ಜಂತರ್ ಮಂತರ್ ಪ್ರತಿಭಟನೆಗೂ ಮುನ್ನ ಕಸ್ಟಡಿಗೆ ಪಡೆಯಲಾಗಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ದೆಹಲಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನನ್ನ ತಂದೆಗೆ ಕರೆ ಮಾಡಿ ನಾನು ಸುದೀರ್ಘ ಕಾಲ ಜೈಲಿಗೆ ಹೋಗಲಿದ್ದೇನೆ ಎಂದು ತಿಳಿಸುವಂತೆ ಪೊಲೀಸರು ನಡುರಾತ್ರಿ ಒತ್ತಾಯಿಸಿದ್ದರು” ಎಂದು ದೀಪ್ಕೆ ಗಂಭೀರ ಆರೋಪ ಮಾಡಿದ್ದಾರೆ.
ದೀಪ್ಕೆ ಅವರ ಅಜ್ಜಿ ನಿಧನರಾದಾಗ ಪೊಲೀಸರು ಮಾನವೀಯತೆಯಿಂದ ನಡೆದುಕೊಂಡಿದ್ದರು ಮತ್ತು ಅವರು ಮನೆಗೆ ಮರಳಲು ನಿರಾಕರಿಸಿದ್ದರು ಎಂಬುದನ್ನು ತೋರಿಸಲು ದೆಹಲಿ ಪೊಲೀಸರು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ಈ ವಿಡಿಯೋಗೆ ಪ್ರತಿಕ್ರಿಯೆಯಾಗಿ ದೀಪ್ಕೆ ಎಕ್ಸ್ (X) ಜಾಲತಾಣದಲ್ಲಿ ತಮ್ಮ ಆಕ್ಷೇಪಣೆಯನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅಜ್ಜಿ ನಿಧನ
“ತಮ್ಮ ತಾಯಿಯನ್ನು ಕಳೆದುಕೊಂಡು ಶೋಕದಲ್ಲಿದ್ದ ನನ್ನ ತಂದೆಗೆ ರಾತ್ರಿ 3:30ಕ್ಕೆ ಕರೆ ಮಾಡಿ, ಮಗ ದೀರ್ಘಕಾಲ ಜೈಲಿಗೆ ಹೋಗುತ್ತಿದ್ದಾನೆ ಎಂದು ತಿಳಿಸಲು ಪೊಲೀಸರು ಹೇಳಿದರು. ನನ್ನ ಕುಟುಂಬಕ್ಕೆ ಇನ್ನೆಷ್ಟು ಮಾನಸಿಕ ಹಿಂಸೆ ನೀಡಲು ಹೊರಟಿದ್ದರು?” ಎಂದು ದೀಪ್ಕೆ ಪ್ರಶ್ನಿಸಿದ್ದಾರೆ.
ದೆಹಲಿ ಪೊಲೀಸರು ಬಿಡುಗಡೆ ಮಾಡಿರುವ ವಿಡಿಯೋ ಅಪೂರ್ಣವಾಗಿದೆ. ವಕೀಲರನ್ನು ಸಂಪರ್ಕಿಸಲು ಮತ್ತು ಅಜ್ಜಿ ಮನೆಯಲ್ಲಿರುವ ಸೋದರಸಂಬಂಧಿಯ ದೂರವಾಣಿ ಸಂಖ್ಯೆ ಪಡೆಯಲು ತಮ್ಮ ಮೊಬೈಲ್ ಬಳಸಲು ಕೇಳಿಕೊಂಡ ಭಾಗವನ್ನು ವಿಡಿಯೋದಿಂದ ಎಡಿಟ್ ಮಾಡಿ ತೆಗೆದುಹಾಕಲಾಗಿದೆ ಎಂದು ದೀಪ್ಕೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಪ್ರತಿಭಟನೆ ನಡೆಸುವುದಿಲ್ಲವೆಂದು ಯಾವುದೇ ಬಾಂಡ್‌ಗೆ ಸಹಿ ಹಾಕಿಲ್ಲ: ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ಸ್ಪಷ್ಟನೆ
ಕಸ್ಟಡಿಯಿಂದ ಬಿಡುಗಡೆಯಾದ ಬಳಿಕ ದೀಪ್ಕೆ ಅವರು ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದಾರೆ. ಸಿಜೆಪಿ ತನ್ನ ಪ್ರತಿಭಟನೆಯನ್ನು ಮುಂದುವರಿಸಲಿದೆ ಎಂದು ತಿಳಿಸಿದೆ.
ಇನ್ನೊಂದೆಡೆ, ದೆಹಲಿ ಪೊಲೀಸ್ ಡಿಸಿಪಿ ನೇಹಾ ಯಾದವ್ ಅವರು ಮಾತನಾಡಿ, “ದೀಪ್ಕೆ ಅವರಿಗೆ ಅಜ್ಜಿಯ ನಿಧನದ ಸುದ್ದಿ ತಲುಪಿಸಿದಾಗ, ಅತ್ಯಂತ ಸಂವೇದನಾಶೀಲವಾಗಿ ನಡೆದುಕೊಳ್ಳಲಾಗಿದೆ. ಮನೆಗೆ ಮರಳಲು, ವಿಮಾನ ಪ್ರಯಾಣಕ್ಕೆ ಅಥವಾ ಕುಟುಂಬದವರ ಜೊತೆ ಮಾತನಾಡಲು ಸಹಕರಿಸುವುದಾಗಿ ಹೇಳಿದರೂ, ದೀಪ್ಕೆ ಸ್ವತಃ ಅದನ್ನು ನಿರಾಕರಿಸಿದರು” ಎಂದಿದ್ದಾರೆ.





