ಉದ್ರಿಕ್ತ ಗುಂಪಿಗೆ ಮಹಿಳೆಯರನ್ನು ಪೊಲೀಸರೇ ಒಪ್ಪಿಸಿದ್ರು: ಮಣಿಪುರ ದುರಂತ ಕುರಿತು ಸಿಬಿಐ ಚಾರ್ಜ್‌ಶೀಟ್‌

Date:

2023ರ ಜುಲೈನಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಸಿದ್ದಪಡಿಸಿರುವ ಚಾರ್ಜ್‌ಶೀಟ್‌ ಈಗ ಬಹಿರಂಗವಾಗಿದೆ.

ಕುಕಿ ಮತ್ತು ಮೈತೇಯಿ ಜನಾಂಗಗಳ ನಡುವೆ ಮೇ 3ರಂದು ಆರಂಭವಾದ ಕಲಹದಿಂದಾಗಿ ಮಣಿಪುರ ಪ್ರಕ್ಷುಬ್ಧಗೊಂಡಿತು. ಕುಕಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೈತೇಯಿ ದುಷ್ಕರ್ಮಿಗಳ ಗುಂಪು ಭೀಕರವಾಗಿ ಕಿರುಕುಳ ನೀಡಿದ್ದು ಎರಡೂವರೆ ತಿಂಗಳ ಬಳಿಕ ಬಹಿರಂಗವಾಗಿತ್ತು. ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿಯವರು, “ಇಂತಹ ಘಟನೆ ಛತ್ತೀಸ್‌ ಗಡ, ರಾಜಸ್ಥಾನ ಅಥವಾ ದೇಶದ ಯಾವುದೇ ಮೂಲೆಯಲ್ಲಿ ನಡೆದರೂ ಸಹಿಸುವುದಿಲ್ಲ” ಎಂದಿದ್ದರು (ಆ ವೇಳೆ ಛತ್ತೀಸ್‌ಗಡ, ರಾಜಸ್ಥಾನದಲ್ಲಿ ಕಾಂಗ್ರೆಸ್‌ ಅಧಿಕಾರದತ್ತಿತ್ತು).

ಇಡೀ ಜಗತ್ತು ಮಣಿಪುರದತ್ತ ನೋಡಲು ಕಾರಣವಾಗಿದ್ದ ಈ ಘಟನೆಗೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಚಾರ್ಜ್ ಶೀಟ್‌, ಹಲವು ಆತಂಕಕಾರಿ ಮಾಹಿತಿಗಳನ್ನು ಹೊರಗೆಡವಿದೆ. ಮಣಿಪುರಿ ಪೊಲೀಸರೇ ಗಲಭೆಕೋರ ಗುಂಪಿಗೆ ಸಂತ್ರಸ್ತರನ್ನು ಹಿಡಿದುಕೊಟ್ಟಿರುವುದು ಎದೆಕಲಕುವ ಸಂಗತಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸುಮಾರು ಸಾವಿರ ಜನವಿದ್ದ ಮೈತೇಯಿ ಗಲಭೆಕೋರ ಗುಂಪಿನತ್ತ ಕುಕಿ ಸಂತ್ರಸ್ತ ಮಹಿಳೆಯರನ್ನು ಪೊಲೀಸರೇ ಎಳೆದು ತಂದಿರುವುದಾಗಿ ಚಾರ್ಜ್ ಶೀಟ್‌ ಹೇಳುತ್ತಿದೆ. 2023ರ ಅಕ್ಟೋಬರ್‌ನಲ್ಲಿ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದ್ದರೂ ಇತ್ತೀಚೆಗಷ್ಟೇ ಸಾರ್ವಜನಿಕವಾಗಿ ಲಭ್ಯವಾಗಿದೆ.

ಅಂದು ಏನಾಯಿತು? ಚಾರ್ಜ್ ಶೀಟ್ ಹೇಳುವುದೇನು?

ಕಾಂಗ್‌ಪೊಪ್ಕಿ ಜಿಲ್ಲೆಯ ಸೈಕೂಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಗ್ರಾಮದ ಮೇಲೆ ಮೇ 4ರಂದು ಉದ್ರಿಕ್ತ ಮೈತೇಯಿ ಗುಂಪು ದಾಳಿ ನಡೆಸುತ್ತದೆ. ಸುಮಾರು 900ರಿಂದ 1000 ಜನರು ಗುಂಪಿನಲ್ಲಿದ್ದರು. ವಿಡಿಯೊದಲ್ಲಿ ಸೆರೆಯಾಗಿದ್ದ ಇಬ್ಬರು ಸಂತ್ರಸ್ತೆಯರು, ಈ ಗುಂಪಿಗೆ ಸಿಗದಂತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ದಾಳಿಕೋರರ ಬಳಿ ಎಕೆ ರೈಫಲ್ಸ್‌, ಎಸ್‌ಎಲ್‌ಆರ್‌, ಐಎನ್‌ಎಸ್‌ಎಎಸ್‌ ಮತ್ತು 303 ರೈಫಲ್ಸ್‌ಗಳು ಇದ್ದವು.

ಮೂವರು ಮಹಿಳೆಯರು ಮತ್ತು ಇತರ ಏಳು ಮಂದಿಯು ತಮ್ಮ ಜೀವ ಉಳಿಸಿಕೊಳ್ಳುವುದಕ್ಕಾಗಿ ಹತ್ತಿರದ ಹಾಕ್‌ಹಾಂಗ್‌ಚಿಂಗ್ ಅರಣ್ಯಕ್ಕೆ ಓಡಿ ಹೋಗುತ್ತಾರೆ. ಆದರೆ ಮೈತೇಯಿ ಗುಂಪು ಇವರನ್ನು ಪತ್ತೆ ಹಚ್ಚಿತ್ತು (ಎನ್‌ಡಿಟಿವಿ ವರದಿ).

ಒಂದು ಕುಟುಂಬದ ಸದಸ್ಯರು ಅವಿತಿರುವ ಸ್ಥಳವನ್ನು ಕಂಡ ಗುಂಪು, “ಇಲ್ಲಿದ್ದಾರೆ, ಇಲ್ಲಿದ್ದಾರೆ” ಅಂತ ಕೂಗುತ್ತದೆ. ಕೈಯಲ್ಲಿ ದೊಡ್ಡದೊಡ್ಡ ಕೊಡಲಿಯೊಂದಿಗೆ ಜನರು ಧಾವಿಸುತ್ತಾರೆ. “ಚೂರಾಚಾಂದ್ಪುರದಲ್ಲಿ ನೀವು ನಮ್ಮನ್ನು (ಅಂದರೆ ಮೈತೇಯಿ ಜನರನ್ನು) ಹೇಗೆ ನಡೆಸಿಕೊಂಡಿದ್ದೀರಿ, ನಾವು ನಿಮಗೆ ಅದೇ ರೀತಿ ಮಾಡುತ್ತೇವೆ” ಎಂದು ಬೆದರಿಕೆ ಹಾಕುತ್ತಾರೆ. (ಚೂರಾಚಾಂದ್ಪುರ ಜಿಲ್ಲೆಯಲ್ಲಿ ಕುಕಿಗಳ ಪ್ರಾಬಲ್ಯವಿದೆ.)

ಅಡಗಿ ಕೂತಿದ್ದವರನ್ನು ಮುಖ್ಯ ರಸ್ತೆಗೆ ಎಳೆತಂದ ನಂತರ, ಕುಟುಂಬ ಸದಸ್ಯರನ್ನು ಪ್ರತ್ಯೇಕಿಸಲಾಗುತ್ತದೆ. ಒಬ್ಬ ಮಹಿಳೆ ಮತ್ತು ಆಕೆಯ ಮೊಮ್ಮಗಳನ್ನು ಒಂದು ದಿಕ್ಕಿನಲ್ಲಿ ಕರೆದೊಯ್ಯುತ್ತದೆ. ಗ್ರಾಮದ ಮುಖ್ಯಸ್ಥ, ಇಬ್ಬರು ಮಹಿಳೆಯರು ಮತ್ತು ಅವರ ತಂದೆ- ಇಷ್ಟು ಜನರನ್ನು ಒಂದು ಕಡೆ ಎಳೆದೊಯ್ಯಲಾಗುತ್ತದೆ. ಮತ್ತೊಂದು ದಿಕ್ಕಿಗೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಗಂಡಸರನ್ನು ಎಳೆದುಕೊಂಡು ಹೋಗಲಾಗುತ್ತದೆ.

ಹತ್ತಿರದ ಹಳ್ಳಿಯ ಜನರು ಉದ್ರಿಕ್ತ ಗುಂಪಿನೊಂದಿಗೆ ಸೇರಿಕೊಂಡು ಸಂತ್ರಸ್ತರನ್ನು ಥಳಿಸಲು ಪ್ರಾರಂಭಿಸುತ್ತಾರೆ. ಗಲಭೆಕೋರರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ.

ಈ ವೇಳೆ ಮೈತೇಯಿ ಗುಂಪಿನಲ್ಲಿದ್ದ ಕೆಲವರು, “ಗ್ರಾಮದ ರಸ್ತೆಬದಿಯಲ್ಲಿ ಜೀಪ್‌ ನಿಲ್ಲಿಸಿಕೊಂಡು ನಿಂತಿರುವ ಪೊಲೀಸರನ್ನು ಬೇಗನೆ ಸಂಪರ್ಕಿಸಿ” ಎಂದು ಸಲಹೆ ನೀಡುತ್ತಾರೆ.

“ಪೊಲೀಸರು ಸಮೀಪಿಸುತ್ತಿರುವಾಗ, ಉದ್ರಿಕ್ತ ಗುಂಪು ಮತ್ತೆ ಸಂತ್ರಸ್ತರನ್ನು ಪ್ರತ್ಯೇಕಿಸುತ್ತದೆ. ಇಬ್ಬರು ಮಹಿಳೆಯರು ಪೊಲೀಸ್ ಜೀಪಿನೊಳಗೆ ಸೇರಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಚಾಲಕನೊಂದಿಗೆ ಇಬ್ಬರು ಪೊಲೀಸರು ಜೀಪಿನಲ್ಲಿ ಇರುತ್ತಾರೆ. ಮೂರರಿಂದ ನಾಲ್ವರು ಪೊಲೀಸರು ಹೊರಗೆ ಇದ್ದರು” ಎಂದು ಆರೋಪಪಟ್ಟಿ ಉಲ್ಲೇಖಿಸಿದೆ.

ಕಾರಿನೊಳಗೆ ಬಂದು ಸೇರಿಕೊಂಡ ಸಂತ್ರಸ್ತ ಪುರುಷರೊಬ್ಬರು, ಪೊಲೀಸ್ ಚಾಲಕನಲ್ಲಿ ಅಂಗಲಾಚುತ್ತಾ, ಗಾಡಿಯನ್ನು ಚಾಲೂ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುವಂತೆ ಕೋರುತ್ತಾರೆ.  ಆದರೆ ನನ್ನ ಬಳಿ ಕೀ ಇಲ್ಲ ಎಂದು ಚಾಲಕ ಉತ್ತರಿಸುತ್ತಾನೆ.

“ತಮಗೆ ಸಹಾಯ ಮಾಡಲು ಮತ್ತು ಗುಂಪು ಹಲ್ಲೆಗೊಳಗಾದ ವ್ಯಕ್ತಿಯನ್ನು ರಕ್ಷಿಸಲು ಸಂತ್ರಸ್ತರು ಪದೇ ಪದೇ ಪೊಲೀಸರನ್ನು ಬೇಡಿಕೊಳ್ಳುತ್ತಿದ್ದರು, ಆದರೆ ಪೊಲೀಸರು ಸಹಾಯ ಮಾಡಲಿಲ್ಲ” ಎಂದು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ವರದಿ ಮಾಡಿದೆ.

ಕೆಲವು ಕ್ಷಣಗಳ ನಂತರ ಜೀಪಿನ ಚಾಲಕ ಗಾಡಿಯನ್ನು ಚಾಲೂ ಮಾಡಿ, ಸುಮಾರು 1,000 ಜನರಿರುವ ಉದ್ರಿಕ್ತ ಗುಂಪಿನತ್ತ ತಂದು ನಿಲ್ಲಿಸುತ್ತಾನೆ. ಕಾರಿನಲ್ಲಿದ್ದ ವ್ಯಕ್ತಿಯು, ಎಷ್ಟು ಕೇಳಿಕೊಂಡರೂ ಪೊಲೀಸರು ಸ್ಪಂದಿಸುವುದಿಲ್ಲ. ಮೌನವಾಗಿರುವಂತೆ ಎಚ್ಚರಿಸುತ್ತಾರೆ.

ಒಬ್ಬ ಪೋಲೀಸ್ ಬಂದು ತನ್ನ ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತಾ, “ಗುಂಪು ಹಲ್ಲೆಗೊಳಗಾದ ವ್ಯಕ್ತಿ ಉಸಿರಾಡುತ್ತಿಲ್ಲ” ಎಂದು ತಿಳಿಸುತ್ತಾನೆ. ಒಬ್ಬನನ್ನು ಹೊಡೆದು ಸಾಯಿಸಿರುವುದು ಸ್ಪಷ್ಟವಾಗುತ್ತದೆ.

ಜನರ ಗುಂಪು ಪೊಲೀಸ್ ಜೀಪಿನತ್ತ ಧಾವಿಸುತ್ತದೆ. ಜೀಪನ್ನು ಅಲ್ಲಾಡಿಸಿ, ಒಳಗಿದ್ದ ಪುರುಷ ಮತ್ತು ಇಬ್ಬರು ಮಹಿಳೆಯರನ್ನು ಹೊರಗೆ ಎಳೆದು ತರಲಾಯಿತು. ಆಗ ಪೊಲೀಸ್ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿ, ಸಂತ್ರಸ್ತರನ್ನು ಗುಂಪಿನ ಕೈಗೆ ಒಪ್ಪಿಸಿದ್ದರು.

“ಗುಂಪಿನಲ್ಲಿದ್ದವರು ಸಂತ್ರಸ್ತ ಮಹಿಳೆಯರಿಬ್ಬರ ಬಟ್ಟೆಗಳನ್ನು ಹರಿದು ಜೊತೆಯಲ್ಲಿದ್ದ ಗಂಡಸಿನ ಮೇಲೆ ಥಳಿಸಲು ಪ್ರಾರಂಭಿಸಿದರು. ಬಳಿಕ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು” ಎಂದು ಆರೋಪಪಟ್ಟಿ ಹೇಳಿದೆ.

ಗಲಭೆಕೋರರು ಅದೇ ಕುಟುಂಬದ ಮೂರನೇ ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿತು. ಆಕೆಯ ಬಟ್ಟೆಗಳನ್ನು ಹರಿದು ಹಾಕಲು ಯತ್ನಿಸಿದರು. ಆದರೆ ಆ ಮಹಿಳೆ ತನ್ನ ಚಿಕ್ಕ ಮೊಮ್ಮಗಳನ್ನು ಬಿಗಿಯಾಗಿ ಅಪ್ಪಿ ಹಿಡಿದಿದ್ದರಿಂದ ಬಟ್ಟೆಯನ್ನು ಹರಿದುಹಾಕುವ ಯತ್ನ ವಿಫಲವಾಯಿತು ಎಂದು ಆರೋಪಪಟ್ಟಿ ವಿವರಿಸಿದೆ.

ಆರೋಪಿಗಳು: ಹುಯಿರೆಮ್ ಹೆರೋದಾಶ್ ಮೈತೇಯಿ (32), ಅರುಣ್ ಖುಂಡೊಂಗ್‌ಬಾಮ್ ಅಲಿಯಾಸ್ ನಾನೋ (31), ನಿಂಗೋಂಬಮ್ ಟೊಂಬಾ ಸಿಂಗ್ ಅಲಿಯಾಸ್ ತೋಮ್‌ಥಿನ್ (18), ಸುರಂಜೋಯ್ ಮೈತೇಯಿ (24), ನಮೀರಕ್‌ಪಂ ಕಿರಾಮ್ ಮೈತೆ (30) ಮತ್ತು ಒಬ್ಬ ಬಾಲಾಪರಾಧಿ.

ಆರೋಪಗಳು: ಸಾಮೂಹಿಕ ಅತ್ಯಾಚಾರ, ಕೊಲೆ, ಮಹಿಳೆಯ ನಮ್ರತೆಯ ಮೇಲೆ ದೌರ್ಜನ್ಯ, ಕ್ರಿಮಿನಲ್ ಪಿತೂರಿ ಮತ್ತು ಇತರ ಆರೋಪಗಳು. ಐಪಿಸಿ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲು.

ಇಬ್ಬರು ಸಂತ್ರಸ್ತೆಯರು ಗುರುತಿಸಿರುವ ಇತರ ಮೂವರು ಆರೋಪಿಗಳು ತಲೆಮರೆಸಿಕೊಂಡಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ.

ಜನಾಂಗ, ಧರ್ಮ ಇತ್ಯಾದಿಗಳ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲಾಗಿದೆ. ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಮಣಿಪುರ ಸರ್ಕಾರದ ಅನುಮತಿಗಾಗಿ ಸಿಬಿಐ ಕಾಯುತ್ತಿದೆ.

ಈಗ ಮಂಜೂರಾತಿ ನೀಡಲಾಗಿದೆಯೇ ಎಂಬುದನ್ನು ರಾಜ್ಯ ಸರ್ಕಾರ ಖಚಿತಪಡಿಸಬೇಕಿದೆ ಎಂದು ‘ದಿ ಹಿಂದೂ’ ವರದಿ ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರ ಬಜೆಟ್‌ | ಕರ್ನಾಟಕಕ್ಕಿಲ್ಲ ವಿಶೇಷ ಯೋಜನೆ; ಆಯವ್ಯಯದ ಮುಖ್ಯಾಂಶಗಳು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ (ಜುಲೈ 23)ರಂದು...

ಕೇಂದ್ರ ಬಜೆಟ್ | ಬಿಹಾರ ರಸ್ತೆಗಳಿಗೆ ₹26,000 ಕೋಟಿ; ಶಿಕ್ಷಣ, ಉದ್ಯೋಗ, ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ

ಮೂರನೇ ಅವಧಿಗೆ ಸರ್ಕಾರ ರಚಿಸಿರುವ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ...

ಶ್ರೀಲಂಕಾ ಜಲ ಗಡಿಯಲ್ಲಿ ಮೀನುಗಾರಿಕೆ ನಡೆಸಿದ ಆರೋಪ: ಒಂಬತ್ತು ಭಾರತೀಯ ಮೀನುಗಾರರ ಬಂಧನ

ಶ್ರೀಲಂಕಾ ಜಲ ಗಡಿಯಲ್ಲಿ ಮೀನುಗಾರಿಕೆ ನಡೆಸಿದ ಆರೋಪ ಮಂಗಳವಾರ ಮುಂಜಾನೆ ಡೆಲ್ಫ್ಟ್...