“ಬಿಜೆಪಿಗೆ ರಾಜ್ಯಸಭೆಯ ಮೂರನೇ ಸೀಟನ್ನು ಗೆಲ್ಲಲು ಕಾನೂನುಬದ್ಧವಾಗಿ 10 ಶಾಸಕರ ಕೊರತೆಯಿತ್ತು. ಆದರೂ ಅವರು 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು. ನೇರ ಮಾರ್ಗದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದೇ ಬಿಜೆಪಿ ಈ ದುಷ್ಟ ಯೋಜನೆ ರೂಪಿಸಿತ್ತು. ಹಣದ ಬಲ ಮತ್ತು ಒತ್ತಡದ ತಂತ್ರಗಳ ಮೂಲಕ ಚುನಾವಣಾ ಫಲಿತಾಂಶವನ್ನು ಬದಲಾಯಿಸಲು ಮೊದಲೇ ಪಿತೂರಿ ರೂಪಿಸಲಾಗಿತ್ತು” ಎಂದು ಹಿರಿಯ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಹೇಳಿದ್ದಾರೆ.
ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆಗೆ ತಮ್ಮ ನಾಮಪತ್ರ ತಿರಸ್ಕೃತಗೊಂಡ ನಂತರ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಹೈದರಾಬಾದ್‌ನ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಭಾರತೀಯ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ: ಅಹೋರಾತ್ರಿ ಧರಣಿ ಕೂತ ಕಾಂಗ್ರೆಸ್
ತಮ್ಮ ವಿರುದ್ಧ ಬಳಸಲಾದ ದಾಖಲೆಗಳನ್ನು ಕಾಂಗ್ರೆಸ್ ನಾಯಕರೇ ಬಿಜೆಪಿಗೆ ಒದಗಿಸಿದ್ದಾರೆ ಎಂಬ ಮಧ್ಯಪ್ರದೇಶ ಬಿಜೆಪಿ ನಾಯಕರ ಹೇಳಿಕೆಗಳನ್ನು ನಟರಾಜನ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. “ಕಾಂಗ್ರೆಸ್ ಪಕ್ಷವು ಒಗ್ಗಟ್ಟಾಗಿದೆ. ಇದು ಬಿಜೆಪಿಯ ನಕಲಿ ಪಿತೂರಿ ಸಿದ್ಧಾಂತ. ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಈ ವದಂತಿಯನ್ನು ಹರಡುತ್ತಿದೆ” ಎಂದು ಹೇಳಿದ್ದಾರೆ.
“ನಮ್ಮ ಪಕ್ಷದ ಸದಸ್ಯರು ಹೋಗಿ ನಾಮಪತ್ರವನ್ನು ರದ್ದುಗೊಳಿಸಲಿಲ್ಲ. ಅದನ್ನು ರದ್ದುಗೊಳಿಸಿದ್ದು ಚುನಾವಣಾ ಅಧಿಕಾರಿ. ಅಷ್ಟಕ್ಕೂ ಇದು ಕ್ರಿಮಿನಲ್ ಪ್ರಕರಣವಲ್ಲ, ಆದರೆ ಕೇವಲ ಕಾನೂನು ಸೂಚನೆ ಎಂಬುದು ಚುನಾವಣಾ ಅಧಿಕಾರಿಗೆ ಚೆನ್ನಾಗಿ ತಿಳಿದಿತ್ತು. ಹಾಗಿದ್ದಾಗ ನಾಮಪತ್ರವನ್ನು ತಿರಸ್ಕರಿಸಿದ್ದು ಯಾಕೆ” ಎಂದು ಪ್ರಶ್ನಿಸಿದ್ದಾರೆ.
10 ಶಾಸಕರ ಕೊರತೆಯಿದ್ದರೂ ಮೂರನೇ ನಾಮಪತ್ರ!
“ಮಧ್ಯಪ್ರದೇಶ ವಿಧಾನಸಭೆಯ ಶಾಸಕರ ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ ಮೂರು ರಾಜ್ಯಸಭಾ ಸ್ಥಾನಗಳು ಖಾಲಿ ಇತ್ತು. ಅವುಗಳಲ್ಲಿ ಎರಡು ಬಿಜೆಪಿಗೆ ಹೋಗುವ ನಿರೀಕ್ಷೆಯಿತ್ತು. ಮೂರನೇ ಸ್ಥಾನಕ್ಕೆ, ಅಭ್ಯರ್ಥಿಗೆ 58 ಶಾಸಕರ ಬೆಂಬಲ ಅಗತ್ಯವಿತ್ತು. ಕಾಂಗ್ರೆಸ್ 62 ಶಾಸಕರನ್ನು ಹೊಂದಿತ್ತು. ಹಾಗಾಗಿ ಮೂರನೇ ಸ್ಥಾನವನ್ನು ಕಾಂಗ್ರೆಸ್ ಸುಲಭವಾಗಿ ಭದ್ರಪಡಿಸಿಕೊಳ್ಳಬಹುದಿತ್ತು. ಅದರಂತೆ ನನ್ನನ್ನು ಪಕ್ಷ ಆಯ್ಕೆ ಮಾಡಿತು. ನಾನು ನಾಮಪತ್ರ ಸಲ್ಲಿಸಿದೆ. ಎಲ್ಲ ನಾಯಕರು ಒಗ್ಗಟ್ಟು ಪ್ರದರ್ಶಿಸಿ ನಾಮಪತ್ರ ಸಲ್ಲಿಸಿದೆವು”
“ಮೂರನೇ ಸ್ಥಾನ ಗೆಲ್ಲಲು 58 ಮತಗಳು ಬೇಕಿತ್ತು. ಆದರೆ ಬಿಜೆಪಿ ಬಳಿ ಇದ್ದದ್ದು ಕೇವಲ 48 ಶಾಸಕರ ಬಲ. ಆದರೂ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಹರಿಯಾಣ ಮತ್ತು ಜಾರ್ಖಂಡ್‌ನಲ್ಲಿ ಈ ಹಿಂದೆ ನಡೆಸಿದಂತೆ ಅಡ್ಡ ಮತದಾನ ಮಾಡಿಸುವುದು, ಬೆದರಿಕೆ ಹಾಕಿಸುವುದು, ಇತರೆ ತಂತ್ರಗಳನ್ನು ಬಿಜೆಪಿ ಪ್ರಯತ್ನಿಸಿತು. ಅವೆಲ್ಲವೂ ವಿಫಲವಾದಾಗ ಕೊನೆಗೆ ಚುನಾವಣಾ ಆಯೋಗದೊಂದಿಗೆ ಪಿತೂರಿ ಮಾಡಿತು. ಗೆಲ್ಲುವ ಸಾಧ್ಯತೆ ಇಲ್ಲ ಎಂದು ತಿಳಿದಿದ್ದರೂ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಚುನಾವಣಾ ಅಧಿಕಾರಿಯಿಂದ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ವಜಾ ಮಾಡಿಸಿ, ಕೊನೆಗೆ ಅವಿರೋಧವಾಗಿ ಆಯ್ಕೆಯಾಯಿತು” ಎಂದು ಬಿಜೆಪಿಯ ತಂತ್ರಗಾರಿಕೆಯನ್ನು ವಿವರಿಸಿದ್ದಾರೆ.
ಪರಿಶೀಲನೆಯ ವೇಳೆ ಹಾಜರಿದ್ದವರ ಬಗ್ಗೆ ಅನುಮಾನ!
ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ ಸರ್ಕಾರಿ ಯಂತ್ರೋಪಕರಣಗಳ ಬಳಕೆಯ ಬಗ್ಗೆಯೂ ಗಂಭೀರ ಆರೋಪವನ್ನು ಮೀನಾಕ್ಷಿ ನಟರಾಜನ್ ಮಾಡಿದ್ದಾರೆ. “ಪರಿಶೀಲನೆಯ ಸಮಯದಲ್ಲಿ ಹಲವಾರು ಬಿಜೆಪಿ ನಾಯಕರು ಚುನಾವಣಾಧಿಕಾರಿಯ ಕೊಠಡಿಯೊಳಗೆ ಇದ್ದರು. ಆದರೆ ಮಾಜಿ ಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥರು ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಪ್ರವೇಶ ನಿರಾಕರಿಸಲಾಗಿತ್ತು” ಎಂದು ದೂರಿದ್ದಾರೆ. ಕಾಂಗ್ರೆಸ್ ನಾಯಕರು ಪ್ರತಿಭಟಿಸಿ ಕೊಠಡಿಯನ್ನು ಪ್ರವೇಶಿಸಿದ ನಂತರ, ಜಿಲ್ಲಾಧಿಕಾರಿ ಮತ್ತು ಆಯುಕ್ತರು ಇದ್ದಕ್ಕಿದ್ದಂತೆ ಅಲ್ಲಿಗೆ ಬಂದರು ಎಂದಿದ್ದಾರೆ.
“ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಆಯುಕ್ತರ ಪಾತ್ರವನ್ನು ಕಾನೂನು ಗುರುತಿಸುತ್ತದೆ. ಆದರೆ ರಾಜ್ಯಸಭಾ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಅವರಿಗೆ ಯಾವುದೇ ಆಡಳಿತಾತ್ಮಕ ಪಾತ್ರವಿಲ್ಲ. ಅವರು ಆರ್‌ಒ ಕಚೇರಿಯಲ್ಲಿ ಏನು ಮಾಡುತ್ತಿದ್ದರು” ಎಂದು ಪ್ರಶ್ನಿಸಿದ್ದಾರೆ. ಇಬ್ಬರೂ ಚುನಾವಣಾಧಿಕಾರಿಗಳು ರಾಜಿ ಮಾಡಿಕೊಂಡಿದ್ದಾರೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ ಎಂದು ನಟರಾಜನ್ ಹೇಳಿದ್ದಾರೆ.
ಈ ಇಡೀ ಬೆಳವಣಿಗೆಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದಲ್ಲಿ ನಡೆಯುತ್ತಿದೆ ಎಂದು ಪದೇ ಪದೇ ಹೇಳುತ್ತಿರುವ “ಮತ ಕಳ್ಳತನ” ಮತ್ತು “ಸೀಟು ಕಳ್ಳತನ” ಎಂಬ ಆರೋಪಗಳನ್ನು ಸಾಬೀತುಪಡಿಸಿದೆ ಎಂದು ನಟರಾಜನ್ ಪ್ರತಿಪಾದಿಸಿದ್ದಾರೆ.




