ಪಶ್ಚಿಮ ಬಂಗಾಳದ ಸೋನಾರ್ಪುರದಲ್ಲಿ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿ ನಡೆದಿದೆ. ಈ ದಾಳಿಯನ್ನು ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದಾರೆ. ಈ ಘಟನೆಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಚುನಾವಣಾ ನಂತರದ ಹಿಂಸಾಚಾರಕ್ಕೆ ಬಲಿಯಾದವರ ಕುಟುಂಬಗಳನ್ನು ಭೇಟಿ ಮಾಡಲು ದಕ್ಷಿಣ 24-ಪರಗಣಗಳ ಸೋನಾರ್ಪುರಕ್ಕೆ ಅಭಿಷೇಕ್ ಬ್ಯಾನರ್ಜಿ ತೆರಳಿದ್ದರು. ಈ ವೇಳೆ ಅವರ ಮೇಲೆ ದಾಳಿ ನಡೆದಿದೆ. ಅಪರಿಚಿತರು ಸಂಸದರ ಮೇಲೆ ಕಲ್ಲುಗಳು, ಬೂಟುಗಳು ಮತ್ತು ಮೊಟ್ಟೆಗಳನ್ನು ಎಸೆದಿದ್ದಾರೆ. ಅದೇ ಸಮಯದಲ್ಲಿ ‘ಕಳ್ಳ, ಕಳ್ಳ’ ಎಂದು ಘೋಷಣೆ ಕೂಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್ಗೆ ಮತ ಹಾಕಿದರೆ ಮತ ವಿಭಜನೆಯಾಗಿ ಬಿಜೆಪಿಗೆ ಲಾಭವಾಗುತ್ತದೆ: ಅಭಿಷೇಕ್ ಬ್ಯಾನರ್ಜಿ
ಈ ಘಟನೆಯನ್ನು ಖಂಡಿಸಿ ಮಮತಾ ಬ್ಯಾನರ್ಜಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ಆಡಳಿತಗಾರರು ಕೊಲೆಗಾರರಾದರು – ಬಿಜೆಪಿಗರಿಗೆ ನಾಚಿಕೆಯಾಗಬೇಕು” ಎಂದು ಪೋಸ್ಟ್ ಮಾಡಿದ್ದಾರೆ. ಈ ಪ್ರತಿಭಟನೆಯು ರಾಜಕೀಯ ಪ್ರೇರಿತವಾಗಿದೆ ಎಂದು ಟಿಎಂಸಿ ನಾಯಕರು ಆರೋಪಿಸಿದ್ದಾರೆ. ಬ್ಯಾನರ್ಜಿ ಸಂತ್ರಸ್ತರನ್ನು ಭೇಟಿಯಾಗುವುದನ್ನು ತಡೆಯಲು ಬಿಜೆಪಿ ದಾಳಿಯನ್ನು ರೂಪಿಸಿದೆ ಎಂದು ಆರೋಪಿಸಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಯನ್ನು ಕಾಂಗ್ರೆಸ್ ಕೂಡಾ ತೀವ್ರವಾಗಿ ಖಂಡಿಸಿದೆ. ವಿರೋಧ ಪಕ್ಷದ ನಾಯಕರಿಗೆ ಉದ್ದೇಶಪೂರ್ವಕವಾಗಿ ಪೊಲೀಸ್ ರಕ್ಷಣೆ ನೀಡದಿರುವುದು ಬಿಜೆಪಿಯ ಪ್ರತೀಕಾರ ಮತ್ತು ಕಿರುಕುಳ ರಾಜಕೀಯ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪೋಸ್ಟ್ ಮಾಡಿದ್ದು, “ರಾಜ್ಯದಲ್ಲಿ ಚುನಾವಣಾ ನಂತರದ ಹಿಂಸಾಚಾರದಿಂದ ಹಾನಿಗೊಳಗಾದ ಕುಟುಂಬಗಳನ್ನು ಭೇಟಿ ಮಾಡಲು ಹೋದಾಗ ಸೋನಾರ್ಪುರದಲ್ಲಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನಡೆದ ಆಘಾತಕಾರಿ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ” ಎಂದಿದ್ದಾರೆ.
“ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಎಲ್ಲ ವಿರೋಧ ಪಕ್ಷದ ನಾಯಕರಿಗೆ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು. ಅಂತಹ ದಾಳಿಗಳನ್ನು ತಡೆಯಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಾಜಕೀಯ ಭಿನ್ನಾಭಿಪ್ರಾಯದ ಕಾರಣಕ್ಕೆ ಯಾವುದೇ ರೀತಿಯ ಹಿಂಸಾಚಾರವನ್ನು ಸಮರ್ಥಿಸಲಾಗದು” ಎಂದು ಹೇಳಿದ್ದಾರೆ.
ಇನ್ನು ಬ್ಯಾನರ್ಜಿ ಮೇಲಿನ “ಆಘಾತಕಾರಿ ದಾಳಿ” ಅತ್ಯಂತ ಖಂಡನೀಯ ಮತ್ತು “ಬಿಜೆಪಿಯ ದ್ವೇಷ ಮತ್ತು ಹಿಂಸಾಚಾರದ ರಾಜಕೀಯ” ದ ಸ್ಪಷ್ಟ ಉದಾಹರಣೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ. “ಉದ್ದೇಶಪೂರ್ವಕಾಗಿ ಭದ್ರತೆ ಹಿಂಪಡೆಯಲಾಗಿದೆ. ವಿಪಕ್ಷ ನಾಯಕರುಗಳು ತಮ್ಮ ಕಾರ್ಯವನ್ನು ನಡೆಸಲು ಅವಕಾಶ ನೀಡಬೇಕು. ರಾಜಕೀಯ ಪೈಪೋಟಿಯಲ್ಲಿ ಹಿಂಸಾಚಾರ ಎಂದಿಗೂ ಮಾರ್ಗವಾಗಬಾರದು” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ವಿಪ್ ಮಾಣಿಕಮ್ ಟ್ಯಾಗೋರ್ ಅವರು ಬ್ಯಾನರ್ಜಿ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಎಕ್ಸ್ನಲ್ಲೂ ಪೋಸ್ಟ್ ಮಾಡಿದ್ದಾರೆ.
ಇನ್ನು ತಮ್ಮ ಮೇಲಿನ ದಾಳಿಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬ್ಯಾನರ್ಜಿ, “ನೋಡಿ ನನಗೆ ಏನು ಮಾಡಿದ್ದಾರೆಂದು. ಇವೆಲ್ಲವೂ ಪೂರ್ವ ಯೋಜಿತ. ಈ ಪ್ರದೇಶದಲ್ಲಿ ಪೊಲೀಸರಿಲ್ಲ. ನನ್ನ ಕೊಲೆ ಮಾಡುವ ಉದ್ದೇಶ ಅವರಲ್ಲಿತ್ತು. ಪೊಲೀಸರು ತಮ್ಮ ಪಡೆಯನ್ನು ಕಳುಹಿಸಿ ಸಂತ್ರಸ್ತರ ಕುಟುಂಬಗಳಿಗೆ ರಕ್ಷಣೆ ನೀಡುವವರೆಗೆ ನಾನು ಈ ಸ್ಥಳ ಬಿಟ್ಟು ಹೋಗಲ್ಲ” ಎಂದು ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರಕ್ಕೆ ಒಳಗಾದವರ ಸಂಬಂಧಿಕರನ್ನು ಭೇಟಿಯಾದಾಗ ಹೇಳಿದ್ದಾರೆ. ಈ ನಡುವೆ ಬಿಜೆಪಿ ಇದು ಸ್ಥಳೀಯರ ಆಕ್ರೋಶ ಎಂದಷ್ಟೇ ಹೇಳಿದೆ.




