ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಅಲಿಗಂಜ್ ಪ್ರದೇಶದಲ್ಲಿ ಸೋಮವಾರ ಭೀಕರ ಅಗ್ನಿ ಅವಘಡದಲ್ಲಿ ಸಂಭವಿಸಿದೆ. ದುರಂತದಲ್ಲಿ ಕನಿಷ್ಠ 14 ಜನರು ಜೀವ ಕಳೆದುಕೊಂಡಿದ್ದಾರೆ. ಸುಮಾರು ವಾಣಿಜ್ಯ ಮಳಿಗೆಗಳನ್ನು ಹೊಂದಿದ್ದ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ.
ಪ್ರದೇಶದ ಉಷಾ ಮೆಹ್ತಾ ಮಾರ್ಗದಲ್ಲಿರುವ ಈ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು, ದಟ್ಟ ಹೊಗೆ ಆವರಿಸಿಕೊಂಡಿದೆ. ಇದು ಸ್ಥಳೀಯ ನಿವಾಸಿಗಳಲ್ಲಿ ಮತ್ತು ಕಟ್ಟಡದ ಒಳಗಿದ್ದವರಲ್ಲಿ ತೀವ್ರ ಆತಂಕ ಹಾಗೂ ಭೀತಿಯನ್ನು ಸೃಷ್ಟಿಸಿದೆ. ಪ್ರಾಣಭಯದಿಂದ ಜನರು ಕಟ್ಟಡದ ಕಿಟಕಿಗಳಿಂದ ಕೆಳಗೆ ಜಿಗಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ನಾಗರಿಕ ರಕ್ಷಣಾ ತಂಡಗಳು ಜಂಟಿಯಾಗಿ ತೀವ್ರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸದ್ಯ, ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಆದಾಗ್ಯೂ ಕಟ್ಟಡವನ್ನು ತಣ್ಣಗಾಗಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.



