ಶಾಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಂದೇ ಮಾತರಂ ಹಾಡುವ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿರುವ ಸರ್ಕಾರದ ಸುತ್ತೋಲೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅರ್ಜಿಯನ್ನು ವಜಾಗೊಳಿಸಿದೆ.
ವಂದೇ ಮಾತರಂ ಕುರಿತು ಕೇಂದ್ರ ಸರ್ಕಾರದ ಸುತ್ತೋಲೆಯನ್ನು ಪ್ರಶ್ನಿಸಿ ಮುಹಮ್ಮದ್ ಸಯೀದ್ ನೂರಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಂಚೋಲಿ ಅವರಿದ್ದ ಪೀಠವು ವಜಾಗೊಳಿಸಿದೆ. “ಅರ್ಜಿಯು ‘ಅಕಾಲಿಕ’ವಾಗಿದ್ದು, ‘ತಾರತಮ್ಯದ ಅಸ್ಪಷ್ಟ ಆತಂಕ’ವನ್ನು ಆಧಾರಿಸಿದೆ. ಈ ಸುತ್ತೋಲೆಯಿಂದ ನಿಮ್ಮ ವಿರುದ್ಧ ತಾರತಮ್ಯ ನಡೆದಾಗ ದಯವಿಟ್ಟು ನಮ್ಮ ಬಳಿ ಬನ್ನಿ” ಎಂದು ಪೀಠವು ಹೇಳಿದೆ.
“ಈ ಸುತ್ತೋಲೆಯು ಕೇವಲ ಸಲಹಾ ಸ್ವರೂಪದ್ದಾಗಿದೆ. ಇದನ್ನು ಪಾಲಿಸಲೇಬೇಕು ಎಂಬ ಯಾವುದೇ ಒತ್ತಡವಿಲ್ಲ. ಇದು ಕೇವಲ ಒಂದು ಶಿಷ್ಟಾಚಾರ. ಇದಕ್ಕೆ ಯಾವುದೇ ಕ್ರಿಮಿನಲ್ ಪರಿಣಾಮಗಳಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಅರ್ಜಿದಾರ ನೂರಿ ಪರ ಹಾಜರಾದ ಹಿರಿಯ ವಕೀಲ ಸಂಜಯ್ ಹೆಗ್ಡೆ, “ನಾವು ದೇಶದ ಪ್ರತಿಯೊಂದು ಧರ್ಮವನ್ನು ಗೌರವಿಸುತ್ತೇವೆ. ಆದರೆ, ಅವರ ಧರ್ಮ ಮತ್ತು ನಂಬಿಕೆಯನ್ನು ಲೆಕ್ಕಿಸದೆ ಹಾಡನ್ನು ಹಾಡಲು ಜನರನ್ನು ಒತ್ತಾಯಿಸುವುದು, ‘ನಿಷ್ಠೆಯ ಸಾಮಾಜಿಕ ಪ್ರದರ್ಶನ’ದಲ್ಲಿ ಭಾಗವಹಿಸುವಂತೆ ಮಾಡಿದ ಒತ್ತಡವಾಗುತ್ತದೆ” ಎಂದು ವಿವರಿಸಿದ್ದಾರೆ.
“ರಾಷ್ಟ್ರಗೀತೆ (ಜನ ಗಣ ಮನ) ಮತ್ತು ರಾಷ್ಟ್ರೀಯ ಗೀತೆ (ವಂದೇ ಮಾತರಂ) ನಡುವೆ ವ್ಯತ್ಯಾಸವಿದೆ. ಸಂವಿಧಾನವು ಎರಡನ್ನೂ ಒಂದೇ ಮಟ್ಟದಲ್ಲಿ ಇರಿಸಿಲ್ಲ. ಗೃಹ ಸಚಿವಾಲಯದ ಸುತ್ತೋಲೆಯ ಪ್ರಕಾರ, ರಾಷ್ಟ್ರಗೀತೆಗಿಂತ ಮೊದಲು ರಾಷ್ಟ್ರೀಯ ಗೀತೆಯನ್ನು ಹಾಡಬೇಕು. ಮೂರು ನಿಮಿಷಗಳ ರಾಷ್ಟ್ರೀಯ ಗೀತೆಯು ಚಿಕ್ಕದಾದ ರಾಷ್ಟ್ರಗೀತೆಯನ್ನು ಮರೆಮಾಚಬಹುದು” ಎಂದು ವಕೀಲ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.
ಅವರ ವಾದಕ್ಕೆ ಪ್ರತಿಕ್ರಿಯಿಸಿದ ಪೀಠವು, “ನಿಮ್ಮ ಅಕಾಡೆಮಿಯಲ್ಲಿ ಕಡ್ಡಾಯವಾಗಿ ವಂದೇ ಮಾತರಂ ಹಾಡಬೇಕೆಂದು ಯಾರೂ ನಿಮಗೆ ಕೇಳಿಲ್ಲ. ಇದರಿಂದ ಯಾವುದೇ ಪ್ರತಿಕೂಲ ಪರಿಣಾಮಗಳಿಲ್ಲ. ಒಂದು ವೇಳೆ ನೀವು ಶಿಕ್ಷಾರ್ಹ ಕ್ರಮವನ್ನು ಎದುರಿಸಿದರೆ, ನ್ಯಾಯಾಲಯಕ್ಕೆ ಬರುವ ಹಕ್ಕು ನಿಮಗಿದೆ. ಅಂತಹ ಯಾವುದೇ ಪರಿಸ್ಥಿತಿ ಇನ್ನೂ ಉದ್ಭವಿಸಿಲ್ಲ” ಎಂದು ಪೀಠವು ಹೇಳಿದೆ.
ನ್ಯಾಯಮೂರ್ತಿ ಬಾಗ್ಚಿ ಅವರು, ರಾಷ್ಟ್ರೀಯ ಗೀತೆಯನ್ನು ಹಾಡದಿದ್ದಕ್ಕಾಗಿ ಸುತ್ತೋಲೆಯಲ್ಲಿ ಯಾವುದೇ ಶಿಕ್ಷಾರ್ಹ ಪರಿಣಾಮಗಳನ್ನು ನಿರ್ದಿಷ್ಟಪಡಿಸಲಾಗಿದೆಯೇ ಅಥವಾ ಹಾಡದ ಕಾರಣಕ್ಕಾಗಿ ಯಾವುದೇ ವ್ಯಕ್ತಿಯನ್ನು ಸಭೆಯಿಂದ ಹೊರಹಾಕಲಾಗಿದೆಯೇ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ವಕೀಲರು, “ಅಡ್ಡಿಪಡಿಸಿದ ಸಂದರ್ಭದಲ್ಲಿ ದಂಡ ವಿಧಿಸಲಾಗುತ್ತದೆ. ಯಾವುದೇ ಕಾನೂನು ನಿರ್ಬಂಧಗಳಿಲ್ಲದಿದ್ದರೂ, ಹಾಡಲು ಅಥವಾ ಎದ್ದು ನಿಲ್ಲಲು ನಿರಾಕರಿಸುವ ವ್ಯಕ್ತಿಯ ಮೇಲೆ ಯಾವಾಗಲೂ ದೊಡ್ಡ ಹೊರೆ ಇರುತ್ತದೆ. ಸಲಹೆಯ ನೆಪದಲ್ಲಿ ಜನರನ್ನು ಹಾಡು ಹಾಡಲು ಒತ್ತಾಯಿಸಬಹುದೇ” ಎಂದು ಪ್ರಶ್ನಿಸಿದರು.
ಈ ಲೇಖನವನ್ನು ಓದಿದ್ದೀರಾ?: ವಂದೇ ಮಾತರಂ ಕಡ್ಡಾಯದ ಹಿಂದಿರುವುದು ದೇಶಭಕ್ತಿಯಲ್ಲ, ಪಶ್ಚಿಮ ಬಂಗಾಳ ಗೆಲ್ಲುವುದು!
ಮುಖ್ಯ ನ್ಯಾಯಮೂರ್ತಿ ಕಾಂತ್ ಅವರು, ವಂದೇ ಮಾತರಂ ಗೀತೆಯನ್ನು ಹಾಡುವಂತೆ ಒತ್ತಾಯಿಸಿ ಅರ್ಜಿದಾರರಿಗೆ ಯಾವುದೇ ನೋಟಿಸ್ ಕಳುಹಿಸಲಾಗಿದೆಯೇ ಎಂದು ಮರುಪ್ರಶ್ನೆ ಕೇಳಿದರು. “ಕೇಂದ್ರ ಸರ್ಕಾರದ ನಿರ್ದೇಶನದ 5ನೇ ಕಲಮು ‘ಇರಬಹುದು’ (may) ಎಂದು ಹೇಳುತ್ತದೆ. ಈ ಸ್ವಾತಂತ್ರ್ಯವು ರಾಷ್ಟ್ರೀಯ ಗೀತೆಯನ್ನು ಹಾಡುವುದಕ್ಕೂ ಇದೆ ಮತ್ತು ಹಾಡದಿರುವುದಕ್ಕೂ ಇದೆ. ಆದ್ದರಿಂದ, ಇದು ಕಾನೂನು ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ” ಎಂದು ಪೀಠ ಹೇಳಿತು.
“ಯಾವುದೇ ತಾರತಮ್ಯ ಸಂಭವಿಸಿದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಬಹುದು. ಕೇವಲ ಸಲಹೆಯು ಉಲ್ಲಂಘನೆಯೇ? ನಿಮಗೆ ಕೆಲವು ಅಸ್ಪಷ್ಟ ಆತಂಕಗಳಿವೆ” ಎಂದು ಪೀಠ ಹೇಳಿದೆ. ಯಾವುದೇ ನಿರ್ದಿಷ್ಟ ಹಾನಿ ಇಲ್ಲದಿರುವಾಗ ಈ ಅರ್ಜಿಯನ್ನು ಅಕಾಲಿಕವೆಂದು ಪರಿಗಣಿಸಬೇಕಾಗುತ್ತದೆ ಎಂದು ಹೇಳಿ, ಅರ್ಜಿಯನ್ನು ತಿರಸ್ಕರಿಸಿತು.



