲೂ ಮುಸ್ಲಿಮರ ವಿರುದ್ಧ ದ್ವೇಷವನ್ನು ಪ್ರಚೋದಿಸುವಂತಿದೆ. ಆದಾಗ್ಯೂ, ಮೊದಲ ಎರಡು ಚರಣಗಳು ಮಾತ್ರ ಭಾರತವನ್ನು ವರ್ಣಿಸುತ್ತದೆ. ಆದ್ದರಿಂದ, ಆ ಎರಡು ಚರಣಗಳನ್ನು ಮಾತ್ರವೇ ‘ರಾಷ್ಟ್ರೀಯ ಗೀತೆ’ಯಾಗಿ ಆರಿಸಿಕೊಳ್ಳಲಿದೆ.
ಆದಾಗ್ಯೂ, ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಎರಡು ಚರಣಗಳು ಮಾತ್ರವಲ್ಲದೆ, ಇಡೀ ಗೀತೆಯನ್ನೇ ರಾಷ್ಟ್ರಾದ್ಯಂತ ಹಾಡಬೇಕೆಂದು ಸುತ್ತೋಲೆ ಹೊರಡಿಸಿದೆ. ಸರ್ಕಾರದ ನಿರ್ಧಾರಕ್ಕೆ ಭಾರೀ ಆಕ್ರೋಶಗಳು ವ್ಯಕ್ತವಾಗಿವೆ. ಆದ್ದರಿಂದ, ಸರ್ಕಾರವು ರಾಷ್ಟ್ರೀಯ ಗೀತೆಯನ್ನು ಹಾಡಬೇಕೆಂಬುದು ಸೂಚನೆಯಷ್ಟೇ, ಕಡ್ಡಾಯವಲ್ಲ ಎಂದೂ ಹೇಳಿಕೊಂಡಿದೆ.
ಈ ಲೇಖನ ಓದಿದ್ದೀರಾ?: ‘ವಂದೇ ಮಾತರಂ’ ಸುತ್ತೋಲೆ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್!
ಆದ್ದರಿಂದಲೇ, ಸುಪ್ರೀಂ ಕೋರ್ಟ್ ಕೂಡ ವಂದೇ ಮಾತರಂ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ. “ಯಾವುದೇ ವ್ಯಕ್ತಿಯನ್ನು ಅವರ ಇಚ್ಛೆಗೆ ವಿರುದ್ಧವಾಗಿ ವಂದೇ ಮಾತರಂಅನ್ನು ಹಾಡುವಂತೆ ಒತ್ತಾಯಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಕಡ್ಡಾಯವಾಗಿ ಹಾಡಲೇಬೇಕೆಂದು ಯಾರಾದರೂ ಒತ್ತಡ ಹಾಕಿದರೆ ಅಥವಾ ಹಾಡದಿದ್ದ ಕಾರಣಕ್ಕೆ ಕ್ರಮ ಕೈಗೊಂಡರೆ, ಆಗ ನಮ್ಮ ಬಳಿ ಬನ್ನಿ” ಎಂದೂ ಹೇಳಿತ್ತು.
ಆದರೆ, ಇದೀಗ, ವಂದೇ ಮಾತರಂ ಹಾಡದ ಕಾರಣಕ್ಕಾಗಿ ಪ್ರಜಾಪ್ರತಿನಿಧಿಗಳ ಪಾಲಿಕೆಯಲ್ಲಿಯೇ ಕೌನ್ಸಿಲರ್‌ವೊಬ್ಬರನ್ನು ಅಮಾನತು ಮಾಡಲಾಗಿದೆ. ಬಲವಂತದ ಕ್ರಮ ಕೈಗೊಳ್ಳಲಾಗಿದೆ.



