ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಅತ್ಯಂತ ಭೀಕರ ಘಟನೆಯೊಂದು ವರದಿಯಾಗಿದೆ. ತನ್ನ ಪ್ರಿಯತಮೆಗೆ ಪೋಷಕರು ಬೇರೊಬ್ಬ ಯುವಕನೊಂದಿಗೆ ವಿವಾಹ ನಿಶ್ಚಯ ಮಾಡಿದರು ಎಂಬ ಕಾರಣಕ್ಕೆ ರೊಚ್ಚಿಗೆದ್ದ ಯುವಕನೊಬ್ಬ, ಆಕೆಯನ್ನು ಒಂದು ಸಾವಿರ ಅಡಿ ಆಳದ ಕಮರಿಗೆ ತಳ್ಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪ್ರಿಯಕರನ ಈ ಪೈಶಾಚಿಕ ಕೃತ್ಯಕ್ಕೆ 23 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ತನ್ನ ಪ್ರಾಣ ಕಳೆದುಕೊಂಡಿದ್ದಾಳೆ.
ಕೊಲೆಯಾದ ಯುವತಿಯನ್ನು ಗಾರ್ಗೋಟಿ ಮೂಲದ ತರನ್ನುಮ್ ನಾಯಕ್ (23) ಎಂದು ಗುರುತಿಸಲಾಗಿದೆ. ಈಕೆ ಸ್ಥಳೀಯ ಕಾಲೇಜೊಂದರಲ್ಲಿ ಮೂರನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು. ಕೊಲೆಗೈದ ಆರೋಪಿ ಶ್ರೀಪಾದ್ ವದರ್ (25) ಈಕೆಯ ಪ್ರಿಯಕರ. ಇವರಿಬ್ಬರು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆರೋಪಿ ಶ್ರೀಪಾದ್, ಗುತ್ತಿಗೆದಾರನಾಗಿರುವ ತನ್ನ ಸಹೋದರನ ಜೊತೆ ಸೇರಿ ಕೆಲಸ ಮಾಡುತ್ತಿದ್ದನು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಟುಂಬಸ್ಥರು ತರನ್ನುಮ್ ವಿವಾಹವನ್ನು ಬೇರೊಬ್ಬ ಯುವಕನೊಂದಿಗೆ ನಿಶ್ಚಯ ಮಾಡಿದ್ದು, ನವೆಂಬರ್ 12ರಂದು ಮದುವೆ ದಿನಾಂಕ ನಿಗದಿಯಾಗಿತ್ತು. ಈ ವಿಚಾರ ತಿಳಿದು ಆಕ್ರೋಶಗೊಂಡಿದ್ದ ಶ್ರೀಪಾದ್, ಅಕ್ಟೋಬರ್ 9ರಂದು ಭೇಟಿಯಾಗುವ ನೆಪದಲ್ಲಿ ಆಕೆಯನ್ನು ಭುದರಗಡ ತಾಲೂಕಿನ ನಾಯ್ಕವಾಡಿ ಜಲಪಾತದ ಬಳಿ ಕರೆದೊಯ್ದಿದ್ದಾನೆ. ಅಲ್ಲಿ ನಿಶ್ಚಿತಾರ್ಥದ ವಿಚಾರವಾಗಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೋಪಗೊಂಡ ಆರೋಪಿ, ಆಕೆಯನ್ನು ಜಲಪಾತದ ಕೆಳಗಿರುವ 1000 ಅಡಿ ಆಳದ ಪ್ರಪಾತಕ್ಕೆ ತಳ್ಳಿ ಹತ್ಯೆಗೈದಿದ್ದಾನೆ.
ಕೊಲೆ ಮಾಡಿದ ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿದ ಆರೋಪಿ, ಯುವತಿ ನಾಪತ್ತೆಯಾಗಿದ್ದಾಳೆ ಎಂದು ನಾಟಕವಾಡಿದ್ದಾನೆ. ಆದರೆ ಆತನ ಗೊಂದಲಮಯ ಹೇಳಿಕೆಗಳ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗೂ ಸಹ್ಯಾದ್ರಿ ರಕ್ಷಣಾ ಪಡೆಯ ಸಿಬ್ಬಂದಿ, ಪ್ರಪಾತದಲ್ಲಿ ಹುಡುಕಾಟ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.
ತಕ್ಷಣವೇ ಆರೋಪಿ ಶ್ರೀಪಾದ್‌ನನ್ನು ಬಂಧಿಸಿರುವ ಪೊಲೀಸರು ಭಾನುವಾರ ಆತನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಕೋರ್ಟ್ ಆತನನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಹೆಚ್ಚಿನ ತನಿಖೆ ಹಾಗೂ ಸಾಕ್ಷ್ಯ ಸಂಗ್ರಹಕ್ಕಾಗಿ ಕೊಲೆಯಾದ ಯುವತಿ ಮತ್ತು ಆರೋಪಿಯ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದ್ದು, ಫೊರೆನ್ಸಿಕ್ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಅಧಿಕೃತ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಮದುವೆಗೆ ಕೆಲವೇ ದಿನಗಳು ಬಾಕಿಯಿರುವಾಗ ನಡೆದ ಈ ಬರ್ಬರ ಹತ್ಯೆಯು ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗಾರ್ಗೋಟಿ ಗ್ರಾಮದ ನಿವಾಸಿಗಳು ಪೊಲೀಸ್ ಠಾಣೆ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಈ ಪ್ರಕರಣವನ್ನು ತ್ವರಿತಗತಿಯ ನ್ಯಾಯಾಲಯದಲ್ಲಿ (ಫಾಸ್ಟ್-ಟ್ರ್ಯಾಕ್ ಕೋರ್ಟ್) ನಡೆಸಿ ಆರೋಪಿಗೆ ಗರಿಷ್ಠ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಭಾನುವಾರದಂದು ಯುವತಿಯ ಹುಟ್ಟೂರಾದ ಪಾಟ್ಗಾಂವ್ ಗ್ರಾಮದಲ್ಲಿ ಆಕೆಯ ಅಂತ್ಯಕ್ರಿಯೆ ನೆರವೇರಿತು.





